
ಮಂಗಳೂರು, ಜನವರಿ 22: ಎಂಸಿಎಫ್ ಅಂದರೆ Mangaluru chemical and Fertilizer. ಮಂಗಳೂರಿನ (Mangaluru) ಪಣಂಬೂರಿನಲ್ಲಿ ಕಳೆದ 55 ವರ್ಷದಿಂದ ಇದೇ ಹೆಸರಿನಲ್ಲಿ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಇದೀಗ ಕಾರ್ಖಾನೆಯ ಹೆಸರು ಬದಲಾವಣೆ ಆಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹೆಸರು ಬದಲಾವಣೆ ಮಾಡದಂತೆ ಆಡಳಿತ ಮಂಡಳಿಗೆ ಹೇಳಿದರೂ ಖ್ಯಾರೆ ಅನ್ನುತ್ತಿಲ್ಲ. ಹೀಗಾಗಿ ಜನ ಪ್ರತಿನಿಧಿಗಳು, ಸಾರ್ವಜನಿಕರು ಹೋರಾಟಕ್ಕೆ ಮುಂದಾಗಿದ್ದಾರೆ.
ಎಂಸಿಎಫ್ ಕಾರ್ಖಾನೆ 1971ರಲ್ಲಿ ಮಂಗಳೂರಿನಲ್ಲಿ ಆರಂಭವಾಗಿದೆ. ಕೆಮಿಕಲ್ಸ್ ಮತ್ತು ರಸಗೊಬ್ಬರ ಉತ್ಪಾದನೆ ಮಾಡುವ ಈ ಕಾರ್ಖಾನೆಗೆ 55 ವರ್ಷಗಳೇ ಕಳೆದಿವೆ. ಇದರಲ್ಲಿ 15 ವರ್ಷ ಸರ್ಕಾರಿ, 35 ವರ್ಷ ಖಾಸಗಿ ಒಡೆತನದಲ್ಲಿದ್ದರೂ Manglore chemical & Fertilizer ಎಂಬ ಹೆಸರು ಮಾತ್ರ ಬದಲಾಗಿರಲಿಲ್ಲ. ಆದರೆ ಕಳೆದ ಆರು ತಿಂಗಳುಗಳಿಂದ 55 ವರ್ಷದಿಂದ ಇದ್ದ ಕಾರ್ಖಾನೆಯ ಹೆಸರಿಗೆ ಇದೀಗ ತಿಲಾಂಜಲಿ ಇಡಲಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕುಸಿತ: ಉಡುಪಿ-ಮಂಗಳೂರಿನ ಈ ಎಲ್ಲ ಕಾಲೇಜುಗಳು ಕ್ಲೋಸ್
ಕಂಪನಿಯ ಹೆಚ್ಚಿನ ಷೇರು ಪಡೆದ ಒಡಿಶಾ ಮೂಲದ ಪ್ಯಾರಾದೀಪ್ ಪಾಸ್ಫೇಟ್ ಕಂಪನಿ ಅರ್ಧ ಶತಮಾನದ ಹೆಸರನ್ನು ಅಳಿಸಿ ‘ಪ್ಯಾರಾದೀಪ್ ಪಾಸ್ಫೇಟ್ ಕಂಪನಿ’ ಎಂದು ಹೆಸರು ಬದಲಾವಣೆ ಮಾಡಿದೆ. ಆ ಮೂಲಕ ಮಂಗಳೂರಿಗರ ಕೆಂಗಣ್ಣಿಗೆ ಕಾರಣವಾಗಿದೆ. ಮಂಗಳೂರಿನ ಮಣ್ಣು, ಗಾಳಿ, ನೀರು, ಹಣ ಎಲ್ಲವೂ ಬೇಕು ಆದರೆ ಹೆಸರು ಮಾತ್ರ ಇಲ್ಲಿಯದ್ದು ಬೇಡ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
1976ರಲ್ಲಿ ಎಂಸಿಎಫ್ ಕಂಪನಿ ಅಮೋನಿಯಾ ಮತ್ತು ಯೂರಿಯಾ ಉತ್ಪಾದನೆಯನ್ನು ಆರಂಭಿಸಿತ್ತು. ಆ ಬಳಿಕ ವಿದ್ಯುತ್ ಅಭಾವದಿಂದ ಕಂಪನಿ ನಷ್ಟಕ್ಕೆ ಸಿಲುಕಿತ್ತು. ನಷ್ಟದ ನಡುವೆಯೇ 1991ರಲ್ಲಿ ಆಡಳಿತವನ್ನು ವಿಜಯ ಮಲ್ಯ ನೇತೃತ್ವದ ಯುಬಿ ಕಂಪನಿ ವಹಿಸಿಕೊಂಡಿತ್ತು. ಅಲ್ಲಿಂದ ಮತ್ತೆ ಏಳುಬೀಳುಗಳನ್ನು ಕಂಡ ಕಂಪನಿ 2015 ರಿಂದ ಉತ್ತಮ ಲಾಭದೊಂದಿಗೆ ಪ್ಯಾರಾದೀಪ್ ಕಂಪನಿ ಷೇರುಗಳನ್ನು ಪಡೆದುಕೊಂಡಿದೆ. ಆದರೆ ಪ್ಯಾರಾದೀಪ್ ಕಂಪನಿ ಹಿಡಿತ ಸಾಧಿಸುತ್ತಿದ್ದಂತೆಯೇ ಮೂಲ ಹೆಸರನ್ನೇ ಬದಲಾವಣೆ ಮಾಡಿದೆ.
ಕಂಪನಿ 35 ವರ್ಷ ಷೇರು ಒಡೆತನದಲ್ಲಿದ್ದರೂ ಹೊಸ ಬಂಡವಾಳವನ್ನು ಕಂಪನಿ ಮಾಡಿಲ್ಲ. ಎಂಸಿಎಫ್ ತನ್ನ ಸ್ವಂತ ಆದಾಯ ಮತ್ತು ಬ್ಯಾಂಕ್ ಸಹಕಾರದೊಂದಿಗೆ ಅಭಿವೃದ್ಧಿ ಹೊಂದಿದೆ. ಶೇಕಡಾ 90 ಉದ್ಯೋಗಗಳು ಸ್ಥಳೀಯರಿಗೆ ಮತ್ತು ರಾಜ್ಯದ ಯುವ ಜನತೆಗೆ ಮೀಸಲಾಗಿದ್ದರೂ ಇದೀಗ ಅರ್ಧದಷ್ಟು ಉದ್ಯೋಗವನ್ನು ಕಡಿತಗೊಳಿಸಲಾಗಿದೆ. ಈ ಅನ್ಯಾಯದ ವಿರುದ್ಧ ಎಂಸಿಎಫ್ ಕಂಪನಿಯ ಮಾಜಿ ಉದ್ಯೋಗಿಗಳು ಸಿಡಿದೆದ್ದಿದ್ದಾರೆ.
ಎಂಸಿಎಫ್ ಹೆಸರು ಮಂಗಳೂರಿನ ಜೊತೆ ಐತಿಹಾಸಿಕ ಸಂಬಂಧವನ್ನು ಹೊಂದಿದೆ. ಇಲ್ಲಿನ ನೆಲದ ಅಸ್ಮಿತೆಯ ಗುರುತಾಗಿದೆ. ಮಂಗಳೂರಿನ ಜೊತೆಗೆ 55 ದಶಕಗಳ ಅನ್ಯೋನ್ಯ ಸಂಬಂಧ ಇಟ್ಟುಕೊಂಡಿದ್ದ ಕಂಪನಿ ಈಗ ಹೆಸರು ವಿಲೀನದ ಜೊತೆಗೆ ಅವಿನಾಭಾವ ಸಂಬಂಧ ಇತಿಹಾಸದ ಪುಟ ಸೇರಿದೆ. ಇದರ ವಿರುದ್ಧ ಹೋರಾಟಕ್ಕೆ ಜನಪ್ರತಿನಿಧಿಗಳು ಸಹ ಪಕ್ಷಾತೀತವಾಗಿ ಮುಂದಾಗಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ದೇವಾಲಯಗಳ ಆದಾಯದಲ್ಲಿ ಭಾರೀ ಏರಿಕೆ: ದಕ್ಷಿಣ ಕನ್ನಡದ ಈ ದೇಗುಲ ಫಸ್ಟ್
ಹೆಸರು ಬದಲಾವಣೆಯ ವಿರುದ್ದ ಆಕ್ರೋಶ ವ್ಯಕ್ತವಾಗಿರುವುದು ಕಂಪನಿಯ ಗಮನಕ್ಕೂ ಬಂದಿದೆ. ಹೀಗಾಗಿ ಮುಂದೆ Manglore chemical & Fertilizer ಹೆಸರನ್ನು ಸಹ ಹಾಕುವುದಾಗಿ ಹೇಳಿದೆ. ಮುಂದೆ ಈ ರೀತಿಯ ಕಂಪನಿಗಳ ಹೆಸರು ಬದಲಾವಣೆ ಮಾಡದಂತೆ ಪ್ರತ್ಯೇಕ ಮಸೂದೆ ತರುವ ಬಗ್ಗೆಯೂ ಪ್ರಯತ್ನಿಸುವುದಾಗಿ ಜನಪ್ರತಿನಿಧಿಗಳು ಹೇಳಿದ್ದಾರೆ. ನಾಮಫಲಕದಲ್ಲಿ ತಕ್ಷಣ ಹೆಸರನ್ನು ಬದಲಾಯಿಸಬೇಕೆಂದು ಆಗ್ರಹಗಳು ಜೋರಾಗಿದೆ. ಒಟ್ಟಿನಲ್ಲಿ ಹೆಸರು ಬದಲಾವಣೆಯ ವಿರೋಧ ಮಂಗಳೂರಿನಲ್ಲಿ ಆಕ್ರೋಶದ ಕಿಚ್ಚನ್ನು ಎಬ್ಬಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.