ಮನೆಗೆ ನುಗ್ಗಿ ಮೀನು, ಮಾಂಸದೂಟ ಕದಿಯೋ ಮಂಗನ ಕಾಟಕ್ಕೆ ಜನ ಹೈರಾಣು: ಮಂಗಳೂರಿನಲ್ಲೊಂದು ನಾನ್ ವೆಜ್ ಪ್ರಿಯ ಕೋತಿ!

Mangalore News: ಮಂಗಳೂರಿನಲ್ಲೊಂದು ಅಸಾಮಾನ್ಯ ಮಾಂಸಾಹಾರಿ ಕೋತಿ ನಿವಾಸಿಗಳ ನೆಮ್ಮದಿ ಕೆಡಿಸಿದೆ. ಮೀನು ಮಾಂಸದ ರುಚಿ ಹಿಡಿದಿರುವ ಈ ಕೋತಿ ಮನೆಗಳಿಗೆ ನುಗ್ಗಿ ಮಾಂಸದ ಅಡುಗೆಗಳನ್ನು ಕದಿಯುತ್ತದಂತೆ! ಸಿಗದಿದ್ದರೆ ಬಟ್ಟೆ, ಸಾಮಾನುಗಳನ್ನು ಸಹ ತೆಗೆದುಕೊಂಡು ಹೋಗುತ್ತದೆ. ನಾನ್ ವೆಜ್ ಪ್ರಿಯ ಕೋತಿಯ ಸೆರೆಗೆ ಇದೀಗ ಕೊನೆಗೂ ಅರಣ್ಯ ಇಲಾಖೆ ಮುಂದಾಗಿದೆ.

ಮನೆಗೆ ನುಗ್ಗಿ ಮೀನು, ಮಾಂಸದೂಟ ಕದಿಯೋ ಮಂಗನ ಕಾಟಕ್ಕೆ ಜನ ಹೈರಾಣು: ಮಂಗಳೂರಿನಲ್ಲೊಂದು ನಾನ್ ವೆಜ್ ಪ್ರಿಯ ಕೋತಿ!
ಪ್ರಾತಿನಿಧಿಕ ಚಿತ್ರ
Image Credit source: PTI

Updated on: Jun 23, 2026 | 2:27 PM

ಮಂಗಳೂರು, ಜೂನ್ 23: ಯಾತ್ರಾ ಸ್ಥಳಗಳಲ್ಲಿ ಅಥವಾ ಪ್ರವಾಸಿ ತಾಣಗಳಲ್ಲಿ ಮಂಗಗಳು ಜನರಿಂದ ಮೊಬೈಲ್, ವಾಟರ್ ಬಾಟಲ್ ಕಸಿದುಕೊಂಡು ಓಡಿಹೋಗುವ ಬಗ್ಗೆ ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋಗಳು ವೈರಲ್ ಆಗುತ್ತಿರುವುದನ್ನು ನೋಡಿರುತ್ತೇವೆ. ಆದರೆ, ಸಸ್ಯಾಹಾರಿಯಾಗಿಯೇ ಗುರುತಿಸಿಕೊಂಡಿರುವ ಮಂಗ (Monkey) ಮಾಂಸಹಾರಕ್ಕಾಗಿ ಮನೆಗೆ ನುಗ್ಗುವುದನ್ನು ಎಲ್ಲಾದರೂ ಕೇಳಿದ್ದೀರಾ? ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮಂಗಳೂರಿನ (Mangalore) ಮಣ್ಣಗುಡ್ಡೆ ಪ್ರದೇಶದಲ್ಲಿ ನಾನ್ ವೆಜ್ (Non Veg) ಪ್ರಿಯ ಕೋತಿಯೊಂದು ಮನೆಗಳಿಗೆ ನುಗ್ಗಿ ಮಾಂಸದೂಟ ಕದ್ದುಕೂಂಡು ಹೋಗುತ್ತಿದ್ದು, ಜನರ ನಿದ್ದೆಗೆಡಿಸಿದೆ. ಮೀನಿನಿಂದ ಮಾಡಿದ ಇದರ ಫೇವರೆಟ್ ಆಹಾರವಂತೆ!

ನಾನ್-ವೆಜ್ ಪ್ರಿಯ ಕೋತಿಯ ಕಾಟ ತಾಳಲಾರದೇ, ಮಂಗಳೂರಿನ ಮಣ್ಣಗುಡ್ಡೆಯ ಕಾಂತರಾಜ್ ಲೇನ್‌ನ ನಿವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಪೊಲೀಸರಿಗೆ ದೂರು ನೀಡಿದ್ದರು. ಅದ್ಯಾವುದೂ ಪ್ರಯೋಜನವಾಗಿಲ್ಲ. ಕಳೆದ ಎರಡು ವರ್ಷಗಳಿಂದ ನಾನ್ ವೆಜ್ ಪ್ರಿಯ ಕೋತಿಯ ಕಾಟ ತಾಳಲಾರದ ನಿವಾಸಿಗಳು ಇದೀಗ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಶಾಸಕರಿಗೂ ಪತ್ರ ಬರೆದು ಸಂಕಷ್ಟ ತೋಡಿಕೊಂಡಿದ್ದಾರೆ.

ಒಂಟಿ ಕೋತಿ ಮೀನು ಮತ್ತು ಮಾಂಸದ ರುಚಿಯನ್ನು ಬೆಳೆಸಿಕೊಂಡಿದ್ದು, ಈ ಪ್ರದೇಶವನ್ನು ನಿಯಮಿತ ಆವಾಸಸ್ಥಾನವನ್ನಾಗಿ ಮಾಡಿಕೊಂಡಿದೆ. ಮನೆಗಳಿಗೆ ನುಗ್ಗಿ, ಆಹಾರ, ಬಟ್ಟೆ ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ತೆಗೆದುಕೊಂಡು ಹೋಗಿ, ನಿವಾಸಿಗಳನ್ನು ಹೆದರಿಸುವ ಮೂಲಕ ಇದು ತೊಂದರೆ ಉಂಟುಮಾಡುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಮಾಂಸಾಹಾರದ ಘಮ ಬಂದಾಗಲೆಲ್ಲ ಮನೆಗೆ ನುಗ್ಗಲೆತ್ನಿಸುವ ಕೋತಿ

ಬಾಗಿಲು ತೆರೆದಿರುವಾಗಲೆಲ್ಲಾ ಕೋತಿ ಮನೆಗಳಿಗೆ ಪ್ರವೇಶಿಸುತ್ತದೆ. ಮಾಂಸಾಹಾರದ ಘಮ ಬಂದರೆ ಮನೆಗಳಿಗೆ ನುಗ್ಗಲು ಯತ್ನಿಸುತ್ತದೆ. ಮನೆಗಳಿಗೆ ನುಗ್ಗಿದರೆ ಬಟ್ಟೆ, ಆಹಾರ ಮತ್ತು ಸಿಕ್ಕಿದ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತದೆ. ಕಾಂತರಾಜ್ ಲೇನ್‌ನಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಮರಗಳಿದ್ದು, ಅವುಗಳಿಗೆ ತಾಗಿಕೊಂಡೇ ಅನೇಕ ಮನೆಗಳಿವೆ. ಕೋತಿ ಹೆಚ್ಚಾಗಿ ಈ ಮರಗಳಿಂದ ನೇರವಾಗಿ ಮನೆಗಳಿಗೆ ಜಿಗಿಯುತ್ತದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

ಸಾಕು ನಾಯಿಗಳ ಜತೆ ಫ್ರೆಂಡ್​ಶಿಪ್!

ಈ ಪ್ರದೇಶದಲ್ಲಿ ಕೆಲವು ಸಾಕು ನಾಯಿಗಳೊಂದಿಗೆ ಈ ಮಾಂಸಾಹಾರ ಪ್ರಿಯ ಕೋತಿ ಸ್ನೇಹ ಬೆಳೆಸಿಕೊಂಡಿದೆ. ಆದರೆ, ಮನೆಗಳಿಗೆ ನುಗ್ಗುವಾಗ ಬೊಗಳಿ ಅಡ್ಡಿಮಾಡಿದರೆ ಅವುಗಳ ಮೇಲೂ ದಾಳಿ ಮಾಡುತ್ತದೆ ಎಂದು ನಿವಾಸಿಗಳು ಹೇಳಿದ್ದಾರೆ. ಕೆಲವು ನಾಯಿಗಳ ಮೇಲೆ ದಾಳಿ ಮಾಡಿ ಅವುಗಳ ಬಾಲ, ಚರ್ಮಕ್ಕೆ ತರಚು ಗಾಯ ಮಾಡಿದೆ ಎಂದೂ ಅವರು ಹೇಳಿದ್ದಾರೆ.

ಮಹಿಳೆ ಮೇಲೆ ಕೋತಿ ದಾಳಿ

ಇತ್ತೀಚೆಗೆ ಕಾಂತರಾಜ್ ಲೇನ್‌ನ ನಿವಾಸಿ ಬಬಿತಾ ಎಂಬವರ ಮೇಲೆ ಈ ಕೋತಿ ದಾಳಿ ನಡೆಸಿತ್ತು. ಬಳಿಕ ವೈದ್ಯರ ಬಳಿಗೆ ಹೋಗಿ 12 ಇಂಜೆಕ್ಷನ್​ಗಳನ್ನು ತೆಗೆದುಕೊಳ್ಳಬೇಕಾಯಿತು. ಮಂಗಗಳ ದಾಳಿಯ ಬಗ್ಗೆ ಜಾಗರೂಕರಾಗಿರಲು ವೈದ್ಯರು ಸಲಹೆ ನೀಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳನ್ನು ನಮ್ಮನ್ನು ಸಮಸ್ಯೆಯಿಂದ ಪಾರುಮಾಡಬೇಕು ಎಂದು ಬಬಿತಾ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಟೋಲ್ ಕಟ್ಟಲ್ಲ ಅಂದ್ರೆ ಒನ್ ವೇ ನಲ್ಲಿ ನುಗ್ತೀರಾ?: ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ

ಮಕ್ಕಳು ಬೆಳಿಗ್ಗೆ ಶಾಲೆಗೆ ಹೋಗುವಾಗ ಅಥವಾ ಸಂಜೆ ಮನೆಗೆ ಹಿಂತಿರುಗಿದಾಗ ಕೋತಿ ಅವರನ್ನು ಬೆನ್ನಟ್ಟುತ್ತದೆ. ಇದರಿಂದ ಮಕ್ಕಳನ್ನು ಹೊರಗೆ ಕಳುಹಿಸುವುದೇ ಕಷ್ಟವಾಗಿದೆ ಎಂದು ಮಹಿಳೆಯರು ಅಳಲು ತೋಡಿದ್ದಾರೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಕೋತಿಯನ್ನು ಹಿಡಿಯಲು ಬೋನು ಮತ್ತು ಬಲೆಗಳನ್ನು ಅಳವಡಿಸಿ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:13 pm, Tue, 23 June 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us