ಮಂಗಳೂರು, ಡಿಸೆಂಬರ್ 27: 2025 ಹೊಸ ವರ್ಷ (New Year) ಸಂಭ್ರಮಾಚರಣೆಗೆ ದಿನಗಣನೆ ಶುರುವಾಗಿದೆ. ಪಬ್, ರೆಸಾರ್ಟ್, ಹೋಟೆಲ್, ಕ್ಲಬ್‌ಗಳಲ್ಲೂ ಆಚರಣೆಗೆ ಪ್ಲ್ಯಾನ್‌ಗಳು ಜೋರಾಗಿದೆ. ಈ ನಡುವೆ ಕಡಲನಗರಿ ಮಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮೊದಲೇ ಪಾರ್ಟಿ ಆಯೋಜನೆ ಮಾಡಲಾಗಿದ್ದು, ನ್ಯೂ ಇಯರ್ ನೆಪದಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿರುವುದಾಗಿ ಹಿಂದೂಪರ ಸಂಘಟನೆಗಳು ಆರೋಪ ಮಾಡಿವೆ.
ನ್ಯೂ ಇಯರ್ಗೆ ನಾಲ್ಕು ದಿನದ ಮೊದಲೇ ಅಂದರೆ ಇಂದು ಸಂಜೆ ಮಂಗಳೂರಿನ ಬೋಳಾರದ ಸಿಟಿ ಬೀಚ್ ನಲ್ಲಿ ಇಸ್ರೇಲ್ ಮೂಲದ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಡಿಜೆ ಪ್ಲೇಯರ್ ಸಜಂಕಾ ಕಾರ್ಯಕ್ರಮ ಆಯೋಜಿಸಲಾಗಿದೆ. ಹೊಸ ವರ್ಷದ ನೆಪದಲ್ಲಿ ಡ್ರಗ್ಸ್ ಪಾರ್ಟಿ ಮತ್ತು ಡಿಜೆ ಪ್ಲೇಯರ್ ಸಜಂಕಾ ಹಿಂದೂ ದೇವರ ಹಾಡುಗಳನ್ನು ವಿಚಿತ್ರವಾಗಿ ವಿಡಂಬಿಸಿದ್ದು, ಇದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಇಂದಿನ ಡಿಜೆ ಪಾರ್ಟಿಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಕಾರ್ಯಕ್ರಮಕ್ಕೆ ತಡೆ ನೀಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹೊಸ ವರ್ಷದ ಮಧ್ಯ ರಾತ್ರಿ ಬೆಂಗಳೂರಿನಲ್ಲಿ ಮಹಿಳೆಯರ ಸೇಫ್ಟಿಗೆ ಹೊಸ ಐಡಿಯಾ..!
ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಗೂ ಮನವಿ ನೀಡಿರುವ ಬಜರಂಗದಳ ಮತ್ತು ದುರ್ಗಾವಾಹಿನಿ ಸಂಘಟನೆಯ ಕಾರ್ಯಕರ್ತರು, ಇಂದು ಸಂಜೆ 6 ಗಂಟೆಗೆ ಪಾರ್ಟಿ ಆಯೋಜನೆಯ ಸ್ಥಳದಲ್ಲಿ ಪ್ರತಿಭಟನೆಗೂ ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಸಜಂಕಾ ಎಂದು ಬಜರಂಗದಳ ಮುಖಂಡ ಪುನೀತ್ ಅತ್ತಾವರ ಕರೆ ನೀಡಿದ್ದು, ಪ್ರತಿಭಟನೆ ಎದುರಿಸಲು ಸಿದ್ದರಾಗಿ ಎಂಬ ಸಂದೇಶ ರವಾನೆ ಮಾಡಲಾಗಿದೆ.
ವಿರೋಧದ ಬಗ್ಗೆ ವಿಹೆಚ್ಪಿ ಮುಖಂಡ ಪ್ರದೀಪ್ ಸರಿಪಲ್ಲ ಹೇಳಿಕೆ ನೀಡಿದ್ದು, ಹೊಸ ವರ್ಷದ ನೆಪದಲ್ಲಿ ಡಿಜೆ ಪಾರ್ಟಿ ಆಯೋಜನೆ ಮಾಡಲಾಗಿದೆ. ಇತ್ತೀಚೆಗೆ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 9 ಲಕ್ಷ ರೂ. ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆರೋಪಿಗಳು ಡ್ರಗ್ಸ್ನ್ನು ಹೊಸ ವರ್ಷದ ಪಾರ್ಟಿಗೆ ತಂದಿರುವುದಾಗಿ ಬಾಯ್ಬಿಟ್ಟಿದ್ದಾರೆ. ಈ ಪಾರ್ಟಿಗಳು ಡ್ರಗ್ಸ್ಗೆ ಉತ್ತೇಜನ ನೀಡುತ್ತಿದೆ. ಯುವಕರು ಡ್ರಗ್ಸ್ಗೆ ದಾಸರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಜಂಕಾ ಎಂಬ ವ್ಯಕ್ತಿಯು ಈ ಡಿಜೆ ಪಾರ್ಟಿಗೆ ಬರುವ ಬಗ್ಗೆ ಗಮನಕ್ಕೆ ಬಂದಿದೆ. ಈತನ ಪ್ರತಿಯೊಂದು ಹಾಡುಗಳು ಹಿಂದೂ ದೇವರನ್ನು, ಮಂತ್ರಗಳನ್ನು ಅವಹೇಳನ ಮಾಡುವುದಾಗಿದೆ. ಡ್ರಗ್ಸ್ಗೆ ಉತ್ತೇಜನ ಕೊಡುವ ಹಾಡುಗಳು ಹಾಕುತ್ತಾನೆ. ಹೀಗಾಗಿ ಯಾವುದೇ ಕಾರಣಕ್ಕೂ ಇಂತಹ ಡಿಜೆ ಪಾರ್ಟಿಗಳಿಗೆ ಅವಕಾಶ ಕೊಡಬಾರದು. ಸ್ಥಳೀಯರು ಸಹ ಈ ಬಗ್ಗೆ ಮನವಿ ಪತ್ರ ನೀಡಿದ್ದಾರೆ ಎಂದರು.
ಇದನ್ನೂ ಓದಿ: ಬೆಂಗಳೂರು ಹೊಸ ವರ್ಷಾಚರಣೆ: ಎಂಜಿ, ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮಾಚರಣೆಗಿಲ್ಲ ನಿರ್ಬಂಧ, ಪರಮೇಶ್ವರ್
ಪೊಲೀಸರು ಹಿರಿಯ ಅಧಿಕಾರಿಗಳ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ಸ್ಥಳೀಯರು ಶಾಂತಿ ಭಂಗ ಆಗುವ ಸಾಧ್ಯತೆ ಇದೆ ಎಂದು ಮನವಿ ನೀಡಿದ್ದಾರೆ. ಕಾನೂನಾತ್ಮಕವಾಗಿ ಪಾರ್ಟಿ ನಿಲ್ಲಿಸುವ ಪ್ರಯತ್ನ ಮಾಡುತ್ತೇವೆ. ಸ್ಥಳೀಯರು ಸಹ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಪೊಲೀಸರು ಸಂಘರ್ಷಕ್ಕೆ ಅವಕಾಶ ಕೊಡಲ ಎಂದು ತಿಳಿಸಿದ್ದಾರೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.