ಮಂಗಳೂರು: ನಗರದ ಸುಲ್ತಾನ್ ಜ್ಯುವೆಲರಿ ಹಾಗೂ ಹೋಳಿ ಆಚರಣೆ ವೇಳೆ ನಡೆದ ನೈತಿಕ ಪೊಲೀಸ್ಗಿರಿಯಲ್ಲಿ (Moral Police Giri) ಭಾಗಿಯಾಗಿದ್ದ ಬಜರಂಗದಳದ (Bajaranga Dal) ಮೂವರನ್ನು ಗಡಿಪಾರು ಮಾಡಲು ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಪೊಲೀಸ್ (Police) ಇಲಾಖೆ ನಿರ್ಧರಿಸಿದೆ. ಇದೀಗ ಈ ಪ್ರಕ್ರಿಯೆ ಆರಂಭವಾಗಿದೆ. ಹೀಗಾಗಿ ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು? ಎಂದು ಕಾರಣ ಕೇಳಿ ನೋಟಿಸ್ ನೀಡಿದೆ. ಇಂದು (ಜು.21) ಮೂವರು ಬಜರಂಗದಳ ಕಾರ್ಯಕರ್ತರಿಗೆ ಕಾನೂನು ಸುವ್ಯವಸ್ಥೆ ಖಾತ್ರಿ ಪಡಿಸಲು ಡಿಸಿಪಿ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ. ಬಳಿಕ ಅಧಿಕೃತವಾಗಿ ಒಂದು ವರ್ಷ ಕಾಲ ಗಡಿಪಾರು ಮಾಡುವ ಸಾಧ್ಯತೆ ಇದೆ. ಹೀಗಾಗಿ ಸ್ಥಳೀಯ ಠಾಣೆಗಳ ಇನ್ಸ್ಪೆಕ್ಟರ್ಗಳಿಂದ ಗಡಿಪಾರಿಗೆ ವರದಿಯನ್ನು ಕೇಳಲಾಗಿದೆ.
ಈ ವಿಚಾರವಾಗಿ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಮಾತನಾಡಿ ನಮ್ಮ ನಗರದಲ್ಲಿ ಪದೇ ಪದೇ ಕ್ರೈಂನಲ್ಲಿ ಭಾಗಿಯಾದವರ ಮೇಲೆ ಕ್ರಮ ಆಗಿದೆ. ಮತ್ತೆ ಮತ್ತೆ ಕ್ರೈಂ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವ ಕೆಲಸ ಆಗುತ್ತಿದೆ. ಅವರು ನಮಗೆ ಆರೋಪಿಗಳಷ್ಟೇ, ಅವರು ಯಾವ ಸಂಘಟನೆ ಅನ್ನೋದು ನಮಗೆ ಬೇಡ. ಮೂವರು ಮಾತ್ರ ಅಲ್ಲ, ಅದಕ್ಕೂ ಹೆಚ್ಚು ಜನರಿಗೆ ನೋಟೀಸ್ ನೀಡಲಾಗಿದೆ ಎಂದರು.
ಇದನ್ನೂ ಓದಿ: Mangaluru News: ಮದುವೆಯಾಗುವುದಾಗಿ ನಂಬಿಸಿ ನಿರಂತರ ದೈಹಿಕ ಸಂಪರ್ಕ; ಮಂಗಳೂರು ಪೊಲೀಸರಿಂದ ಕಡಬದ ರೆಹಮಾನ್ ಬಂಧನ
ನೈತಿಕ ಪೊಲೀಸ್ ಗಿರಿ ಸಂಬಂಧಿಸಿ ಮೂವರ ಮೇಲೆ ಠಾಣೆಯಿಂದ ಪ್ರಸ್ತಾವನೆ ಬಂದಿದೆ. ಅವರನ್ನ ಗಡೀಪಾರು ಮಾಡಲು ಠಾಣಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು. ಹೀಗಾಗಿ ಅವರಿಗೆ ನೋಟೀಸ್ ಮಾಡಿದ್ದೇವೆ, ಗಡಿಪಾರು ಪ್ರಕ್ರಿಯೆ ಆಗಲಿದೆ. ರೌಡಿಶೀಟ್ ತೆರೆಯೋದು ಅಥವಾ ಗೂಂಡಾ ಕಾಯ್ದೆ ಹಾಕುವ ಕೆಲಸವೂ ಆಗುತ್ತಿದೆ. ನಿರಂತರ ಸಮಾಜ ವಿರೋಧಿ ಚಟುವಟಿಕೆಗಳನ್ನು ನಡೆಸುವರನ್ನು ಗುರುತಿಸಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಸರಕಾರ ಭಜರಂಗದಳದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ. ಕಾರ್ಯಕರ್ತರನ್ನು ಹೆದರಿಸುವಂತ ಕೆಲಸ ಮಾಡುತ್ತಿದೆ. ಆರ್ಎಸ್ಎಸ್ ಜಮೀನು ತೆಗೆದುಕೊಳ್ಳುವ ಕೆಲಸ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಎಷ್ಟು ಜನರನ್ನು ಗಡಿ ಪಾಡು ಮಾಡುತ್ತೀರಿ. ನಾನು ಭಗರಂಗದಳ ಕಾರ್ಯಕರ್ತೆ, ಆರ್ಎಸ್ಎಸ್ ಕಾರ್ಯಕರ್ತೆ. ನನ್ನನ್ನು ಎಲ್ಲಿಗೆ ಗಡಿಪಾರು ಮಾಡುತ್ತೀರಿ..? ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.
ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರಯ ದೇಶದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ. ಭಯೋತ್ಪಾದಕರನ್ನು ರಕ್ಷಣೆ ಮಾಡುತ್ತೀರಿ. ಇನ್ನೊಂದು ಕಡೆ ಸಂಘ ಪರಿವಾರದವರನ್ನು ಟಾರ್ಗೆಟ್ ಮಾಡುತ್ತೀರಿ. 135 ಸೀಟು ಬಂದಿದೆ ಎಂಬ ಅಹಂಕಾರದಿಂದ ಮುಂದುವರೆದರೆ ಜನರು ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:38 pm, Fri, 21 July 23