ಮಂಗಳೂರಿನ ಯುವ ನ್ಯಾಯವಾದಿ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಪುಂಜಾಲಕಟ್ಟೆ ಪಿಎಸ್ಐ ಸುತೇಶ್ ವರ್ಗಾವಣೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 08, 2022 | 2:52 PM

ಮಂಗಳೂರಿನ ಯುವ ನ್ಯಾಯವಾದಿ ಮೇಲೆ ಪೊಲೀಸ್ ದೌರ್ಜನ್ಯ ಆರೋಪ ಪ್ರಕರಣ ವಿಚಾರವಾಗಿ ಪುಂಜಾಲಕಟ್ಟೆ ಪಿಎಸ್ಐ ಸುತೇಶ್ ವರ್ಗಾವಣೆ ಮಾಡಲಾಗಿದೆ.

ಮಂಗಳೂರಿನ ಯುವ ನ್ಯಾಯವಾದಿ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಪುಂಜಾಲಕಟ್ಟೆ ಪಿಎಸ್ಐ ಸುತೇಶ್ ವರ್ಗಾವಣೆ
ಮಂಗಳೂರಿನ ಯುವ ನ್ಯಾಯವಾದಿ ಮೇಲೆ ಪೊಲೀಸ್ ದೌರ್ಜನ್ಯ ಆರೋಪ
Follow us on

ಮಂಗಳೂರು: ಡಿ. 3 ರಂದು ಮಂಗಳೂರಿನ ಯುವ ವಕೀಲ (lawyer) ಕುಲದೀಪ್ ಶೆಟ್ಟಿ ‌ಮೇಲೆ ಬಂಟ್ವಾಳದ ಪುಂಜಾಲಕಟ್ಟೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂದು ಆರೋಪ ಮಾಡಲಾಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಂಜಾಲಕಟ್ಟೆ ಪಿಎಸ್ಐ ಸುತೇಶ್​ನನ್ನು ಜಿಲ್ಲಾ ಎಸ್ಪಿ ಕಚೇರಿಗೆ ವರ್ಗಾವಣೆ‌ (transferred) ಮಾಡಲಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಎಂಬ ಕಾರಣ ಕೊಟ್ಟು ವರ್ಗಾವಣೆ ಮಾಡಲಾಗಿದೆ. ಸಿವಿಲ್​ ವ್ಯಾಜ್ಯ ನ್ಯಾಯಾಲಯದಲ್ಲಿ ಇದ್ದು ಎದುರುದಾರರ ವಿರುದ್ಧ ಪ್ರತಿಬಂದಕಾಜ್ಞೆ ಇದ್ದರೂ ಕೂಡ ಎದುರುದಾರರ ಸುಳ್ಳು ಫಿರ್ಯಾದಿಯ ಆಧಾರದ ಮೇಲೆ ಯುವ ವಕೀಲ ಕುಲದೀಪ್ ಶೆಟ್ಟಿ ಮೇಲೆ ಎಫ್​ಐಆರ್​ ದಾಖಲಿಸಲಾಗಿತ್ತು ಇದನ್ನು ಖಂಡಿಸಿ ನೂರಾರು ವಕೀಲರಿಂದ ಕೋರ್ಟ್ ಮುಂಭಾಗ ಪ್ರತಿಭಟನೆ ಕೂಡ ಮಾಡಲಾಗಿದೆ.   ‌

ಯುವ ವಕೀಲ ಕುಲದೀಪ್ ಶೆಟ್ಟಿ ವಿರುದ್ಧ ಸಿವಿಲ್ ಕೇಸ್​ನಲ್ಲಿ ಎಫ್.ಐ.ಆರ್ ದಾಖಲಿಸಿ ರಾತ್ರೋರಾತ್ರಿ ಮನೆಗೆ ನುಗ್ಗಿ ಬಂಧನ ಮಾಡಲಾಗಿತ್ತು. ಅರೆಬೆತ್ತಲಾಗಿ ನ್ಯಾಯವಾದಿಯನ್ನ ಜೀಪಿನಲ್ಲಿ ಎಳೆದುಕೊಂಡು ಹೋಗಿ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿತ್ತು.

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್​ಗಿರಿ: ಜ್ಯುವೆಲರಿ ಶಾಪ್​ನಲ್ಲಿ ಅನ್ಯಕೋಮಿನ ಜೋಡಿಗೆ ಥಳಿತ, ಮೂರು ಪ್ರಕರಣ ದಾಖಲು

ಸದ್ಯ ಪುಂಜಾಲಕಟ್ಟೆ ಪಿಎಸ್ಸೈ ವಿರುದ್ದ ದ‌.ಕ ಜಿಲ್ಲಾ ವಕೀಲರ ಸಂಘ ಸೇರಿ ರಾಜ್ಯಾದ್ಯಂತ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದು, ಅಮಾನತಿಗೆ ಆಗ್ರಹಿಸಿ ವಕೀಲರಿಂದ ಪ್ರತಿಭಟನೆ ಮಾಡಲಾಗಿದೆ. ನ್ಯಾಯವಾದಿ ಜೊತೆ ಕೆಟ್ಟದಾಗಿ ‌ನಡೆದುಕೊಂಡ ಪೊಲೀಸರ ವರ್ತನೆಗೆ ‌ಕಿಡಿಕಾರಿದ್ದಾರೆ. ಜಾಗದ ವಿಚಾರದ ಜಗಳದಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಬೆಳ್ತಂಗಡಿ ಪಿ.ಎಸ್.ಐ ನಂದಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ.

ಯುವಕ-ಯುವತಿ ಮೇಲೆ ನೈತಿಕ ಪೊಲೀಸ್​ಗಿರಿ

ಇಡೀ ದೇಶದಲ್ಲೇ ಹವಾ ಎಬ್ಬಿಸಿದ ತುಳು ನಾಡ ದೈವಾರಾಧನೆ ಪರಿಚಯಿಸಿದ ಕನ್ನಡದ ಕಾಂತಾರ (Kantara) ಸಿನಿಮಾ ನೋಡಲು ಥಿಯೇಟರ್​ಗೆ ಬಂದ ಜೋಡಿ ಮೇಲೆ ಮುಸ್ಲಿಂ ಯುವಕರು ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ ಎಂದು ದೂರಲಾಗಿದೆ. ಒಂದೇ ಕೋಮಿನ ಜೋಡಿಯ ಮೇಲೆ ಮುಸ್ಲಿಂ ಯುವಕರು ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂತೋಷ್ ಚಿತ್ರಮಂದಿರದಲ್ಲಿ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮಂಗಳೂರು: ರಸ್ತೆ ಬದಿ ಕುಡುಕನ ಕೈಗೆ ಸಿಕ್ತು ಕಂತೆ ಕಂತೆ ಹಣದ ಬಾಕ್ಸ್, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಸುಳ್ಯದ ಖಾಸಗಿ ಕಾಲೇಜಿನ ಕೇರಳದ ಮೂಲದ ವಿದ್ಯಾರ್ಥಿ ಜೋಡಿ ಕಾಲೇಜು ತಪ್ಪಿಸಿ ಸಿನಿಮಾ ವೀಕ್ಷಣೆಗೆ ಬಂದಿದ್ದ ವೇಳೆ ಯುವಕ ಮತ್ತು ಯುವತಿಯನ್ನು ಗುಂಪೊಂದು ತರಾಟೆಗೆ ತೆಗೆದುಕೊಂಡಿತ್ತು. ಮುಸ್ಲಿಂ ಯುವಕ ಮತ್ತು ಹಿಜಾಬ್ ಹಾಕಿದ್ದ ಯುವತಿ ಸಂತೋಷ್ ಚಿತ್ರಮಂದಿರಕ್ಕೆ ಕಾಂತಾರ ಸಿನಿಮಾ ವೀಕ್ಷಣೆಗೆ ಬಂದಿದ್ದರು.


ಈ ವೇಳೆ ಯುವಕ ಪಾರ್ಕಿಂಗ್​ನಲ್ಲಿ ಬೈಕ್ ನಿಲ್ಲಿಸಿದ್ದ ವೇಳೆ ಸ್ಥಳೀಯ ‌ಕೆಲ ಮುಸ್ಲಿಂ ಯುವಕರು ತಲಾಟೆ ಶುರು ಮಾಡಿದ್ದರು. ಕಾಲೇಜಿಗೆ ಹೋಗದೇ ಸಿನಿಮಾಗೆ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸದ್ಯ ಹಲ್ಲೆಗೆ ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಸ್ಲಿಂ ಯುವಕರು ಎಚ್ಚರಿಸಿದ ಬಳಿಕ ವಿದ್ಯಾರ್ಥಿಗಳು ಸ್ಥಳದಿಂದ ತೆರಳಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.