Mangaluru Vijayapura train: ಮಂಗಳೂರು ಸೆಂಟ್ರಲ್‌ಗೆ ವಿಸ್ತರಣೆಯಾಗಲಿದೆ ಮಂಗಳೂರು ವಿಜಯಪುರ ರೈಲು
ಮಂಗಳೂರಿನ ರೈಲು ಪ್ರಯಾಣಿಕರಿಗೆ ಪಾಲಕ್ಕಾಡ್ ರೈಲ್ವೆ ಅಧಿಕಾರಿಗಳು ಸಿಹಿ ಸುದ್ದಿ ನೀಡಿದ್ದಾರೆ. ಕೊನೆಗೂ ಮಂಗಳೂರು-ವಿಜಯಪುರ ರೈಲನ್ನು ಮಂಗಳೂರು ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಸಮ್ಮತಿಸಿದ್ದಾರೆ. ಆದರೆ, ಮುಂಬೈ ಸಿಎಸ್‌ಟಿಎಂ-ಮಂಗಳೂರು ಜಂಕ್ಷನ್ ರೈಲನ್ನು ಸೆಂಟ್ರಲ್‌ಗೆ ವಿಸ್ತರಿಸುವ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ.
ಮಂಗಳೂರು, ಡಿಸೆಂಬರ್ 11: ಮಂಗಳೂರು-ವಿಜಯಪುರ ರೈಲನ್ನು (Mangaluru Vijayapura train) ಮಂಗಳೂರು ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಪಾಲಕ್ಕಾಡ್ ರೈಲ್ವೆ ಅಧಿಕಾರಿಗಳು ಸಮ್ಮತಿಸಿದ್ದಾರೆ. ಯೋಜನೆಯ ಪ್ರಕಾರ ರೈಲು ಮಂಗಳೂರು ಸೆಂಟ್ರಲ್‌ಗೆ ಮಧ್ಯಾಹ್ನ 1 ಗಂಟೆಗೆ ಆಗಮಿಸಿ ಮಧ್ಯಾಹ್ನ 2.35 ಕ್ಕೆ ವಿಜಯಪುರಕ್ಕೆ ಹೊರಡಲಿದೆ. ಮಂಗಳೂರು-ಯಶವಂತಪುರ ಮಧ್ಯೆ ವಾರಕ್ಕೊಮ್ಮೆ ಸಂಚರಿಸುವ ರೈಲನ್ನು ಜಂಕ್ಷನ್‌ನಿಂದ ಸೆಂಟ್ರಲ್‌ಗೆ ವಿಸ್ತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಮಂಗಳೂರು-ಯಶವಂತಪುರ ರೈಲು ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ಸಂಜೆ 7 ಗಂಟೆಗೆ ಹೊರಡುತ್ತದೆ. ವಿಭಾಗೀಯ ರೈಲು ಬಳಕೆದಾರರ ಸಲಹಾ ಸಮಿತಿ (ಡಿಆರ್‌ಯುಸಿಸಿ) 163 ನೇ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಪಾಲಕ್ಕಾಡ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ಗುರುವಾರ ನಡೆಯಿತು.
ಮುಂಬೈ ಸಿಎಸ್‌ಟಿಎಂ-ಮಂಗಳೂರು ಜಂಕ್ಷನ್ ರೈಲನ್ನು ಸೆಂಟ್ರಲ್‌ಗೆ ವಿಸ್ತರಿಸುವ ಬೇಡಿಕೆ ಪ್ರಸ್ತುತ ವೇಳಾಪಟ್ಟಿಯಲ್ಲಿ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಪಾಲಕ್ಕಾಡ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರುಣ್ ಕುಮಾರ್ ಚತುರ್ವೇದಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಿಆರ್‌ಯುಸಿಸಿಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಕಾರ್ಯದರ್ಶಿ ಅರುಣ್ ಥಾಮಸ್ ಕಲತ್ತಿಕಲ್ ಅವರು ಡಿಆರ್‌ಯುಸಿಸಿಯ ಕಾರ್ಯವೈಖರಿ ಮತ್ತು ಪಾಲಕ್ಕಾಡ್ ವಿಭಾಗದ ಸಾಧನೆಗಳ ಕುರಿತು ಪ್ರಸ್ತುತಿ ಮೂಲಕ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರು: ಸೋಮೇಶ್ವರ ಬಳಿ ಇಬ್ಬರು ವಿದ್ಯಾರ್ಥಿಗಳು ಸಮುದ್ರಪಾಲು
ಮಂಗಳೂರು-ಮುಂಬೈ ಸಿಎಸ್‌ಟಿ ಸೂಪರ್‌ಫಾಸ್ಟ್, ಮಂಗಳೂರು-ಬೆಂಗಳೂರು ಗೋಮಟೇಶ್ವರ ಎಕ್ಸ್‌ಪ್ರೆಸ್ ಮತ್ತು ಮಂಗಳೂರು-ವಿಜಯಪುರ ಎಕ್ಸ್‌ಪ್ರೆಸ್‌ಗಳ ಸೇವೆಗಳನ್ನು ಜಂಕ್ಷನ್‌ನಿಂದ ಸೆಂಟ್ರಲ್‌ಗೆ ವಿಸ್ತರಿಸದಿದ್ದಲ್ಲಿ, ವಂದೇ ಭಾರತ್ ರೈಲು ಹೊರತುಪಡಿಸಿ ಸೆಂಟ್ರಲ್‌ನಿಂದ ಯಾವುದೇ ಹೊಸ ರೈಲು ಪ್ರಾರಂಭಿಸಲು ವಿರೋಧಿಸುತ್ತೇವೆ ಎಂದು ಡಿಆರ್‌ಯುಸಿಸಿ ಸದಸ್ಯ ಹನುಮಂತ್ ಕಾಮತ್ ಎಂಬವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸೆಂಟ್ರಲ್ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆ ಡಿಸೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ