Cyber Fraud: ಅಪರಿಚಿತ ಲಿಂಕ್​ ಕ್ಲಿಕ್ ಮಾಡಿ 15 ಲಕ್ಷ ರೂ. ಕಳೆದುಕೊಂಡ ಮಂಗಳೂರಿನ ವ್ಯಕ್ತಿ

|

Updated on: Mar 16, 2023 | 4:56 PM

ಅಪರಿಚಿತರಿಂದ ಬರುವ ಸಂದೇಶಗಳು, ಲಿಂಕ್​​ಗಳನ್ನು ಕ್ಲಿಕ್ ಮಾಡಿ ಹಣ ಕಳೆದುಕೊಂಡ ಪ್ರಕರಣಗಳು ಕರ್ನಾಟಕದಾದ್ಯಂತ ಆಗಾಗ ವರದಿಯಾಗುತ್ತಿರುತ್ತವೆ. ಇದೀಗ ಮಂಗಳೂರಿನಲ್ಲಿ ಅಂಥದ್ದೇ ಒಂದು ಘಟನೆ ನಡೆದಿದ್ದು, ಅಪರಿಚಿತರಿಂದ ಪಾರ್ಟ್​ ಟೈಮ್ ಕೆಲಸ ನೀಡುವ ಭರವಸೆಯೊಂದಿಗೆ ಬಂದ ಲಿಂಕೊಂದನ್ನು ಕ್ಲಿಕ್ ಮಾಡಿದ ವ್ಯಕ್ತಿ 15 ಲಕ್ಷ ರೂ. ಕಳೆದುಕೊಂಡಿದ್ದಾರೆ.

Cyber Fraud: ಅಪರಿಚಿತ ಲಿಂಕ್​ ಕ್ಲಿಕ್ ಮಾಡಿ 15 ಲಕ್ಷ ರೂ. ಕಳೆದುಕೊಂಡ ಮಂಗಳೂರಿನ ವ್ಯಕ್ತಿ
ಸಾಂದರ್ಭಿಕ ಚಿತ್ರ
Follow us on

ಮಂಗಳೂರು: ಅಪರಿಚಿತರಿಂದ ಬರುವ ಸಂದೇಶಗಳು, ಲಿಂಕ್​​ಗಳನ್ನು ಕ್ಲಿಕ್ ಮಾಡಿ ಹಣ ಕಳೆದುಕೊಂಡ ಪ್ರಕರಣಗಳು ಕರ್ನಾಟಕದಾದ್ಯಂತ ಆಗಾಗ ವರದಿಯಾಗುತ್ತಿರುತ್ತವೆ. ಇದೀಗ ಮಂಗಳೂರಿನಲ್ಲಿ (Mangaluru) ಅಂಥದ್ದೇ ಒಂದು ಘಟನೆ ನಡೆದಿದ್ದು, ಅಪರಿಚಿತರಿಂದ ಪಾರ್ಟ್​ ಟೈಮ್ ಕೆಲಸ ನೀಡುವ ಭರವಸೆಯೊಂದಿಗೆ ಬಂದ ಲಿಂಕೊಂದನ್ನು (Malicious Link) ಕ್ಲಿಕ್ ಮಾಡಿದ ವ್ಯಕ್ತಿ 15 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸಂತ್ರಸ್ತರಿಗೆ ಮಾರ್ಚ್ 4ರಂದು ಅಪರಿಚಿತ ಸಂಖ್ಯೆಯೊಂದರಿಂದ ಪಾರ್ಟ್​ ಟೈಮ್ ಕೆಲಸ ನೀಡುವುದಾಗಿ ಎಸ್​ಎಂಎಸ್ ಬಂದಿತ್ತು. ಉದ್ಯೋಗಾವಕಾಶದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅವರು ಎಸ್​ಎಂಎಸ್ ಕಳುಹಿಸಿದಾತನಿಗೆ ದೂರವಾಣಿ ಕರೆ ಮಾಡಿದ್ದರು. ಆ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಟೆಲಿಗ್ರಾಂ ಆ್ಯಪ್ ಡೌನ್​ಲೋಡ್ ಮಾಡುವಂತೆ ಸಂತ್ರಸ್ತರಿಗೆ ಸೂಚಿಸಿದ್ದರು.

ಮುಂದೇನಾಯ್ತು?

ಟೆಲಿಗ್ರಾಂ ಆ್ಯಪ್ ಇನ್​ಸ್ಟಾಲ್ ಮಾಡಿಕೊಂಡ ಬಳಿಕ ಹೆಚ್ಚು ಹಣ ಹೂಡಿಕೆ ಮಾಡುವಂತೆಯೂ ಅದನ್ನು ದ್ವಿಗುಣಗೊಳಿಸುವುದಕ್ಕಾಗಿ ಮೂರು ಹಂತಗಳ ಪ್ರಕ್ರಿಯೆಯನ್ನು ಪೂರೈಸಬೇಕಾಗುತ್ತದೆ ಎಂದೂ ಅಪರಿಚಿತ ವ್ಯಕ್ತಿ ಸೂಚಿಸಿದ್ದರು. ಮೊದಲು 150 ರೂ, ನಂತರ 2,000 ರೂ, ಪಾವತಿ ಮಾಡುವಂತೆ ಸೂಚಿಸಿದರು. ಬಳಿಕ 2,800 ರೂ. ಮರಳಿಸಿದರು. ಮೊದಲ ಕೆಲವು ಹಂತದ ಪ್ರಕ್ರಿಯೆಗಳಲ್ಲಿ ವಿಶ್ವಾಸ ಗಳಿಸಿದ ಅಪರಿಚಿತ ವ್ಯಕ್ತಿ ಲಿಂಕೊಂದನ್ನು ಕಳುಹಿಸಿ ಅದರ ಮೂಲಕ ಖಾತೆ ತೆರೆಯುವಂತೆಯೂ ಅದರ ಮೂಲಕವೇ ಹಣ ಕಳುಹಿಸುವಂತೆಯೂ ಸೂಚಿಸಿದ್ದರು ಎಂದು ಸಂತ್ರಸ್ತ ವ್ಯಕ್ತಿ ತಿಳಿಸಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಇದನ್ನೂ ಓದಿ: U.T.Khader: ರಾಹುಲ್‌ ಗಾಂಧಿ ಪಿಎ ಎಂದು ಹೇಳಿಕೊಂಡು ವಂಚನೆಗೆ ಯತ್ನ: ಸೈಬರ್ ಕ್ರೈಂಗೆ ದೂರು ನೀಡಿದ U.T.ಖಾದರ್‌

ಹಿಂದೆ-ಮುಂದೆ ಯೋಚನೆ ಮಾಡದೆ ಲಿಂಕ್ ಕ್ಲಿಕ್ ಮಾಡಿದ ಸಂತ್ರಸ್ತ ವ್ಯಕ್ತಿ, ಅದರಲ್ಲಿ ಕಾಣಿಸಿದ ಸೂಚನೆಯನ್ನು ಅನುಸರಿಸುತ್ತಾ ಹೋಗಿದ್ದಾರೆ. ಅಪರಿಚಿತ ಕೇಳಿದ ವಿವರವನ್ನೂ ಭರ್ತಿ ಮಾಡುತ್ತಾ ಹೋಗಿದ್ದಾರೆ. ಇದಾದ ಬೆನ್ನಲ್ಲೇ ಅವರ ವಿವಿಧ ಬ್ಯಾಂಕ್​ ಖಾತೆಗಳಿಂದ 15.34 ಲಕ್ಷ ರೂ.ಗೆ ಕನ್ನ ಹಾಕಲಾಗಿದೆ. ಮಾರ್ಚ್ 4ರಿಂದ ಮಾರ್ಚ್ 8ರ ನಡುವಣ ಅವಧಿಯಲ್ಲಿ ಬ್ಯಾಂಕ್ ಖಾತೆಗಳಿಂದ ಹಣ ಕಡಿತವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಏನೋ ಎಡವಟ್ಟಾಗಿದೆ ಎಂದು ಅರಿತ ಸಂತ್ರಸ್ತ, ಸೈಬರ್ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಸದ್ಯ ಪ್ರಕರಣ ತನಿಖಾ ಹಂತದಲ್ಲಿದ್ದು, ಈ ಹಿಂದೆಯೂ ಇಂಥ ಅನೇಕ ಪ್ರಕರಣಗಳು ವರದಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಜಿಟಲ್ ಮಾರ್ಕೆಟಿಂಗ್​ ಪಾರ್ಟ್ ಟೈಮ್ ಉದ್ಯೋಗಕ್ಕೆ ಸಂಬಂಧಪಟ್ಟಂತೆ ವಾಟ್ಸ್​ಆ್ಯಪ್​ ಮೂಲಕ ಬಂದ ಅಪರಿಚಿತ ಸಂದೇಶಕ್ಕೆ ಸ್ಪಂದಿಸಿ ಇತ್ತೀಚೆಗಷ್ಟೇ ಮಂಗಳೂರಿನ ವ್ಯಕ್ತಿಯೊಬ್ಬರು ಹಣ ಕಳೆದುಕೊಂಡಿದ್ದರು.

ದಕ್ಷಿಣ ಕನ್ನಡದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:55 pm, Thu, 16 March 23