ಹಸಿವು ಕಂಡು ಹಿಡಿದು ಊಟ ಆರ್ಡರ್ ಮಾಡುವ ಆ್ಯಪ್! ಸ್ಟೆತೋಸ್ಕೋಪ್ ಬಳಸಿ ತಂತ್ರಜ್ಞಾನ ಆವಿಷ್ಕಾರ ಮಾಡಿದ ಮಂಗಳೂರಿನ ಯುವಕ

ಎಐ ತಂತ್ರಜ್ಞಾನ ಮತ್ತು ರೊಬೋಟಿಕ್ ವಿಜ್ಞಾನ ಇವತ್ತು ಇಡೀ ಜಗತ್ತನ್ನು ಆವರಿಸಿಕೊಳ್ಳುತ್ತಿದೆ. ಕಠಿಣ ಕೆಲಸಗಳನ್ನು ಸರಳಗೊಳಿಸುತ್ತಿದೆ. ಇದೇ ತಂತ್ರಜ್ಞಾನ ಬಳಸಿಕೊಂಡು ಮಂಗಳೂರಿನ ಯುವಕನೊಬ್ಬ ವಿಶೇಷ ಸಾಧನೆ ಮಾಡಿದ್ದಾನೆ. ಸ್ಟೆತೋಸ್ಕೋಪ್ ಬಳಸಿಕೊಂಡು ಹೊಟ್ಟೆ ಹಸಿವು ಕಂಡು ಹಿಡಿದು ಊಟ ಆರ್ಡರ್ ಮಾಡುವ ಆ್ಯಪ್ ಅಭಿವೃದ್ಧಿಪಡಿಸಿದ್ದಾನೆ!

ಹಸಿವು ಕಂಡು ಹಿಡಿದು ಊಟ ಆರ್ಡರ್ ಮಾಡುವ ಆ್ಯಪ್! ಸ್ಟೆತೋಸ್ಕೋಪ್ ಬಳಸಿ ತಂತ್ರಜ್ಞಾನ ಆವಿಷ್ಕಾರ ಮಾಡಿದ ಮಂಗಳೂರಿನ ಯುವಕ
ಹಸಿವು ಕಂಡು ಹಿಡಿದು ಊಟ ಆರ್ಡರ್ ಮಾಡುವ ಸಾಧನ (ಒಳಚಿತ್ರದಲ್ಲಿ ಸೋಹನ್ ರೈ)
Updated By: Ganapathi Sharma

Updated on: Dec 02, 2025 | 8:04 AM

ಮಂಗಳೂರು, ಡಿಸೆಂಬರ್ 2: ಮಂಗಳೂರಿನ (Mangalore) ಬಿಜೈ ನಿವಾಸಿ, 23 ವರ್ಷ ವಯಸ್ಸಿನ ಸೋಹನ್ ರೈ (Sohan Rai) ಇದೀಗ ಸ್ಟೆತೋಸ್ಕೋಪ್ ಬಳಸಿಕೊಂಡು ವಿನೂತನ ತಂತ್ರಜ್ಞಾನ ಅಭಿವೃದ್ಧಿಪಡಿಸಿ ವಿಜ್ಞಾನ ವಲಯದ ಗಮನ ಸೆಳೆದಿದ್ದಾರೆ. ಮಂಗಳೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗಕ್ಕೆ ಸೇರಿದ್ದ ಇವರು, 5 ವರ್ಷ ಕಾಲೇಜಿಗೆ ಹೋಗಲು ಮನಸಿಲ್ಲದೆ, ಒಂದೂವರೆ ವರ್ಷಕ್ಕೇ ಕಾಲೇಜು ಬಿಟ್ಟಿದ್ದರು. ಎಂಜಿನಿಯರಿಂಗ್ ಸೇರುವುದಕ್ಕೂ ಮೊದಲು, ಅಂದರೆ ಕಳೆದ 7-8 ವರ್ಷಗಳ ಹಿಂದೆ ಈತ ಸ್ನೇಹಿತರ ಜೊತೆ ಸೇರಿ ಹೊಸ ಆವಿಷ್ಕಾರ ಮಾಡಬೇಕೆಂದು ಪ್ರಯತ್ನಿಸಲು ಆರಂಭಿಸಿದ್ದರು. ಎಐ ಮತ್ತು ರೊಬೋಟಿಕ್ ಎಂಜಿನಿಯರಿಂಗ್ ಮೇಲೆ ವರ್ಕ್ ಶಾಪ್ ಆರಂಭಿಸಿದ್ದರು. ಇದೀಗ ಸ್ಟೆತೋಸ್ಕೋಪ್ ಬಳಸಿ ಯಂತ್ರವೊಂದನ್ನು ತಯಾರಿಸಿದ್ದಾರೆ. ಇದನ್ನು ಹೊಟ್ಟೆಗೆ ಸಿಕ್ಕಿಸಿಕೊಂಡರೆ ಇದು ಹಸಿವನ್ನು ಕಂಡು ಹಿಡಿದು ಮೊಬೈಲ್ ಆ್ಯಪ್ ಮೂಲಕ ಸಂದೇಶ ರವಾನಿಸುತ್ತೆ. ವ್ಯಕ್ತಿಗೆ ಬೇಕಾದ ಪ್ರಮಾಣದ ಊಟವನ್ನು ಆರ್ಡರ್ ಮಾಡಿಕೊಳ್ಳುತ್ತದೆ!

ಹಸಿವು ಪತ್ತೆ ಸಾಧನದ ಬಗ್ಗೆ ಸೋಹನ್ ರೈ ಏನಂತಾರೆ? ವಿಡಿಯೋ ನೋಡಿ

ಸೋಹನ್ ರೈ ಈ ಮೊದಲು, ಡ್ರೋನ್ ಮೂಲಕ ಫುಡ್ ಡಿಲಿವರಿ, ಸಮುದ್ರ ಅಥವಾ ನೀರಿನಲ್ಲಿ ಮುಳುಗುತ್ತಿರುವ ವ್ಯಕ್ತಿಗೆ ಡ್ರೋನ್‌ನಲ್ಲಿ ಲೈಫ್ ಜಾಕೇಟ್‌ ಪೂರೈಸುವ ತಂತ್ರಜ್ಞಾನ ಆವಿಷ್ಕರಿಸಿದ್ದಾರೆ. ಈಗಾಗಲೇ ಕೃಷಿ ಇಲಾಖೆಯಿಂದ ಒಂದು ಪ್ರೋಗ್ರಾಂ ಡೆವಲಪ್ ಮಾಡಿಕೊಡಲು ಸೋಹನ್ ರೈಗೆ ಬುಲಾವ್ ಬಂದಿದೆ. ಇಂಡಿಯಾ ಟೆಕ್ ಆ್ಯಂಡ್ ಇನ್ಫ್ರಾ ತನ್ನ ಟ್ವಿಟರ್‌ನಲ್ಲಿ ಸೋಹನ್‌ನ ಲಿಂಕ್‌ಗಳನ್ನು ಹಂಚಿಕೊಂಡಿದೆ. ಸಾಕಷ್ಟು ಕಂಪನಿಗಳು ಸೋಹನ್‌ಗೆ ಹಲವಾರು ಪ್ರಾಜೆಕ್ಟ್‌ಗಳನ್ನು ಡೆವಲಪ್ ಮಾಡಿಕೊಡಲು ಕಾಂಟ್ರಾಕ್ಟ್ ಕೊಟ್ಟಿವೆ.

ಇದನ್ನೂ ಓದಿ: ದಕ್ಷಿಣ ಕನ್ನಡ ಹಾಗೂ ತುಮಕೂರಿನ ಜೇನುತುಪ್ಪದ ಸ್ವಾದವನ್ನು ಹಾಡಿಹೊಗಳಿದ ಪ್ರಧಾನಿ ಮೋದಿ

ಮಂಗಳೂರಿನ ಬಿಜೈನಲ್ಲಿ ಒಂದು ಸಣ್ಣ ವರ್ಕ್‌ಶಾಪ್ ಇಟ್ಟುಕೊಂಡು ಸೋಹನ್ ಇಷ್ಟೆಲ್ಲಾ ಅಧ್ಯಯನ ಮಾಡುತ್ತಿದ್ದಾರೆ. ಈತನ ಇನ್ಟಾಗ್ರಾಂ ಪೇಜ್‌ ಸಾಕಷ್ಟು ಸದ್ದು ಮಾಡುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ