Moral Policing: ಕಾಂತಾರ ವೀಕ್ಷಿಸಲು ಥಿಯೇಟರ್ಗೆ ಬಂದ ಯುವಕ-ಯುವತಿ ಮೇಲೆ ನೈತಿಕ ಪೊಲೀಸ್ಗಿರಿ, ಹಲ್ಲೆಗೆ ಯತ್ನಿಸಿದ್ದ ವಿಡಿಯೊ ವೈರಲ್
Kantara: ಸುಳ್ಯದ ಖಾಸಗಿ ಕಾಲೇಜಿನ ಕೇರಳದ ಮೂಲದ ವಿದ್ಯಾರ್ಥಿ ಜೋಡಿ ಕಾಲೇಜು ತಪ್ಪಿಸಿ ಸಿನಿಮಾ ವೀಕ್ಷಣೆಗೆ ಬಂದಿದ್ದ ವೇಳೆ ಯುವಕ ಯುವತಿಯನ್ನು ಗುಂಪೊಂದು ತರಾಟೆಗೆ ತೆಗೆದುಕೊಂಡಿದೆ.
ಮಂಗಳೂರು: ಇಡೀ ದೇಶದಲ್ಲೇ ಹವಾ ಎಬ್ಬಿಸಿದ ತುಳು ನಾಡ ದೈವಾರಾಧನೆ ಪರಿಚಯಿಸಿದ ಕನ್ನಡದ ಕಾಂತಾರ (Kantara) ಸಿನಿಮಾ ನೋಡಲು ಥಿಯೇಟರ್ಗೆ ಬಂದ ಜೋಡಿ ಮೇಲೆ ಮುಸ್ಲಿಂ ಯುವಕರು ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ ಎಂದು ದೂರಲಾಗಿದೆ. ಒಂದೇ ಕೋಮಿನ ಜೋಡಿಯ ಮೇಲೆ ಮುಸ್ಲಿಂ ಯುವಕರು ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂತೋಷ್ ಚಿತ್ರಮಂದಿರದಲ್ಲಿ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಸುಳ್ಯದ ಖಾಸಗಿ ಕಾಲೇಜಿನ ಕೇರಳದ ಮೂಲದ ವಿದ್ಯಾರ್ಥಿ ಜೋಡಿ ಕಾಲೇಜು ತಪ್ಪಿಸಿ ಸಿನಿಮಾ ವೀಕ್ಷಣೆಗೆ ಬಂದಿದ್ದ ವೇಳೆ ಯುವಕ ಮತ್ತು ಯುವತಿಯನ್ನು ಗುಂಪೊಂದು ತರಾಟೆಗೆ ತೆಗೆದುಕೊಂಡಿತ್ತು. ಮುಸ್ಲಿಂ ಯುವಕ ಮತ್ತು ಹಿಜಾಬ್ ಹಾಕಿದ್ದ ಯುವತಿ ಸಂತೋಷ್ ಚಿತ್ರಮಂದಿರಕ್ಕೆ ಕಾಂತಾರ ಸಿನಿಮಾ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಯುವಕ ಪಾರ್ಕಿಂಗ್ನಲ್ಲಿ ಬೈಕ್ ನಿಲ್ಲಿಸಿದ್ದ ವೇಳೆ ಸ್ಥಳೀಯ ಕೆಲ ಮುಸ್ಲಿಂ ಯುವಕರು ತಲಾಟೆ ಶುರು ಮಾಡಿದ್ದರು. ಕಾಲೇಜಿಗೆ ಹೋಗದೇ ಸಿನಿಮಾಗೆ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸದ್ಯ ಹಲ್ಲೆಗೆ ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಸ್ಲಿಂ ಯುವಕರು ಎಚ್ಚರಿಸಿದ ಬಳಿಕ ವಿದ್ಯಾರ್ಥಿಗಳು ಸ್ಥಳದಿಂದ ತೆರಳಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ಗಿರಿ: ಜ್ಯುವೆಲರಿ ಶಾಪ್ನಲ್ಲಿ ಅನ್ಯಕೋಮಿನ ಜೋಡಿಗೆ ಥಳಿತ, ಮೂರು ಪ್ರಕರಣ ದಾಖಲು
ಮಂಗಳೂರು ಸುತ್ತಾಮುತ್ತ ಅನ್ಯಕೋಮಿಗಳ ನಡುವೆ ಇಂತಹ ಜಗಳಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂಬಂತೆ ಆಗಿದೆ. ಒಂದು ಕೋಮಿನ ಯುವಕ ಅಥವಾ ಯುವತಿ ಮತ್ತೊಂದು ಕೋಮಿನ ಯುವಕ ಅಥವಾ ಯುವತಿಯೊಂದಿಗೆ ಕಾಣಿಸಿಕೊಂಡಿದರೆ ಜಗಳಗಳೇ ಆಗುತ್ತವೆ. ಆದರೆ ಈ ಪ್ರಕರಣದಲ್ಲಿ ಮುಸ್ಲಿಂ ಯುವಕ-ಯುವತಿಯರು ಕನ್ನಡದ ಕಾಂತಾರ ಚಿತ್ರ ವೀಕ್ಷಿಸಲು ಬಂದದ್ದೇ ದೊಡ್ಡ ತಪ್ಪು ಎನ್ನುವಂತೆ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಪ್ರಕರಣ ಸಂಬಂಧ ಪೊಲೀಸ್ ಠಾಣೆಗೆ ದೂರು ದಾಖಲಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:03 pm, Thu, 8 December 22