
ಮಂಗಳೂರು, ಮೇ 09: ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ (Pahalgam Terror Attack) ಪ್ರತಿಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ್ (Operation Sindoor) ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಮಂಗಳೂರಿನ (Mangaluru) ಓರ್ವ ವಿದ್ಯಾರ್ಥಿನಿ ಇನ್‌ಸ್ಟಾಗ್ರಾಂನಲ್ಲಿ ಹಾಕಿದ ಪೋಸ್ಟ್ ಭಾರಿ ವಿವಾದಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ರೇಷ್ಮಾ ಎನ್ ಬಾರಿಗ ಎಂಬ ವಿದ್ಯಾರ್ಥಿನಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹ್ಯಾಷ್ ಟ್ಯಾಗ್ “ದಿಕ್ಕಾರ ಆಪರೇಷನ್ ಸಿಂದೂರ್ (dikkaraoperationsindura)” ಎಂದು ಗುರುವಾರ (ಮೇ 08) ದಂದು ಪೋಸ್ಟ್ ಹಾಕಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ರೇಷ್ಮಾ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ರೇಷ್ಮಾ ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸ್ನಾತಕ್ಕೋತ್ತರ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ. “ನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ, ಅಲ್ಲಿ ನಂದಿ ಹೋಯಿತು ಬೆಳಕು” “ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ… ಬೆಳಕಿನ ವಿಜೃಂಭಣೆಗಾಗಿ ಹೋರಾಟ ಜಯಿಸಿದು ಕತಲು… ಎಲ್ಲೆಲ್ಲೂ ಕತ್ತಲು…!”#dikkaraoperationsindura ಹ್ಯಾಷ್ ಟ್ಯಾಗ್ ನಡಿ ಪೋಸ್ಟ್ ಹಾಕಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ರೇಷ್ಮಾ ಪೋಸ್ಟ್ ಡಿಲೀಟ್ ಮಾಡಿದ್ದಾರೆ.
ಪೋಸ್ಟ್ ವೈರಲ್ ಆದ ಬೆನ್ನಲ್ಲೇ ರೇಷ್ಮಾ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿದ್ದಾರೆ. “ಭಾರತ ದೇಶದ ಮೇಲೆ ಅಪಾರ ಪ್ರೀತಿ ಇದೆ, ಗೌರವ ನನಗಿದೆ. ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯು ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯಿಂದ ಬದುಕಬೇಕು ಎಂಬುದು ನನ್ನ ಕಾಳಜಿ. ಈ ದೇಶದಲ್ಲಿ ಹುಟ್ಟಿರುವ ಬಗ್ಗೆ ಹೆಮ್ಮೆ ಇದೆ, ಏಕೆಂದರೆ ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ಭಾರತ. ಈ ದೇಶದ ಮಣ್ಣಿನ ಮಕ್ಕಳಾದ ನಾವು ದ್ವೇಷದ ಕಾರಣ, ಭಯೋತ್ಪಾದನೆಯ ಕಾರಣಕ್ಕಾಗಿ ಮಣ್ಣಾಗುವುದನ್ನು, ನೋವುಗಳನ್ನು ಅನುಭವಿಸುವುದು ನನಗಿಷ್ಟವಿಲ್ಲ.
ಇದನ್ನೂ ಓದಿ: ಕರ್ನಾಟಕದಲ್ಲಿ ಬಾಲ ಬಿಚ್ಚಿದ ಪಾಕ್ ಪ್ರೇಮಿ: ವಿಜಯಪುರದ ವಿದ್ಯಾರ್ಥಿನಿಯಿಂದ ಪಾಕ್ ಪರ ಪೋಸ್ಟ್, ದೂರು ದಾಖಲು
ಯಾವುದೇ ಯುದ್ಧ ಆದಾಗ ಮಡಿಯುವವರು ಒಂದೆಡೆಯಾದರೆ ಆಯಾ ದೇಶದ ಬಹುತೇಕರು ವಿವಿಧ ಕಾರಣಗಳಿಗಾಗಿ ನೋವು ಅನುಭವಿಸುವಂತಾಗುತ್ತದೆ. ಭಾರತದ ಮೇಲೆ ಭಯೋತ್ಪಾದನೆಯ ಕರಿನೆರಳು ಬೀಳದಿರಲಿ, ಶಾಂತಿ, ಸೌಹಾರ್ದ ನೆಲೆಸಲಿ. ಭಯೋತ್ಪಾದನೆ ನಿರ್ಮೂಲನೆಯಾಗಲಿ. ಸಾವು ನೋವು ಇಲ್ಲದಾಗಲಿ ಎನ್ನುವುದಷ್ಟೇ ನನ್ನ ಉದ್ದೇಶ” ಎಂದು ರೇಷ್ಮಾ ಹೊಸದಾಗಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Live: ಚಂಡೀಗಢ, ಪಟಿಯಾಲದಲ್ಲಿ ಮೊಳಗಿದ ಸೈರನ್, ಶೋಧ ಕಾರ್ಯಾಚರಣೆ
ಸದ್ಯ ರೇಷ್ಮಾ ಇನ್ಸಾಗ್ರಾಂ ಅಕೌಂಟ್ ಅನ್ನು ರಿಪೋರ್ಟ್ ಮಾಡುವಂತೆ ಸಾರ್ವಜನಿಕರು ಮತ್ತು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ರೇಷ್ಮಾ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:45 pm, Fri, 9 May 25