ಇಸ್ರೇಲ್‌ನಲ್ಲಿ ಸಿಲುಕಿರುವ ಮಂಗಳೂರಿಗರನ್ನ ನಮ್ಮ ಸರ್ಕಾರ ಸುರಕ್ಷಿತವಾಗಿ ಕರೆತರುತ್ತೆ: ನಳಿನ್ ಕುಮಾರ್ ಕಟೀಲ್ ಅಭಯ
ಇಸ್ರೇಲ್‌ನಲ್ಲಿ ಹಮಾಸ್ ಉಗ್ರರ ಅಟ್ಟಹಾಸದಿಂದ ಆರಂಭವಾಗಿರೋ ಯುದ್ಧದಿಂದ ಎರಡೂ ಕಡೆಯಿಂದಲೂ ಈಗಾಗಲೇ ಸಾವಿರಕ್ಕೂ ಹೆಚ್ಚು ಜನ ಸಾವಿನ ಮನೆ ಸೇರಿದ್ದಾರೆ. ಅದೇ ಇಸ್ರೇಲ್‌ನಲ್ಲಿ ರಾಜ್ಯದ ಕರಾವಳಿ ಜನ ಕೂಡಾ ಸಿಲುಕಿ ಒದ್ದಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು, ಸುರಕ್ಷಿತವಾಗಿ ಕರೆತರುವ ಅಭಯ ನೀಡಿದ್ದಾರೆ.
ಬೆಂಗಳೂರು, (ಅಕ್ಟೋಬರ್ 10): ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಮಹಾಕಾಳಗವೇ (Israel Hamas War,) ನಡೆಯುತ್ತಿದೆ. ದೀಪಾವಳಿ ಪಟಾಕಿಯಂತೆ ರಾಕೇಟ್‌ಗಳು ಸಿಡಿಯುತ್ತಿದ್ರೆ, ಕ್ಷಣಕ್ಷಣಕ್ಕೂ ಬಾಂಬ್ ದಾಳಿ ಹೆಚ್ಚಾಗುತ್ತಿದೆ. ಕಟ್ಟಡಗಳು ನೆಲಕ್ಕುರುತ್ತಿವೆ. ಈ ಸಮರದ ನಡುವೆ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಇನ್ನು ಇಸ್ರೇಲ್‌ನಲ್ಲಿ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಜನರ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್(nalin kumar kateel), ಇಸ್ರೇಲ್ ನಲ್ಲಿ ಐದು ಸಾವಿರ ದಕ್ಷಿಣ ಕನ್ನಡ ಜಿಲ್ಲೆಯ ಜನರು ಇದ್ದಾರೆಂಬ ಮಾಹಿತಿ ಇದೆ. ಈಗಾಗಲೇ ವಿದೇಶಾಂಗ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದೇನೆ. ಯಾರಿಗೂ ಅಪಾಯ ಆಗದಂತೆ ಅವರಿಗೆ ರಕ್ಷಣೆ ಒದಗಿಸುತ್ತೇವೆ ಅವರನ್ನು ಸುರಕ್ಷಿತವಾಗಿ ಕರೆ ತರುವ ಕೆಲಸ ನಮ್ಮ ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ.
ಮಂಗಳೂರಿನಲ್ಲಿ ಇಂದು( ಅಕ್ಟೋಬರ್ 10) ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಇಸ್ರೇಲ್‌ನಲ್ಲಿ ಐದು ಸಾವಿರ ದಕ್ಷಿಣ ಕನ್ನಡ ಜಿಲ್ಲೆಯ ಜನರು ಇದ್ದಾರೆಂಬ ಮಾಹಿತಿ ಇದೆ. ಈಗಾಗಲೇ ವಿದೇಶಾಂಗ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದೇನೆ. ಯಾರಿಗೂ ಅಪಾಯ ಆಗದಂತೆ ಅವರಿಗೆ ರಕ್ಷಣೆ ಒದಗಿಸ್ತೇವೆ. ಅವರನ್ನು ಸುರಕ್ಷಿತವಾಗಿ ಕರೆ ತರುವ ಕೆಲಸ ನಮ್ಮ ಸರ್ಕಾರ ಮಾಡಲಿದೆ. ಈ ಬಗ್ಗೆ ಸಚಿವ ಮುರಳೀಧರನ್ ಅವರ ಜೊತೆಗೂ ನಾನು ಮಾತನಾಡಿದ್ದೇನೆ ಎಂದರು.
ಇದನ್ನೂ ಓದಿ: ಇಸ್ರೇಲ್-ಪ್ಯಾಲೆಸ್ತೇನ್ ಸಂಘರ್ಷ; ಉದ್ಯೋಗಕ್ಕಾಗಿ ಇಸ್ರೇಲ್‌ನಲ್ಲಿ ಸಿಲುಕಿದ ಕರಾವಳಿಯ ಸಾವಿರಾರು ಜನ
ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರ ಜಿಲ್ಲಾಧಿಕಾರಿಗಳಿಗೆ ಜಿಲ್ಲೆಯ ಇಸ್ರೇಲ್ ವಾಸಿಗಳ ಪೂರ್ಣ ಮಾಹಿತಿ ತರಿಸಿ ಕೊಳ್ಳಲು ಸೂಚಿಸಿದ್ದೇನೆ. ಯುದ್ಧದ ಪರಿಸ್ಥಿತಿ ಇದ್ದಾಗ ಅವರ ಮನೆಯವರಿಗೆ ಆರಂಕ ಇರುತ್ತದೆ. ಈಗಲೂ ಇಸ್ರೇಲ್ ನಲ್ಲಿದ್ದವರು ಸುರಕ್ಷಿತವಾಗಿ ಇದ್ದರೂ ಭಯದ ವಾತಾವರಣ ಇದೆ. ರಷ್ಯಾ-ಉಕ್ರೇನ್ ಯುದ್ದ ಆದಾಗಲೂ ಇಂಥದ್ದೇ ಪರಿಸ್ಥಿತಿ ಇತ್ತು. ಆಗಲೂ ಅವರ ಮನೆಗಳಿಗೆ ತೆರಳಿ ಸಮಾಧಾನ ಹೇಳಿದ್ದೆವು. ಮೋದಿ ಸರ್ಕಾರ ಆಗಲೂ ಅಲ್ಲಿದ್ದ ಭಾರತೀಯರ ರಕ್ಷಣೆ ಮಾಡಿತ್ತು. ಈಗಲೂ ನಾನು ಎಂಬೆಸ್ಸಿ ಜೊತೆಗೆ ಸಂಪರ್ಕದಲ್ಲಿದ್ದೇನೆ. ಯಾರೂ ಭಯ ಪಡುವ ಅಗತ್ಯ ಇಲ್ಲ, ಏನೇ ಆತಂಕ ಇದ್ದರೂ ನನ್ನನ್ನ ನೇರವಾಗಿ ಸಂಪರ್ಕಿಸಿ ಎಂದು ತಿಳಿಸಿದರು.
ಮಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:30 pm, Tue, 10 October 23