Surathkal Murder: ಮತ್ತೋರ್ವನ ಬಂಧನ, ಈ ಹಿಂದೆ ಜಲೀಲ್ ಅಂಗಡಿಗೆ ಹೋಗಿ ಜಗಳವಾಡಿದ್ದ ಆರೋಪಿ
ಮಂಗಳೂರಿನ ಸುರತ್ಕಲ್ (Surathkal) ನ ಕಾಟಿಪಳ್ಳದಲ್ಲಿ ನಡೆದಿದ್ದ ಅಬ್ದುಲ್ ಜಲೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲಿಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಲೂರು: ಡಿಸೆಂಬರ್ 24ರಂದು ಮಂಗಳೂರಿನ ಸುರತ್ಕಲ್ (Surathkal) ನ ಕಾಟಿಪಳ್ಳದಲ್ಲಿ ನಡೆದಿದ್ದ ಅಬ್ದುಲ್ ಜಲೀಲ್ ಕೊಲೆ ಪ್ರಕರಣದ (Abdul Jaleel Murder Case) ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಇಂದು(ಡಿಸೆಂಬರ್ 27) ಮತ್ತೋರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷ್ಮೀಶ ದೇವಾಡಿಗ(28) ಬಂಧಿತ ಆರೋಪಿ. ಇದರೊಂದಿಗೆ ಆರೋಪಗಳ ಬಂಧನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಇದನ್ನೂ ಒದಿ: Surathkal Murder: ಅಬ್ದುಲ್ ಜಲೀಲ್ ಹತ್ಯೆಗೆ ಹಿಂದೂ ಮಹಿಳೆ ಜೊತೆಗಿನ ಅನೈತಿಕ ಸಂಬಂಧವೇ ಕಾರಣವಾಯ್ತಾ?
ಕೃಷ್ಣಪುರ 4ನೇ ಬ್ಲಾಕ್ ನಿವಾಸಿಯಾಗಿರುವ ಲಕ್ಷ್ಮೀಶ ದೇವಾಡಿಗ ಈ ಹಿಂದೆ ಜಲೀಲ್ ಅಂಗಡಿಗೆ ಹೋಗಿ ಜಗಳವಾಡಿದ್ದ. ಆ ಹಳೆ ವೈಷಮ್ಯದಿಂದ ಜಲೀಲ್ನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಹಿಂದೂ ಧರ್ಮದ ಮಹಿಳೆಯೊಂದಿಗೆ ಜಲೀಲ್ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಈ ವಿಚಾರಕ್ಕೆ ಆರೋಪಿ ಲಕ್ಷ್ಮೀಶ ದೇವಾಡಿಗ ಅಂಗಡಿಗೆ ಹೋಗಿ ಜಲೀಲನ ಜೊತೆ ಗಲಾಟೆ ಮಾಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಲಕ್ಷ್ಮೀಶ ದೇವಾಡಿಗನನ್ನು ಅರೆಸ್ಟ್ ಮಾಡಿ ವಿಚಾರಣೆಗೊಳಪಡಿಸಿದ್ದಾರೆ.
SYS, ಎಸ್ಎಸ್ಎಫ್ನಿಂದ ಪ್ರತಿಭಟನೆ
ಅಬ್ದಲ್ ಜಲೀಲ್ ಕೊಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಕೇಸ್ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲೂ ಪ್ರತಿಧ್ವನಿಸಿದೆ. ಇದೀಗ ಜಲೀಲ್ ಹತ್ಯೆ ಖಂಡಿಸಿ SYS, ಎಸ್ಎಸ್ಎಫ್ ಪ್ರತಿಭಟನೆಗಿಳಿದಿವೆ. ಇಂದು(ಡಿಸೆಂಬರ್ 27) ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಕ್ಲಾಕ್ ಟವರ್ ಬಳಿ SYS, ಎಸ್ಎಸ್ಎಫ್ ಸಂಘಟನೆಗಳು ಪ್ರತಿಭಟನೆಗಿಳಿದಿವೆ. ಜಲೀಲ್ ಕೊಲೆ ಕೇಸ್ನಲ್ಲಿ ತಾರತಮ್ಯ ಆಗಿದೆ ಎಂದು ಪೊಲೀಸ್ ಇಲಾಖೆ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿವುದರಿಂದ ಮುಂಜಾಗ್ರತಾ ಕ್ರಮವಾಗಿ ಕ್ಲಾಕ್ ಟವರ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ
ಮಂಗಳೂರಿನ (Mangaluru) ಕಾಟಿಪಳ್ಳದ ನಾಲ್ಕನೇ ಬ್ಲಾಕ್ನಲ್ಲಿ 40 ವರ್ಷದ ಅಬ್ದುಲ್ ಜಲೀಲ್ ಎಂಬ ವ್ಯಕ್ತಿಯನ್ನು ಡಿಸೆಂಬರ್ 24ರಂದು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಶೈಲೇಶ್ ಪೂಜಾರಿ, ಸವಿನ್ ಕಾಂಚನ್, ಪವನ್ ಅಲಿಯಾಸ್ ಪಚ್ಚು ಎನ್ನುವ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಲೀಲ್ ಕೊಲೆ ಬೆನ್ನಲ್ಲೇ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 (Section 144) ಜಾರಿ ಮಾಡಲಾಗಿತ್ತು. ಅಲ್ಲದೇ ಮದ್ಯ ಮಾರಾಟವನ್ನೂ ಸಹ ಡಿಸೆಂಬರ್ 29ರ ವರೆಗೆ ನಿಷೇಧಿಸಲಾಗಿದೆ.
ಇನ್ನಷ್ಟು ದಕ್ಷಿಣ ಕನ್ನಡ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 4:51 pm, Tue, 27 December 22