ಮಂಗಳೂರು, ಅಕ್ಟೋಬರ್ 14: ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಶನಿವಾರ ಮಂಗಳೂರಿನ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿದ್ದಾರೆ. ಪಂಪ್ ವೆಲ್ ರಸ್ತೆ ಅಗಲೀಕರಣ ಮತ್ತು ಚರಂಡಿ ಸೇರಿದಂತೆ ಜೆಪ್ಪು, ರೈಲ್ವೇ ಬ್ರಿಡ್ಜ್ ಕಾಮಗಾರಿಗಳ ಪರಿಶೀಲನೆ ಮಾಡಿದ್ದು, ಹೊಸ ರಸ್ತೆಗಳನ್ನ ಅಗೆದು ಹಾಕುವ ಸಂಸ್ಥೆಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೆಪ್ಪು ರೈಲ್ವೇ ರಸ್ತೆ ವಿಳಂಬವಾಗಿದ್ದರಿಂದ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದು, ತಕ್ಷಣ ಕಾಮಗಾರಿ ಮುಗಿಸಿ, ಇಲ್ಲವಾದರೆ ಉದ್ಘಾಟನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಸದ ನಳಿನ್ ಕುಮಾರ್ ಕಾಮಗಾರಿ ಪರಿಶೀಲನೆ ವೇಳೆ ಶಾಸಕ ವೇದವ್ಯಾಸ ಕಾಮತ್, ಮೇಯರ್ ಹಾಗೂ ಅಧಿಕಾರಿಗಳು ಭಾಗಿದ್ದು, ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಮಾಹಿತಿ ನೀಡಲು ಸೂಚನೆ ನೀಡಿದ್ದಾರೆ. ರಸ್ತೆ ತುಂಡರಿಸಿ ಸ್ಮಾರ್ಟ್ ಸಿಟಿ ಕಾಮಗಾರಿಗೆ ತಡೆಯಾಗುವುದರ ಬಗ್ಗೆ ಚರ್ಚಿಸಲು ಸಭೆ ಜೊತೆಗೆ ಮುಂದಿನ ಮಂಗಳವಾರ ಮಾಹಿತಿ ಸಹಿತ ಹಾಜರಾಗಲು ಸೂಚನೆ ನೀಡಿದ್ದಾರೆ.
ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿದ್ದು, ಬಗೆದಷ್ಟೂ ಬ್ರಹ್ಮಾಂಡ ಭ್ರಷ್ಟಾಚಾರ ಹೊರಬರುತ್ತಿದೆ. ಕಾಂಗ್ರೆಸ್ ಪಕ್ಷ ಹಾಗೂ ಗುತ್ತಿಗೆದಾರರ ನಡುವಿನ ಕನೆಕ್ಷನ್ ಇರುವುದು ಕೇವಲ ಕಲೆಕ್ಷನ್ಗಾಗಿ ಎಂಬುದು ಜಗಜ್ಜಾಹೀರಾಗಿದ್ದು, ಈಗ ಸಿಕ್ಕಿರುವ ಕೋಟಿ ಕೋಟಿ ಹಣವೇ ಸಾಕ್ಷಿ ನುಡಿಯುತ್ತಿದೆ. ಪಂಚರಾಜ್ಯಗಳ ಚುನಾವಣೆಗಾಗಿ ಎಟಿಎಂ ಸರ್ಕಾರ ಕನ್ನಡಿಗರನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುತ್ತದೆ ನಾವು ಹೇಳುತ್ತಲೇ ಬಂದಿದ್ದೆವು. ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಮಾಡದೇ ಹಲವರ ಕೊರಳಿಗೆ ಕುಣಿಕೆ ಹಾಕಿತ್ತು ಈ ಸರ್ಕಾರ. ಈಗ ಗುತ್ತಿಗೆದಾರರನ್ನು ಕೈಗೊಂಬೆ ಮಾಡಿಕೊಂಡು ಪಂಚ ರಾಜ್ಯಗಳ ಚುನಾವಣೆಗೆ ಕರ್ನಾಟಕವನ್ನೇ ಕಲೆಕ್ಷನ್ ಕೇಂದ್ರವನ್ನಾಗಿಸಿದೆ.
ಇದನ್ನೂ ಓದಿ: ಇಸ್ರೇಲ್ನಲ್ಲಿ ಸಿಲುಕಿರುವ ಮಂಗಳೂರಿಗರನ್ನ ನಮ್ಮ ಸರ್ಕಾರ ಸುರಕ್ಷಿತವಾಗಿ ಕರೆತರುತ್ತೆ: ನಳಿನ್ ಕುಮಾರ್ ಕಟೀಲ್ ಅಭಯ
ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಗಳಿಂದಾಗಿ ಈ ಎಟಿಎಂ ಸರ್ಕಾರಕ್ಕೆ ಬೆಸೆದುಕೊಂಡ ಕಲೆಕ್ಷನ್ ಕೊಂಡಿಗಳೆಲ್ಲಾ ಒಂದೊಂದಾಗಿ ಹೊರಬರುತ್ತಿವೆ. ಇದರ ಬಗ್ಗೆ ಸೂಕ್ತ ತನಿಖೆಯಾಗಿ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿರುವ ಇದರ ಹಿಂದಿರುವ ವ್ಯಕ್ತಿಯ ‘ಕೈ’ಗಳು ಯಾರದ್ದು ಎಂದು ರಾಜ್ಯದ ಜನತೆಗೆ ತಿಳಿಯಬೇಕಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದಲ್ಲಿರುವುದು ಎಟಿಎಂ ಸರ್ಕಾರ ಎಂಬುದಕ್ಕೆ ಪ್ರತಿದಿನ ಸಾಕ್ಷಿ ಸಿಗುತ್ತಿದೆ. ಕೆಲದಿನಗಳ ಹಿಂದೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿತ್ತು ಸರ್ಕಾರ. ಈಗ ಗುತ್ತಿಗೆದಾರರ ಬಳಿ ಸಿಕ್ಕ 42 ಕೋಟಿ ರೂ. ಕಮಿಷನ್ ಕಲೆಕ್ಷನ್ ಹಣ ಎಂಬುದು ಸ್ಪಷ್ಟ. ಬೇರೆ ರಾಜ್ಯಗಳ ಚುನಾವಣೆಯಲ್ಲಿ ಹಣದ ಹೊಳೆ ಹರಿಸಲು ಕರ್ನಾಟಕವನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.