ದುಬೈನಲ್ಲಿ ಮಂಗಳೂರಿನ ಯುವತಿ ಸಾವು: ಕಂಪನಿ ಕ್ಯಾಬ್ ಮಿಸ್ ಆಗಿದ್ದಕ್ಕೆ ಸ್ವಂತ ಕಾರಿನಲ್ಲಿ ಹೋಗುವಾಗ ಸಂಭವಿಸಿತು ದುರಂತ

| Updated By: ರಮೇಶ್ ಬಿ. ಜವಳಗೇರಾ

Updated on: Feb 23, 2024 | 8:00 PM

ಯುವತಿ ಹೆಸರು ವಿದಿಶಾ ಅಂತ ಮೂಲತಃ ಮಂಗಳೂರಿನವರು. ಆದರೆ ಇವರು ದುಬೈನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆ ಅಷ್ಟೇ ಹೊಸ ಕಾರು ಖರೀಸಿದ್ದರು. ಇತ್ತ ಪೋಷಕರು ವಿದಿಶಾಳ ಮದುವೆಗೆ ತಯಾರಿ ನಡೆಸಿದ್ದರು. ಆದ್ರೆ, ವಿಧಿ ಆಟಕ್ಕೆ ವಿದಿಶಾ ಬಲಿಯಾಗಿದ್ದಾಳೆ. ಇದ್ದ ಏಕೈಕ ಪುತ್ರಿಯನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ದುಬೈನಲ್ಲಿ ಮಂಗಳೂರಿನ ಯುವತಿ ಸಾವು: ಕಂಪನಿ ಕ್ಯಾಬ್ ಮಿಸ್ ಆಗಿದ್ದಕ್ಕೆ ಸ್ವಂತ ಕಾರಿನಲ್ಲಿ ಹೋಗುವಾಗ ಸಂಭವಿಸಿತು ದುರಂತ
ವಿದಿಶಾ
Follow us on

ಮಂಗಳೂರು, (ಫೆಬ್ರವರಿ 23): ದುಬೈನಲ್ಲಿ (Dubai) ಸಂಭವಿಸಿದ ರಸ್ತೆ ಅಪಘಾತದಲ್ಲಿ (Road Accident) ಮಂಗಳೂರು (Mangaluru) ಮೂಲದ ಯುವತಿ ಮೃತಪಟ್ಟಿದ್ದಾಳೆ. ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ , ಕೋಟೆಕಾರಿನ ಬೀರಿಯ ಕೆಂಪುಮಣ್ಣು ನಿವಾಸಿ ರಾಜೀವಿ  ಅವರ ಏಕೈಕ ಪುತ್ರಿ ವಿದಿಶಾ (28) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಂಗಳೂರು ಮೂಲದ ವಿದಿಶಾ ದುಬೈನಲ್ಲಿ ವಾಸವಿದ್ದರು. ಪ್ರತಿ ದಿನ ಕಂಪನಿಗೆ ಕ್ಯಾಬ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ನಿನ್ನೆ(ಫೆಬ್ರವರಿ 22) ಕ್ಯಾಬ್ ತಪ್ಪಿದ ಕಾರಣಕ್ಕೆ ತಮ್ಮದೇ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಕಾರಿನ ನಿಯಂತ್ರಣ ತಪ್ಪಿದ್ದು ಡಿವೈಡ‌ರ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ವಿದಿಶಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು ಮತ್ತು ವಿಠಲ್ ಕುಲಾಲ್ ಕೆಂಪುಮಣ್ಣು ಅವರಿಗೆ ವಿದಿಶಾ ಏಕೈಕ ಪುತ್ರಿಯಾಗಿದ್ದಳು. ಪ್ರತಿಭಾನ್ವಿತರಾಗಿದ್ದ ವಿದಿಶಾ ವಿದ್ಯಾರ್ಥಿ ದಿಸೆಯಲ್ಲೇ ರೋಟರಿ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ವಿದಿಶಾ ಸಹ್ಯಾದ್ರಿ ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದ ವಿದಿಶಾ, 2019ರಲ್ಲಿ ದುಬೈ ತೆರಳಿ ಎಕ್ಸ್ಕ್ಯೂಜೆಟ್‍ನಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ದುಬೈನಲ್ಲಿ ವಾಹನ ಚಾಲನಾ ಲೈಸೆನ್ಸ್ ಪಡೆದ ಬಳಿಕ ಕಳೆದ ಆರು ತಿಂಗಳ ಹಿಂದೆ ಹೊಸ ಕಾರು ಖರೀದಿಸಿದ್ದರು. ಇತ್ತ ತಂದೆ ತಾಯಿ ವಿದಿಶಾಳ ಮದುವೆಯ ಸಿದ್ಧತೆ ನಡೆಸುತ್ತಿದ್ದರು. ಆದ್ರೆ, ವಿಧಿ ವಿದಿಶಾಳನ್ನ ಬಲಿಪಡೆದುಕೊಂಡಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೊಂದು ಭೀಕರ ಅಪಘಾತ; ಸ್ಥಳದಲ್ಲೇ ಐವರು ದುರ್ಮರಣ

ಪ್ರದಕ್ಷಿಣೆ ಹಾಕುವಾಗ ಕುಸಿದುಬಿದ್ದು ವಿದೇಶಿ ಪ್ರಜೆ ಸಾವು

ಭಟ್ಕಳ: ಭಾರತ ಪ್ರವಾಸಕ್ಕೆಂದು ಬಂದಿದ್ದ ರಷ್ಯಾದ ಪ್ರಜೆಯೊರ್ವರು ಮುರ್ಡೇಶ್ವರದ ದೇಗುಲದಲ್ಲಿ ಪ್ರದಕ್ಷಿಣೆ ಹಾಕುತ್ತಿರುವಾಗಲೇ ಏಕಾಏಕಿ ಕುಸಿದುಬಿದ್ದು ಮೃತಪಟ್ಟಿದ್ದಾರೆ. ರಷ್ಯಾ ದೇಶದ ಅಲೇಕ್ಷಾಂಡರ್ ತನೆಗಾ( 71) ಮೃತಪಟ್ಟ ವ್ಯಕ್ತಿ. ಅಲೆಗ್ಸಾಂಡರ್ ತನೆಗಾ ಮೂವರು ಸ್ನೇಹಿತರೊಂದಿಗೆ ಗೋವಾ, ಮುರ್ಡೇಶ್ವರಕ್ಕೆಂದು ಬಂದಿದ್ದರು. ಮೊದಲಿಗೆ ಗೋವಾದಲ್ಲಿ ಸುತ್ತಾಡಿ ಬಳಿಕ ಅಲ್ಲಿಂದ ಮುರ್ಡೇಶ್ವರಕ್ಕೆ ಆಗಮಿಸಿದ್ದರು. ಬಳಿಕ ಶಿವನ ದರ್ಶನಕ್ಕೆಂದು ದೇವಸ್ಥಾನಕ್ಕೆ ತೆರಳಿ ಪ್ರದಕ್ಷಿಣೆ ಹಾಕುತ್ತಿದ್ದಾಗಲೇ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಪರಿಣಾಮ ಸ್ಥಳದಲ್ಲೇ ಕುಸಿದುಬಿದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Fri, 23 February 24