ಗೂಡ್ಸ್ ವಾಹನದಲ್ಲಿ ಗಾಂಜಾ ಸಾಗಾಟ: ಫಿಲ್ಮಿ ಸ್ಟೈಲ್ನಲ್ಲಿ ಖಾಕಿ ರೇಡ್ ; ಇಬ್ಬರು ಅರೆಸ್ಟ್
ದಕ್ಷಿಣ ಕನ್ನಡ ಪೊಲೀಸರು ಡ್ರಗ್ಸ್ ದಂಧೆಕೋರರ ವಿರುದ್ಧ ಬಿರುಸಿನ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಪುತ್ತೂರು ತಾಲೂಕಿನಲ್ಲಿ ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ 106 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಇತ್ತೀಚೆಗೆ ಮಂಗಳೂರು ಸಿಸಿಬಿ 4 ಕೋಟಿ ರೂ. ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡು ಉಗಾಂಡ ಮಹಿಳೆಯನ್ನು ಬೆಂಗಳೂರಲ್ಲಿ ಬಂಧಿಸಿದ್ದು ಭಾರೀ ಸುದ್ದಿಯಾಗಿತ್ತು.

ಮಂಗಳೂರು, ಜನವರಿ 20: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಡ್ರಗ್ಸ್ ದಂಧೆಕೋರರ ಹುಟ್ಟಡಗಿಸುತ್ತಿದ್ದು, ಒಂದೊಂದೇ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದ ಮಂಗಳೂರು ಸಿಸಿಬಿ, 4 ಕೋಟಿ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ಸಮೇತ ಉಗಾಂಡ ಮೂಲದ ಮಹಿಳೆಯನ್ನು ಬೆಂಗಳೂರಿನಲ್ಲಿ ಬಂಧಿಸಿತ್ತು. ಆ ಬೆನ್ನಲ್ಲೇ ಇದೀಗ ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಭಾರೀ ಪ್ರಮಾಣದ ಗಾಂಜಾವನ್ನು ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಸಜಂಕಾಡಿ ಎಂಬಲ್ಲಿ ಸೀಜ್ ಮಾಡಿದೆ.
ಸುಮಾರು 106 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು ಇದರ ಮೌಲ್ಯ ಸುಮಾರು 53 ಲಕ್ಷ ರೂಪಾಯಿಗಳು ಎನ್ನಲಾಗಿದೆ. ಪ್ರಕರಣ ಸಂಬಂಧ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ನಿವಾಸಿಗಳಾದ ಅಬ್ದುಲ್ ಸಾದಿಕ್ (37) ಮತ್ತು ರಫೀಕ್ ಪಿ. (37) ಎಂಬವರನ್ನು ಬಂಧಿಸಿದ್ದು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ದೇಗುಲಕ್ಕೆಂದು ಹೋದ ಬಾಲಕ ಕೆರೆಯಲ್ಲಿ ಹೆಣವಾಗಿ ಪತ್ತೆ; ಪ್ರಾಣಿ ದಾಳಿಯೋ? ಕೊಲೆಯೋ?
ನಿನ್ನೆಯೂ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ಕೇರಳ ಮೂಲದ ಯುವಕ ಜೂಡ್ ಮಾಥ್ಯೂ(20) ಎಂಬಾತನನ್ನು ಬಂಧಿಸಿದ್ದರು. ಕೇರಳದ ಎರ್ನಾಕುಲಂ ಮುತೊಲಪುರಂ ನಿವಾಸಿ ಜೂಡ್ ಮಾಥ್ಯೂ ಬೈಕ್ನಲ್ಲಿ ಎಂಡಿಎಂಎ ಸಾಗಿಸುತ್ತಿದ್ದಾಗ ಪದವು ಗ್ರಾಮದ ಕೈಲಾಸ ಕಾಲೋನಿ ಬಳಿ ದಾಳಿ ಮಾಡಿದ್ದ ಕದ್ರಿ ಪೊಲೀಸರು ಬೈಕ್ ಮತ್ತು ಮಾದಕ ವಸ್ತುವನ್ನು ಜಪ್ತಿ ಮಾಡಿದ್ದರು. ಸೀಜ್ ಮಾಡಲಾದ ವಸ್ತುಗಳ ಮೌಲ್ಯ 70 ಸಾವಿರ ಎನ್ನಲಾಗಿದ್ದು, ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲೆಯ ಆರು ಪೆಡ್ಲರ್ಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಬಂಧಿಸಿದ್ದರು. ಜಿಗಣಿ ಬಳಿ ಉಗಾಂಡದ ಮಹಿಳೆ ಜಲಿಯಾ ಝಲ್ವಾಂಗೋ ಅರೆಸ್ಟ್ ಮಾಡಲಾಗಿದ್ದು, ಆಕೆ ಬಳಿ ಇದ್ದ 4 ಕೋಟಿ ರೂ. ಮೌಲ್ಯದ MDMAಯನ್ನು ಪೊಲೀಸರು ಜಪ್ತಿ ಮಾಡಿದ್ದರು. ಸಿಸಿಬಿ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ನಡೆದಿದ್ದ ಈ ಕಾರ್ಯಾಚರಣೆ ರಾಜ್ಯಾದ್ಯಂತ ಸುದ್ದಿಯಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.