ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮುತ್ತಿಗೆ: ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯ- ದಕ್ಷಿಣ ಕನ್ನಡ ಎಸ್​ಪಿ ಮಾಹಿತಿ

| Updated By: ganapathi bhat

Updated on: Dec 15, 2021 | 8:32 PM

ಠಾಣೆಗೆ ಮುತ್ತಿಗೆ ಹಾಕಿ ಠಾಣೆಯ ವಸ್ತುಗಳಿಗೆ ಹಾನಿ ಮಾಡಿದ್ದರು. ಹಾಗಾಗಿ ಲಘು ಲಾಠಿಪ್ರಹಾರ ಮಾಡಿ ಗುಂಪು ಚದುರಿಸಿದ್ದೇವೆ. ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯಗಳಾಗಿದೆ ಎಂದು ದಕ್ಷಿಣ ಕನ್ನಡ ಎಸ್​ಪಿ ಋಷಿಕೇಶ್​​ ಸೋನಾವಣೆ ಹೇಳಿಕೆ ನೀಡಿದ್ದಾರೆ.

ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮುತ್ತಿಗೆ: ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯ- ದಕ್ಷಿಣ ಕನ್ನಡ ಎಸ್​ಪಿ ಮಾಹಿತಿ
ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮುತ್ತಿಗೆ
Follow us on

ಮಂಗಳೂರು: ಇಲ್ಲಿನ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದವರ ಮೇಲೆ ಲಾಠಿಚಾರ್ಜ್​ ಮಾಡಿದ ಘಟನೆಯ ಕುರಿತು ದಕ್ಷಿಣ ಕನ್ನಡ ಎಸ್​ಪಿ ಋಷಿಕೇಶ್​​ ಸೋನಾವಣೆ ಮಾಹಿತಿ ನೀಡಿದ್ದಾರೆ. ಯುವಕರ ಮೇಲಿನ ಹಲ್ಲೆ ಕುರಿತು ಆರೋಪಿ ಬಂಧಿಸಿದ್ದೆವು. ಡಿಸೆಂಬರ್ 13ರಂದು ಆರೋಪಿ ಸಿನಾನ್ ಬಂಧಿಸಲಾಗಿತ್ತು. ಸಿನಾನ್ ಮಾಹಿತಿಯಂತೆ ಮತ್ತೆ ಮೂವರನ್ನ ವಶಕ್ಕೆ ಪಡೆದಿದ್ವಿ. ಮುಸ್ತಫಾ, ಹಮೀದ್, ಝಕಾರಿಯಾ ವಶಕ್ಕೆ‌ ಪಡೆದಿದ್ದೆವು ಎಂದು ಎಸ್​ಪಿ ಋಷಿಕೇಶ್​​ ಸೋನಾವಣೆ ತಿಳಿಸಿದ್ದಾರೆ.

ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಠಾಣೆ ಬಳಿ ಧರಣಿ ನಡೆಸಲಾಗಿತ್ತು. ಪಿಎಫ್​ಐ ಸಂಘಟನೆ ಕಾರ್ಯಕರ್ತರಿಂದ ಠಾಣೆ ಮುಂದೆ ಧರಣಿ ಮಾಡಲಾಗಿತ್ತು. ಠಾಣೆಗೆ ಮುತ್ತಿಗೆ ಹಾಕಿ ಠಾಣೆಯ ವಸ್ತುಗಳಿಗೆ ಹಾನಿ ಮಾಡಿದ್ದರು. ಹಾಗಾಗಿ ಲಘು ಲಾಠಿಪ್ರಹಾರ ಮಾಡಿ ಗುಂಪು ಚದುರಿಸಿದ್ದೇವೆ. ಘಟನೆಯಲ್ಲಿ ನಾಲ್ವರು ಪೊಲೀಸರಿಗೆ ಗಾಯಗಳಾಗಿದೆ ಎಂದು ದಕ್ಷಿಣ ಕನ್ನಡ ಎಸ್​ಪಿ ಋಷಿಕೇಶ್​​ ಸೋನಾವಣೆ ಹೇಳಿಕೆ ನೀಡಿದ್ದಾರೆ.

ಪೊಲೀಸರ ಲಾಠಿ ಚಾರ್ಜ್ ಖಂಡಿಸಿ ಎಸ್​ಪಿ ಕಚೇರಿ ಚಲೋ
ಪಿಎಫ್​ಐ ಪ್ರಮುಖರ ಅಕ್ರಮ ಬಂಧನ ಖಂಡಿಸಿ ಕಾರ್ಯಕರ್ತರು ಠಾಣೆಯ ಎದುರು ಪ್ರತಿಭಟಿಸಿದ್ದರು. ರಾತ್ರಿಯೂ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಏಕಾಏಕಿ ಲಾಠಿಚಾರ್ಜ್ ನಡೆಸಿದ್ದಾರೆ. ಕಾಲಿಗೆ ಹೊಡೆಯುವ ಬದಲು ಬೇಕಾಬಿಟ್ಟಿಯಾಗಿ ತಲೆಯ ಮೇಲೆ ಲಾಠಿಯಲ್ಲಿ ಹೊಡೆದಿದ್ದಾರೆ. ಮುಸ್ಲಿಂ ಧರ್ಮಗುರು ಸೈಯ್ಯದ್ ಅತೂರ್ ತಂಗಲ್ ತಲೆಗೂ ಹೊಡೆದಿದ್ದಾರೆ. ಇದರಿಂದ ಹಲವಾರು ಜನರಿಗೆ ಗಾಯವಾಗಿದ್ದು, ಕೆಲವರು ಐಸಿಯುನಲ್ಲಿದ್ದಾರೆ. ಅಂಬ್ಯುಲೆನ್ಸ್​ಗೂ ತಡೆ ಹಾಕಿ ಪೊಲೀಸರು ಅಡ್ಡಿ ಪಡಿಸಿದ್ದಾರೆ. ಇದೀಗ ಅವರ ದುಷ್ಕೃತ್ಯ ಮರೆಮಾಚಲು ಪೊಲೀಸರ ಮೇಲೆ ಹಲ್ಲೆ ಎಂಬ ಕಥೆ ಕಟ್ಟಿದ್ದಾರೆ ಎಂದು ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ನಡೆದ ಪಿಎಫ್​ಐ ಕಾರ್ಯಕರ್ತರ ಮೇಲಿನ ಲಾಠಿಚಾರ್ಜ್ ವಿಚಾರವಾಗಿ ಸುದ್ದಿಗೋಷ್ಟಿ ನಡೆಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಇಜಾಜ್ ಅಹ್ಮದ್ ಹೇಳಿಕೆ ನೀಡಿದ್ದಾರೆ.

ಉಪ್ಪಿನಂಗಡಿ ತಲವಾರು ಕೇಸ್ ನಲ್ಲಿ ಅಮಾಯಕರನ್ನು ಹಿಡಿದು ಸಿಲುಕಿಸಿದ್ದಾರೆ. ಇದನ್ನು ಪ್ರತಿಭಟಿಸಿದವರ ಮೇಲೆ ಅಮಾನವೀಯ ಲಾಠಿಚಾರ್ಜ್ ನಡೆಸಲಾಗಿದೆ. ತಕ್ಷಣ ಈ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನ ಅಮಾನತು ಮಾಡಬೇಕು. ಗಾಯಾಳುಗಳ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಬೇಕು. ಲಾಠಿಚಾರ್ಜ್ ಘಟನೆ ಖಂಡಿಸಿ ಡಿಸೆಂಬರ್ 17ರ ಶುಕ್ರವಾರ ಎಸ್​ಪಿ ಕಚೇರಿ ಚಲೋ ನಡೆಸುತ್ತೇವೆ ಎಂದು ಮಂಗಖೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಪುತ್ತೂರು ಉಪವಿಭಾಗದಲ್ಲಿ ಸೆಕ್ಷನ್ 144 ಜಾರಿ
ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ಪಿಎಫ್​ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ವಿಚಾರಕ್ಕೆ ಸಂಬಂಧಿಸಿ ಇದೀಗ ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ 144 ಸೆಕ್ಷನ್ ನಡಿ‌‌ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಆದೇಶ ನೀಡಿದ್ದಾರೆ. ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕಿನಾದ್ಯಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ತಕ್ಷಣದಿಂದ ಡಿಸೆಂಬರ್ 17 ರ ಮಧ್ಯರಾತ್ರಿವರೆಗೆ ನಿಷೇಧಾಜ್ಷೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಪುತ್ತೂರು ಉಪವಿಭಾಗದಲ್ಲಿ ಕೋಮುಗಲಭೆ ತಡೆಯುವ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಆಗಿದ್ದು ಯಾವುದೇ ಪ್ರತಿಭಟನೆ ನಡೆಸದಂತೆ ಸೆಕ್ಷನ್ 144 ಜಾರಿ ಮಾಡಿ ಆದೇಶಿಸಲಾಗಿದೆ.

ಇದನ್ನೂ ಓದಿ: ಉಪ್ಪಿನಂಗಡಿ: ಪೊಲೀಸರ ಲಾಠಿ ಚಾರ್ಜ್ ಖಂಡಿಸಿ ಎಸ್​ಪಿ ಕಚೇರಿ ಚಲೋ; ಪುತ್ತೂರು ಉಪವಿಭಾಗದಲ್ಲಿ ಸೆಕ್ಷನ್ 144 ಜಾರಿ

ಇದನ್ನೂ ಓದಿ: ಉಪ್ಪಿನಂಗಡಿ: ಇಬ್ಬರು ಯುವಕರ ಮೇಲೆ ತಲವಾರಿನಿಂದ ಹಲ್ಲೆ ಪ್ರಕರಣ, ಹಲ್ಲೆಕೋರರ ಬಂಧನ ಖಂಡಿಸಿ ಠಾಣೆಗೆ ಮುತ್ತಿಗೆ

Published On - 8:30 pm, Wed, 15 December 21