ದಕ್ಷಿಣ ಕನ್ನಡ, ಡಿ.19: ಪತ್ನಿ ಕಣ್ಣು ಕಚ್ಚಿ ಮಾಂಸ ಹೊರಬರುವಂತೆ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ ಧರ್ಮಸ್ಥಳ ಪೊಲೀಸರು(Police) ಬಂಧಿಸಿದ್ದಾರೆ. ದಕ್ಷಿಣ ಕನ್ನಡ(Dakshina Kannada)ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಕಂಠಪೂರ್ತಿ ಕುಡಿದು ಮನೆಗೆ ಬಂದ ಆರೋಪಿ ಪತಿ ಸುರೇಶ್ ಗೌಡ(55), ತನ್ನ ಹೆಂಡತಿ ಮೋಹಿನಿ(55) ಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಗಾಯಗೊಳಿಸಿದ್ದ ವಿಕೃತ ಘಟನೆ ನಡೆದಿತ್ತು. ಬಳಿಕ ಪರಾರಿಯಾಗಿ ಮನೆಯ ಹತ್ತಿರದ ತೋಟದಲ್ಲಿ ಅಡಗಿ ಕುಳಿತ್ತಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ (ಡಿ.18) ರಾತ್ರಿ 12 ಗಂಟೆ ಸುಮಾರಿಗೆ ಸುರೇಶ್ ಗೌಡ, ಕಂಠ ಪೂರ್ತಿ ಕುಡಿದು ತೇಲಾಡುತ್ತ ಮನೆಗೆ ಬಂದಿದ್ದಾನೆ. ಈ ವೇಳೆ ಪತ್ನಿ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ್ದ. ಮದ್ಯದ ಅಮಲಿನಲ್ಲಿದ್ದ ಆತ, ಪತ್ನಿ ಜೊತೆ ಜಗಳವಾಡಿ ಆಕೆಯ ಕಣ್ಣು ಕಚ್ಚಿ, ನಂತರ ಮುಖದ ಎಡಭಾಗದ ಮಾಂಸ ಕಚ್ಚಿ ತೆಗೆದಿದ್ದಾನೆ. ಪತ್ನಿ ಕಣ್ಣು ಮತ್ತು ಮುಖದ ಎಡಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಉಜಿರೆಯ ಆಸ್ಪತ್ರೆಗೆ ಸೇರಿಸಲಾಗಿದೆ.
ಇದನ್ನೂ ಓದಿ:ಮಂಗಳೂರು; ಪತ್ನಿಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಹಲ್ಲೆ ಮಾಡಿ ಎಸ್ಕೇಪ್ ಆದ ಪತಿ
ಆರೋಪಿ ಸುರೇಶ್ ಗೌಡ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಕೋಟೆಬಾಗಿಲಿನ ಮೋಹಿನಿ ಎಂಬುವವರನ್ನು ಕಳೆದ 22 ವರ್ಷದ ಹಿಂದೆ ಮದುವೆಯಾಗಿದ್ದ. ಜೊತೆಗೆ ಶಿಶಿಲದಲ್ಲಿಯೇ ಮೋಹಿನಿ ತಂದೆಯವರು ಕೊಟ್ಟ ಜಾಗದಲ್ಲಿ ದಂಪತಿ ವಾಸವಾಗಿದ್ದು, ಸುರೇಶ್ ಕೂಲಿ ಕೆಲಸ ಮಾಡುತ್ತಿದ್ದ. ಇನ್ನು ಕೇವಲ ಪತ್ನಿಯ ಮೇಲೆ ಅಷ್ಟೇ ಅಲ್ಲ, ಮಗಳ ಮೇಲೆಯೋ ಹಲ್ಲೆ ನಡೆಸಿದ್ದು, ಆಕೆಗೂ ಗಾಯಗಳಾಗಿವೆ. ಸದ್ಯ ತಾಯಿ-ಮಗಳನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದ ಹಿನ್ನಲೆ ಇದೀಗ ಆರೋಪಿ ಸುರೇಶ್ನನ್ನು ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ