ಮಂಗಳೂರು, ಜುಲೈ 24: ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರಾವಳಿಯ ಇತರ ಜಿಲ್ಲೆಗಳ ವಿವಿಧೆಡೆಗಳಲ್ಲಿ ಭಾರೀ ಮಳೆ ಸೋಮವಾರವೂ ಮುಂದುವರಿದಿದೆ. ಕಳೆದ 24 ಗಂಟೆ ಅವಧಿಯಲ್ಲಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಹಲವೆಡೆ ಹಾನಿ ಸಂಭವಿಸಿವೆ. ಈ ಮಧ್ಯೆ, ಜಿಲ್ಲೆಯ ಪ್ರಸಿದ್ಧ ದೇಗುಲ ಕುಕ್ಕೆ ಸುಬ್ರಹ್ಮಣ್ಯಕ್ಕೆ (Kukke Subrahmanya temple) ತೆರಳುವ ಭಕ್ತರು ಕುಮಾರಧಾರಾ ನದಿಯ ಸ್ನಾನಘಟ್ಟಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಪ್ರವಾಹದ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ನೀಡಲಾಗಿದೆ. ಭಕ್ತರು ನದಿಯ ಬಳಿ ಹೋಗದಂತೆ ತಡೆಯಲು ಸಿಬ್ಬಂದಿಯನ್ನು ನಿಯೋಜಿಸುವಂತೆ ಕಡಬ ತಹಶೀಲ್ದಾರ್ ಸೂಚಿಸಿದ್ದಾರೆ.
ಮಳೆಯಿಂದಾಗಿ ಸ್ನಾನಘಟ್ಟದ ಲಗೇಜ್ ಕೊಠಡಿ, ವಾಶ್ ರೂಂ ಹಾಗೂ ರಸ್ತೆ ಮುಳುಗಡೆಯಾಗಿದೆ. ಸುಬ್ರಹ್ಮಣ್ಯದಲ್ಲಿ ಪೊಲೀಸ್ ಮತ್ತು ಗೃಹ ರಕ್ಷಕರ ಜೊತೆಗೆ ಎಸ್‌ಡಿಆರ್‌ಎಫ್ ತಂಡವನ್ನೂ ನಿಯೋಜಿಸಲಾಗಿದೆ.
ಕುಕ್ಕೆಸುಬ್ರಹ್ಮಣ್ಯ ಮತ್ತು ಗುತ್ತಿಗಾರು ಸಂಪರ್ಕಿಸುವ ರಸ್ತೆಯಲ್ಲಿ ಪುಚ್ವಪ್ಪಾಡಿ ಬಳಿ ಗಾಳಿ ಮಳೆಗೆ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಇನ್ನು ಹಲವು ಮರಗಳು ರಸ್ತೆಗೆ ಬೀಳುವ ಆತಂಕ ಎದುರಾಗಿದೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರಿನಲ್ಲಿ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕೃಷಿ ಕ್ಷೇತ್ರಗಳು ಜಲಾವೃತವಾಗಿದ್ದು, ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ದೋಣಿಗಳನ್ನು ಬಳಸುವಂತಾಗಿದೆ.
#WATCH | Karnataka: Due to incessant rain many low-lying areas are waterlogged in Mangaluru. Agricultural fields flooded, and people are using boats to move from one place to another.
IMD has issued a red alert in Dakshina Kannada district.
(Visuals from Adyapadi, outskirts of… pic.twitter.com/pyteBPuf4o
— ANI (@ANI) July 24, 2023
ಏತನ್ಮಧ್ಯೆ, ಮಳೆಯಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಹಲವೆಡೆ ಕೃಷಿ ಭೂಮಿ, ಆಸ್ತಿ ಮತ್ತು ರಸ್ತೆಗಳಿಗೆ ಹಾನಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 31 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಇದೇ ವೇಳೆ ಉಡುಪಿ ಜಿಲ್ಲೆಯಲ್ಲಿ 41 ಮನೆಗಳಿಗೆ ಹಾನಿಯಾಗಿದೆ.
ಇದನ್ನೂ ಓದಿ: ಮಂಗಳೂರು ರೈಲುಗಳಿಗೆ ಕರಾವಳಿಯ ಜನಪ್ರಿಯ ವ್ಯಕ್ತಿಗಳ, ಸ್ಥಳಗಳ ಹೆಸರು ಮರುನಾಮಕರಣ?
ವಿಟ್ಲದ ಕೆದಿಲ ಗ್ರಾಮದ ಕಂತುಕೋಡಿ ಹೊಳೆಗೆ ಅಡ್ಡಲಾಗಿರುವ ಸೇತುವೆಯ ಮೇಲೆ ಪ್ರವಾಹದಿಂದಾಗಿ ಪಿಕಪ್ ವಾಹನ ಸಿಲುಕಿಕೊಂಡಿದೆ. ಚಾಲಕ ಹೊಳೆ ದಾಟಲು ಯತ್ನಿಸಿದ್ದು, ಗ್ರಾಮಸ್ಥರು ಆತನನ್ನು ರಕ್ಷಿಸಿದ್ದಾರೆ. ಹಲವು ತಗ್ಗು ಪ್ರದೇಶಗಳು ಪ್ರವಾಹದಂತಹ ಪರಿಸ್ಥಿತಿಗೆ ಸಾಕ್ಷಿಯಾಗಿವೆ. ಮತ್ತೊಂದು ಘಟನೆಯಲ್ಲಿ, ಭಾನುವಾರ ಮಳೆಯಿಂದಾಗಿ ನಗರದ ಮೋರ್ಗನ್ಸ್ ಗೇಟ್ ಬಳಿಯ ಪ್ಲೈವುಡ್ ಉತ್ಪಾದನಾ ಘಟಕದ ಸಿಬ್ಬಂದಿ ಕೊಠಡಿ ಕುಸಿದು ಬಿದ್ದು ಗಾಯಗೊಂಡಿದ್ದಾರೆ. ವಿಷ್ಣು ಮತ್ತು ಚಂದ್ರಶೇಖರ್ ಪೂಜಾರಿ ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಪ್ಪಿನಂಗಡಿ ಸಮೀಪದ ನಟ್ಟಿಬೈಲು ಎಂಬಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯ ತಡೆಗೋಡೆ ಕುಸಿದಿದ್ದು, ವಿದ್ಯುತ್ ಕಂಬಗಳು ಮತ್ತು ಚರಂಡಿಗಳಿಗೆ ಹಾನಿಯಾಗಿದೆ. ನೇತ್ರಾವತಿ ನದಿಯ ನೀರಿನ ಮಟ್ಟ ಬಂಟ್ವಾಳದಲ್ಲಿ 8 ಮೀಟರ್ ತಲುಪಿದೆ.
ದಕ್ಷಿಣಕನ್ನಡ ಜಿಲ್ಲೆಯ ಫಲ್ಗುಣಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಂಗಳೂರಿನ ಅದ್ಯಪಾಡಿ ಸಮೀಪದ ಮುಗೇರಕುದ್ರು ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. 30 ಕ್ಕೂ ಹೆಚ್ಚು ಕುಟುಂಬಗಳು ಪ್ರಹಾದಿಂದ ಜಲದಿಗ್ಬಂಧನಕ್ಕೆ ಸಿಲುಕಿವೆ. ಅಡಿಕೆ, ತೆಂಗಿನ ತೋಟಗಳು ಹಾಗೂ ಗದ್ದೆ ಪ್ರದೇಶ ನದಿಯಂತಾಗಿವೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Mon, 24 July 23