ಮಂಗಳೂರು: ಸೋಮೇಶ್ವರ ಬಳಿ ಇಬ್ಬರು ವಿದ್ಯಾರ್ಥಿಗಳು ಸಮುದ್ರಪಾಲು
ಸಮುದ್ರತೀರದಲ್ಲಿ ಆಟವಾಡುವ ಸಂದರ್ಭ ಅಪ್ಪಳಿಸಿದ ಅಲೆಗಳ ನಡುವೆ ಸಿಲುಕಿದ ಇಬ್ಬರು ವಿದ್ಯಾರ್ಥಿಗಳು ಸಮುದ್ರಪಾಲಾದ ಘಟನೆ ದಕ್ಷಿಣ ಕನ್ನಡ(Dakshina Kannada)ಜಿಲ್ಲೆಯ ಉಳ್ಳಾಲ ತಾಲೂಕಿನ ಸೋಮೇಶ್ವರದಲ್ಲಿ ನಡೆದಿದೆ.
ದಕ್ಷಿಣ ಕನ್ನಡ, ಡಿ.09: ಸಮುದ್ರತೀರದಲ್ಲಿ ಆಟವಾಡುವ ಸಂದರ್ಭ ಅಪ್ಪಳಿಸಿದ ಅಲೆಗಳ ನಡುವೆ ಸಿಲುಕಿದ ಇಬ್ಬರು ವಿದ್ಯಾರ್ಥಿಗಳು ಸಮುದ್ರಪಾಲಾದ ಘಟನೆ ದಕ್ಷಿಣ ಕನ್ನಡ(Dakshina Kannada)ಜಿಲ್ಲೆಯ ಉಳ್ಳಾಲ ತಾಲೂಕಿನ ಸೋಮೇಶ್ವರದಲ್ಲಿ ನಡೆದಿದೆ. ಸೋಮೇಶ್ವರ ಪರಿಜ್ಞಾನ ದ್ವಿತೀಯ ಪಿಯುಸಿ ಕಾಲೇಜಿನ ಯಶ್ವಿತ್ ಹಾಗೂ ಯುವರಾಜ್ ಮೃತ ವಿದ್ಯಾರ್ಥಿಗಳು. ಇನ್ನು ಇವರ ಮೃತ ದೇಹಕ್ಕಾಗಿ ಸ್ಥಳೀಯ ಈಜುಗಾರರು, ಉಳ್ಳಾಲ ಪೊಲೀಸ್ ಠಾಣಾ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿದೆ. ಇನ್ನು ಘಟನೆ ಹಿನ್ನಲೆ ಸೋಮೇಶ್ವರ ಸಮುದ್ರ ತೀರದಲ್ಲಿ ಮುಂಜಾಗ್ರತಾ ಕ್ರಮವಾಗಿ ಈಜಲು ತೆರಳದಂತೆ ಉಳ್ಳಾಲ ಠಾಣಾಧಿಕಾರಿ ಹೆಚ್. ಎನ್ ಬಾಲಕೃಷ್ಣ ಸೂಚಿಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಡಿ.03 ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ ಐವರು ಸ್ನೇಹಿತರ ಪೈಕಿ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿತ್ತು. ಕಲಬುರಗಿ ಮೂಲದ ಆಕಾಶ ಮತ್ತು ಅಭಿಷೇಕ್ ಎಂಬುವವರು ಕೊನೆಯುಸಿರೆಳೆದಿದ್ದರು. ಬೀಚ್ನಲ್ಲಿ ಯಾಂತ್ರಿಕ ಬೋಟ್ ಓಡಿಸುತ್ತಿರುವಾಗ ಅಲೆಗಳ ಜೋರಾದ ರಭಸಕ್ಕೆ ಸಿಲುಕಿ ಈ ದುರ್ಘಟನೆ ನಡೆದಿತ್ತು.
ಈ ಕುರಿತು ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಎರಡು ತಿಂಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದಿದ್ದ ಐವರು ಪ್ರವಾಸಿಗರು ಸಮುದ್ರದಲ್ಲಿ ಈಜಾಡಲು ಹೋದಾಗ ಅಲೆಗಳ ಹೊಡೆತಕ್ಕೆ ಸಿಲುಕಿದ್ದರು. ಇದನ್ನು ಕಂಡು ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದರು. ಈ ಘಟನೆ ಮರೆಮಾಚುವ ಮುನ್ನವೇ ಇಬ್ಬರು ಯುವಕರು ಸಾವನ್ನಪ್ಪಿದ್ದರು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಕೊನೆಯುಸಿರೆಳೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Sat, 9 December 23