ಹಿಂದೂ ಸಂಘಟನೆಗಳ ಅರ್ಜಿ ವಜಾ ಕೋರಿ ಅರ್ಜಿ ಸಲ್ಲಿಸಿದ ಮಳಲಿ ಮಸೀದಿ ಆಡಳಿತ ಮಂಡಳಿ; ಮೇ 31ಕ್ಕೆ ಕೋರ್ಟ್​ನಲ್ಲಿ ವಿಚಾರಣೆ

| Updated By: sandhya thejappa

Updated on: May 29, 2022 | 3:12 PM

ಮಳಲಿಯ ದರ್ಗಾ ಆಡಳಿತ ಮಂಡಳಿ ಮಂಗಳೂರಿನ 3ನೇ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ತಾಂತ್ರಿಕ ಕಾರಣ ನೀಡಿ ಹಿಂದೂ ಸಂಘಟನೆಗಳ ಅರ್ಜಿ ವಜಾಕ್ಕೆ ಕೋರಿ ಮಸೀದಿ ಆಡಳಿತ ಅರ್ಜಿ ನೀಡಿದೆ.

ಹಿಂದೂ ಸಂಘಟನೆಗಳ ಅರ್ಜಿ ವಜಾ ಕೋರಿ ಅರ್ಜಿ ಸಲ್ಲಿಸಿದ ಮಳಲಿ ಮಸೀದಿ ಆಡಳಿತ ಮಂಡಳಿ; ಮೇ 31ಕ್ಕೆ ಕೋರ್ಟ್​ನಲ್ಲಿ ವಿಚಾರಣೆ
ಮಂಗಳೂರಿನ ದರ್ಗಾ ನವೀಕರಣದ ವೇಳೆ ಹಿಂದೂ ಶೈಲಿಯ ದೇವಸ್ಥಾನ ಪತ್ತೆಯಾಗಿದೆ
Follow us on

ಮಂಗಳೂರು: ಮಳಲಿಯ (Malali) ದರ್ಗಾದಲ್ಲಿ ದೇಗುಲದ (Temple) ಕುರುಹು ಪತ್ತೆಯಾಗಿರುವ ಹಿನ್ನೆಲೆ ಹಿಂದೂ ಸಂಘಟನೆಗಳು ಮಸೀದಿಯನ್ನು ಬಿಟ್ಟುಕೊಡುವಂತೆ ಒತ್ತಾಯಿಸಿವೆ. ಈ ಬೆನ್ನಲ್ಲೆ ಮಳಲಿಯ ದರ್ಗಾ ಆಡಳಿತ ಮಂಡಳಿ ಮಂಗಳೂರಿನ 3ನೇ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ತಾಂತ್ರಿಕ ಕಾರಣ ನೀಡಿ ಹಿಂದೂ ಸಂಘಟನೆಗಳ ಅರ್ಜಿ ವಜಾಕ್ಕೆ ಕೋರಿ ಮಸೀದಿ ಆಡಳಿತ ಅರ್ಜಿ ನೀಡಿದೆ. ಅರ್ಜಿ ವಜಾ ಬಗ್ಗೆ ಮೇ 31ರಂದು ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ಮಳಲಿಯ ದರ್ಗಾ ಪ್ರದೇಶ ವಕ್ಫ್ ಆಸ್ತಿಯಾಗಿರುವ ಹಿನ್ನೆಲೆ ಹಿಂದೂ ಸಂಘಟನೆಗಳ ಅರ್ಜಿ ವಜಾಕ್ಕೆ ಮನವಿ ಮಾಡಿದೆ.

ವಿವಾದ ಏನು?
ಮಂಗಳೂರಿನಲ್ಲಿ ನವೀಕರಣಕ್ಕಾಗಿ ದರ್ಗಾ ಕೆಡವಿದಾಗ ಹಿಂದೂ ಶೈಲಿಯ ದೇವಸ್ಥಾನ ಪತ್ತೆಯಾಗಿತ್ತು. ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾದಲ್ಲಿ ಗುಡಿಯೊಂದು ಪತ್ತೆಯಾಗಿತ್ತು. ನವೀಕರಣದ ವೇಳೆ ದರ್ಗಾ ಮುಂಭಾಗ ಕೆಡವಲಾಗಿತ್ತು. ದರ್ಗಾದ ಹಿಂಭಾಗದಲ್ಲಿ ದೇವಸ್ಥಾನದ ಕಲಶ, ತೋಮರ, ಕಂಬಗಳ ಮಾದರಿ ಪತ್ತೆಯಾಗಿತ್ತು. ಈ ಬೆನ್ನಲ್ಲೇ ಹಿಂದೂ ಸಂಘಟನೆಗಳು ಜಾಗ ಬಿಟ್ಟುಕೊಡುವಂತೆ ಆಗ್ರಹಿಸಿವೆ.

ಇದನ್ನೂ ಓದಿ: ಸಿದ್ದರಾಮಯ್ಯ ಅವರಿಂದಲೇ ಕರ್ನಾಟಕ ಕಾಂಗ್ರೆಸ್​ ಮುಕ್ತ ಆಗಲಿದೆ: ನಳಿನ್ ಕುಮಾರ್ ಕಟೀಲ್

ಕೇರಳದ ಪ್ರಖ್ಯಾತ ಜ್ಯೋತಿಷಿ ಹೇಳಿದ್ದೇನು?
ವಿವಾದಕ್ಕೆ ಕಾರಣವಾಗಿದ್ದ ಮಳಲಿಯ ಮಸೀದಿ  ಸ್ಥಳದಲ್ಲಿ ಮೇ 25ಕ್ಕೆ ತಾಂಬೂಲ ಪ್ರಶ್ನೆ ನಡೆಸಲಾಗಿದೆ. ತಾಂಬೂಲ ಪ್ರಶ್ನೆ ವೇಳೆ ಕೇರಳದ ಪ್ರಖ್ಯಾತ ಜ್ಯೋತಿಷಿ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಕೆಲ ಮಾಹಿತಿ ನೀಡಿದ್ದು, ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ ಎಂದಿದ್ದಾರೆ. ಸಾಮಾನ್ಯ ತಾಂಬೂಲ ಪ್ರಶ್ನೆಯಲ್ಲಿ ಪೂರ್ಣವಾದ ಚೈತನ್ಯವಿದೆ. ನಾವು ಪ್ರಾರ್ಥಿಸಿ ಇಟ್ಟ ರಾಶಿಯಲ್ಲಿ ದೇವರು ಇರುವುದು ನಿಜ. ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿತ್ತು ಎಂದು ತಿಳಿಯುತ್ತೆ. ಇದು ದೈವ ಸಾನ್ನಿಧ್ಯ ಇದ್ದಂತಹ ಸ್ಥಳ. ತಾಂಬೂಲ ಪ್ರಶ್ನೆಯಲ್ಲಿ ಹಿಂದೂ ಧಾರ್ಮಿಕ ಸ್ಥಳ ಎಂದು ಉತ್ತರ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಮುಸಲ್ಮಾನರಿಗೂ ಒಳ್ಳೆಯದಾಗುತ್ತದೆ- ಗೋಪಾಲಕೃಷ್ಣ ಪಣಿಕ್ಕರ್:
ಮುಂದುವರಿದು ಮಾತನಾಡಿದ ಅವರು, ಇಲ್ಲಿನ ಸಾನ್ನಿಧ್ಯಕ್ಕೆ ಯಾವುದೋ ಒಂದು ಮಠದಲ್ಲಿ ಪೂಜಿಸಲ್ಪಡುತ್ತಿದೆ. ಈ ಕ್ಷೇತ್ರದ ಉತ್ತರ ದಿಕ್ಕಿನಲ್ಲಿ ಗುರುವೊಬ್ಬ ತಪಸ್ಸು ಮಾಡಿದ ಕ್ಷೇತ್ರವು ಇದೆ. ಯಾವುದೋ ಒಂದು ಸಂಘರ್ಷದ ಕಾಲಘಟ್ಟದಲ್ಲಿ ಈ ಕ್ಷೇತ್ರ ಕಳೆದುಹೋಗಿದೆ. ಶೈವ ವೈಷ್ಣವ ಸಂಘರ್ಷದ ಕಾರಣದಿಂದ ಹೀಗಾಗಿರಬಹುದು. ರಾಮಾಯಣದಲ್ಲಿ ರಾಕ್ಷಸರಲ್ಲಿ ಒಳ್ಳೆಯವರೂ ಇದ್ದರು. ಯಾವುದೇ ಒಂದು ಸಮುದಾಯದಲ್ಲಿ ಎಲ್ಲರೂ ಕೆಟ್ಟವರಾಗಿರುವುದಿಲ್ಲ. ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದರೆ ಮುಸಲ್ಮಾನರಿಗೂ ಒಳ್ಳೆಯದಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Sun, 29 May 22