ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕಿನಲ್ಲಿರುವ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಯಲ್ಲಿ ನಡೆಯುತ್ತಿರುವ ಜಟಾಪಟಿಯು ಸರ್ಕಾರಕ್ಕೆ ಬಿಸಿತುಪ್ಪವಾಗಿದೆ. ದೇಗುಲ ಕಾರ್ಯನಿರ್ವಾಣಾಧಿಕಾರಿಯನ್ನು ಮತ್ತೊಮ್ಮೆ ವರ್ಗಾವಣೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಈ ಸಂಬಂಧ ಬೆಂಗಳೂರಿನಲ್ಲಿ ನಾಳೆ (ಮೇ 9) ಆರ್ಎಸ್ಎಸ್ ಪ್ರಮುಖರ ಸಭೆ ನಡೆಯಲಿದೆ. ಪ್ರಸ್ತುತ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆರ್ಎಸ್ಎಸ್ ಬೆಂಬಲಿತ ಆಡಳಿತ ಮಂಡಳಿಯೇ ಅಧಿಕಾರದಲ್ಲಿದೆ.
ದೇಗುಲದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಅವರನ್ನು ಈಗಾಗಲೇ ಒಮ್ಮೆ ವರ್ಗಾವಣೆ ಮಾಡಿ, ತಡೆಹಿಡಿಯಲಾಗಿದೆ. ಸಚಿವ ಎಸ್.ಅಂಗಾರ ಕಡೆಯಿಂದ ಆಡಳಿತ ಮಂಡಳಿ ವರ್ಗಾವಣೆ ಮಾಡಿಸಿತ್ತು. ಆದರೆ ಸ್ಥಳೀಯರು ಮುಖ್ಯಮಂತ್ರಿ ಬಳಿ ದೂರು ನೀಡಿ ವರ್ಗಾವಣೆ ಆದೇಶವನ್ನು ರದ್ದು ಮಾಡಿಸಿದ್ದರು. ಈ ಜಟಾಪಟಿಯಲ್ಲಿ ಆರ್ಎಸ್ಎಸ್ಗೆ ಹಿನ್ನಡೆ ಆಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಾಳೆ ನಡೆಯಬಹುದು ಎನ್ನಲಾಗಿರುವ ಆರ್ಎಸ್ಎಸ್ ಮುಖಂಡರ ಸಭೆ ನಡೆಯಲಿದೆ.
ಕುಕ್ಕೆ ದೇಗುಲಕ್ಕೆ ಹರಿದು ಬಂದ ಭಕ್ತಸಾಗರ
ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳಗಳಿಗೆ ಭಕ್ತರ ಸಂಚಾರ ಹೆಚ್ಚಾಗುತ್ತಿದೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಶಾಲಾ-ಕಾಲೇಜುಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ವಸತಿ ನಿಲಯಗಳು ತುಂಬಿದ್ದರಿಂದ ಕಳೆದ ಸೋಮವಾರ ಭಕ್ತರು ರಸ್ತೆಯಲ್ಲೇ ಮಲಗಿದ್ದ ಫೋಟೊ ಮತ್ತು ವಿಡಿಯೊ ವೈರಲ್ ಆಗಿತ್ತು. ಕೊರೊನಾ ಪಿಡುಗು ಕಾಣಿಸಿಕೊಳ್ಳುವುದಕ್ಕೆ ಮೊದಲೂ ಸಹ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದೇ ರೀತಿ ಜನಸಂದಣಿ ನೆರೆಯುತ್ತಿತ್ತು. ಆದರೆ ಕೊರೊನಾ ಕಾಣಿಸಿಕೊಂಡ ನಂತರ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು.
ಭಕ್ತರು ರಸ್ತೆಯಲ್ಲಿ ಮಲಗುವ ಪರಿಸ್ಥಿತಿ ಕುರಿತು ಸ್ಪಷ್ಟನೆ ನೀಡಿರುವ ದೇಗುಲ ಸಮಿತಿಯು ಭಕ್ತರಿಗೆ ದೇಗುಲದ ವಸತಿಗೃಹಗಳಲ್ಲಿ ಕೊಠಡಿ ನೀಡಲಾಗುತ್ತಿದೆ. ಕೊಠಡಿಗಳು ಭರ್ತಿಯಾದ ನಂತರ ಆದಿಸುಬ್ರಹ್ಮಣ್ಯ ದೇಗುಲದ ಬಳಿ ಇರುವ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮತ್ತು ಷಣ್ಮುಖ ಪ್ರಸಾದ ಭೋಜನ ಶಾಲೆಯ ಮೇಲ್ಮಹಡಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಭಕ್ತರ ಸಂಖ್ಯೆ ಹೆಚ್ಚಾದ್ದರಿಂದ ಇಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಹೆಚ್ಡಿ ದೇವೇಗೌಡ ದಂಪತಿಯಿಂದ ತುಲಾಭಾರ ಸೇವೆ; ವಿಡಿಯೋ ನೋಡಿ
ಇದನ್ನೂ ಓದಿ: ‘ಕೆಜಿಎಫ್: ಚಾಪ್ಟರ್ 2’ ರಿಲೀಸ್ ಹೊಸ್ತಿಲಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವರ ದರ್ಶನ ಪಡೆದ ಯಶ್