ಮಂಗಳೂರು ಆ್ಯಸಿಡ್ ದಾಳಿ: ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ

| Updated By: Rakesh Nayak Manchi

Updated on: Mar 05, 2024 | 10:42 PM

ನಿನ್ನೆ ಮಂಗಳೂರಿನ ಕಡಬ ತಾಲೂಕಿನ ಸರ್ಕಾರಿ ಕಾಲೇಜಿನಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಇಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ್ದಾರೆ. ಆ್ಯಸಿಡ್ ದಾಳಿಗೆ ಒಳಗಾದ ಮೂವರು ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಮಂಗಳೂರು ಆ್ಯಸಿಡ್ ದಾಳಿ: ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ
ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ
Follow us on

ಮಂಗಳೂರು, ಮಾರ್ಚ್.05: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರ್ಕಾರಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ (Acid Attack) ನಡೆದಿದೆ. ಸದ್ಯ ವಿದ್ಯಾರ್ಥಿನಿಯರು (Students) ದಾಖಲಾಗಿರುವ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿದ್ದಾರೆ. ಸಂತ್ರಸ್ಥ ವಿದ್ಯಾರ್ಥಿನಿಯರು ಮಂಗಳೂರು ನಗರದ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಡಾ.ನಾಗಲಕ್ಷ್ಮೀ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ್ದಾರೆ. ಸಂತ್ರಸ್ಥ ವಿದ್ಯಾರ್ಥಿನಿಯರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಆ್ಯಸಿಡ್ ಸಂತ್ರಸ್ತರ ಭೇಟಿ ಬಳಿಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಮಾತನಾಡಿದ್ದು, ಸಂತ್ರಸ್ತ ಯುವತಿಯರು ನನ್ನಲ್ಲಿ ಭಾವುಕಾಗಿ ಮಾತನಾಡಿದ್ರು. ಅವರು ಪರೀಕ್ಷೆ ಬಗ್ಗೆನೇ ಕೇಳ್ತಾ ಇದ್ರು. ನಾನು ಒಬ್ಬಳು ತಾಯಿ ನನಗೆ ಅರ್ಥ ಆಗುತ್ತೆ. ಮಕ್ಕಳ ಮಾನಸಿಕ ಸ್ಥಿತಿ ಗತಿ ಹೇಗಿರುತ್ತೆ ಎಂದು. ಶಿಕ್ಷಣ ಸಚಿವರನ್ನ ಇಂದು ನಾನು ಭೇಟಿಯಾಗುತ್ತೇನೆ. ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡುತ್ತೇವೆ. ಆ್ಯಸಿಡ್ ದಾಳಿಯಿಂದ ಆದ ಗಾಯದ ಗಂಭೀರತೆ ಮೇಲೆ ಚಿಕಿತ್ಸೆ ನಿರ್ಧಾರವಾಗುತ್ತೆ. ಸರಕಾರ ಪೊಲೀಸ್ ಇಲಾಖೆಯಿಂದ ಏನೇನು ಪರಿಹಾರ ಬೇಕೋ ಅದನ್ನ ಕೊಡಿಸುತ್ತೇವೆ. ಎರಡು ವಾರದ ನಂತರ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗಬಹುದು. ಇಬ್ಬರು ಮಕ್ಕಳಿಗೆ ಮಾಡಬೇಕಾಗುತ್ತೆ. ಪ್ಲಾಸ್ಟಿಕ್ ಬಾಟಲ್ ನಲ್ಲಿ ಆ್ಯಸಿಡ್ ತಂದಿದ್ದರಿಂದ ಯುವತಿಯರು ಬಚಾವ್ ಆಗಿದ್ದಾರೆ. ಗ್ಲಾಸ್ ಬಾಟಲ್ ನಲ್ಲಿ ಎರಚಿದ್ದರೆ ಗಾಯಗಳು ಗಂಭೀರವಾಗುತ್ತಿತ್ತು. ಇಂದು ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸುತ್ತೇನೆ. ತಕ್ಷಣ ಪರಿಹಾರವಾಗಿ ತಲಾ ನಾಲ್ಕು ಲಕ್ಷ ಸರಕಾರದಿಂದ ಕೊಡಿಸುತ್ತೇವೆ. ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ವ್ಯವಸ್ಥೆ ಮಾಡುತ್ತೇವೆ ಎಂದರು.

ಇದನ್ನೂ ಓದಿ: Burger Love Story: ಬರ್ಗರ್ ಕೊಟ್ಟು 20 ವರ್ಷದ ಯುವತಿಯನ್ನು ಮದುವೆಯಾದ ವ್ಯಕ್ತಿ

ದ್ವಿತೀಯ ಪರೀಕ್ಷೆ ಇದ್ದಿದ್ದರಿಂದ ಮೂವರು ವಿದ್ಯಾರ್ಥಿನಿಯರು ಬೆಳಗ್ಗೆ 10 ಗಂಟೆಯಲ್ಲಿ ಕಾಲೇಜು ಆವರಣದ ಧ್ವಜ ಕಟ್ಟೆಯಲ್ಲಿ ಓದುತ್ತಾ ಕುಳಿತಿದ್ದರು. ಮಾಸ್ಕ್ ಹಾಗೂ ಟೋಪಿ ಧರಿಸಿ ಬಂದ ಕೇರಳ ಮೂಲದ ಅಬಿನ್ ಎಂಬಾತ ಏಕಾಏಕಿ ವಿದ್ಯಾರ್ಥಿನಿಯರ ಮೇಲೆ ಆಸಿಡ್ ಎರಚಿ, ಸ್ಥಳದಿಂದ ಪರಾರಿಯಾಗಿದ್ದ. ಸುಟ್ಟ ಗಾಯದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯರನ್ನು ತಕ್ಷಣ ಕಡಬ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಓರ್ವ ವಿದ್ಯಾರ್ಥಿನಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಟ್ರೀಟ್‌ಮೆಂಟ್‌ಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಗಳೂರಿನಲ್ಲಿ ದಾಖಲಿಸಲಾಗಿರೋ ವಿದ್ಯಾರ್ಥಿನಿ ಮುಖಕ್ಕೆ ಆ್ಯಸಿಡ್ ಬಿದ್ದಿದ್ದು, ಇನ್ನಿಬ್ಬರು ವಿದ್ಯಾರ್ಥಿನಿಯರ ಕೈಗೆ ಶೇಕಡ 10 ರಿಂದ 12ರಷ್ಟು ಗಾಯಗಳಾಗಿವೆ.

ಕೃತ್ಯವೆಸಗಿ ಪರಾರಿಯಾಗಿದ್ದ ಅಬಿನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ವಿದ್ಯಾರ್ಥಿನಿಯೊಬ್ಬರಿಗೆ ಪರಿಚಯಸ್ಥನಾಗಿದ್ದ. ಘಟನೆ ನಡೆದು ಒಂದು ಗಂಟೆಯಲ್ಲಿಯೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ರಿಷ್ಯಂತ್ ತಿಳಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಬೇಕಾಗಿದ್ದ ಮೂವರು ವಿದ್ಯಾರ್ಥಿನಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಬಂದಿದೆ.

23 ವರ್ಷದ ಎಂಬಿಎ ವಿದ್ಯಾರ್ಥಿ ಆಗಿರುವ ಆರೋಪಿ ಅಬೀನ್​ಗೆ ಯುವತಿ ಮೇಲೆ ಲವ್ ಆಗಿತ್ತು. ಆದ್ರೆ ಆ ವಿದ್ಯಾರ್ಥಿನಿ ತಾನಾಯ್ತು ತನ್ನ ಪಾಡಾಯ್ತು ಅಂತಾ ಸುಮ್ಮನಿದ್ದಳು. ಆ ವಿದ್ಯಾರ್ಥಿನಿಯ ತಾಯಿಯ ಮನೆ ಅಬೀನ್ ಮನೆ ಸಮೀಪದಲ್ಲಿತ್ತು. ಹೀಗೆ ಈಕೆಯ ಮೇಲೆ ಅಬೀನ್ ಕಣ್ಣಾಕಿದ್ದ. ಈಕೆಯ ಹಿಂದೆ ಪ್ರೀತಿ ಪ್ರೇಮ ಅಂತಾ ಬಿದ್ದಿದ್ದ. ಆದ್ರೆ ಅದನ್ನ ವಿದ್ಯಾರ್ಥಿನಿ ನಿರಾಕರಿಸಿದ್ದಳು. ಇದ್ರಿಂದ ಕೋಪಗೊಂಡ ಅಬೀನ್ ಆಕೆಯ ಕಾಲೇಜಿಗೆ ಹೋಗಿ ಆಕೆ ಮೇಲೆ ಆ್ಯಸಿಡ್ ಹಾಕಿದ್ದ. ಇದ್ರಿಂದ ಅಕ್ಕಪಕ್ಕದಲ್ಲಿ ಕುಳಿತಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೂ ಆ್ಯಸಿಡ್ ಎಗರಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:32 am, Tue, 5 March 24