ಮಂಗಳೂರು ಡಾಕ್ಟರುಗಳ ನಶಾ ಲೋಕ: ಊರು ಬಿಡುತ್ತಿರುವ ಆರೋಪಿ ವೈದ್ಯರು-ವಿದ್ಯಾರ್ಥಿಗಳು, ಬೆನ್ನುಹತ್ತಿದ CCB, ಅನೇಕರು ಅರೆಸ್ಟ್!

| Updated By: ಆಯೇಷಾ ಬಾನು

Updated on: Jan 13, 2023 | 12:58 PM

ಗಾಂಜಾ ಕೇಸ್​​ನಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜನ್ ಡಾ.ಬಾಲಾಜಿ ಹಾಗೂ ಪಿಜಿ ವಿದ್ಯಾರ್ಥಿ ಡಾ.ರಾಘವ ದತ್ತಾನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಡಾಕ್ಟರುಗಳ ನಶಾ ಲೋಕ: ಊರು ಬಿಡುತ್ತಿರುವ ಆರೋಪಿ ವೈದ್ಯರು-ವಿದ್ಯಾರ್ಥಿಗಳು, ಬೆನ್ನುಹತ್ತಿದ CCB, ಅನೇಕರು ಅರೆಸ್ಟ್!
ಡ್ರಗ್ಸ್
Follow us on

ಮಂಗಳೂರು: ಮಂಗಳೂರಿನಲ್ಲಿ ಡ್ರಗ್ಸ್ ದಂದೆ(Drugs) ಅಪರೇಷನ್ ಮುಂದುವರೆದಿದೆ. ಸಿಸಿಬಿ ಪೊಲೀಸರು(CCB Police) ಡ್ರಗ್ಸ್ ಜಾಲ ಪತ್ತೆಗೆ ಬಲೆ ಬೀಸಿದ್ದು ಇಂದು ಭರ್ಜರಿ ಭೇಟೆಯಾಡಿ ಅನೇಕರನ್ನು ಬಂಧಿಸಿದ್ದಾರೆ. ಉಡುಪಿಯ ಪ್ರತಿಷ್ಠಿತ ಕಾಲೇಜಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜನ್ ಹಾಗೂ ಓರ್ವ ವೈದ್ಯಕೀಯ ವಿದ್ಯಾರ್ಥಿಯನ್ನು ಅರೆಸ್ಟ್ ಮಾಡಲಾಗಿದೆ.

ಡ್ರಗ್ಸ್ ಪೂರೈಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲೆ ಕಾರ್ಕಳ ಮೂಲದ ಸುಕೇತ್ ಕಾವಾ(33), ಉಡುಪಿಯ ಸುನೀಲ್(32), ತಮಿಳುನಾಡಿನ ಅರವಿಂದ(24) ಬಂಧಿತ ಆರೋಪಿಗಳು. ಪೊಲೀಸರು ಆರೋಪಿಗಳಿಂದ ಗಾಂಜಾದಿಂದ ತಯಾರಿಸಿದ ಭಾರಿ ಪ್ರಮಾಣದ ಚರಸ್ ಜಪ್ತಿ ಮಾಡಿದ್ದಾರೆ. ಆರೋಪಿಗಳು ಉತ್ತರ ಪ್ರದೇಶದಿಂದ ರೈಲಿನಲ್ಲಿ ಗಾಂಜಾ ತಂದು ಮಂಗಳೂರಿನ ಉದ್ಯಮಿಗಳು, ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು.

ಗಾಂಜಾ ಕೇಸ್​​ನಲ್ಲಿ ಮತ್ತೊಬ್ಬ ವೈದ್ಯ, ವೈದ್ಯಕೀಯ ವಿದ್ಯಾರ್ಥಿ ಬಂಧನ

ಇನ್ನು ಗಾಂಜಾ ಕೇಸ್​​ನಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜನ್ ಡಾ.ಬಾಲಾಜಿ(29) ಹಾಗೂ ಪಿಜಿ ವಿದ್ಯಾರ್ಥಿ ಡಾ.ರಾಘವ ದತ್ತಾನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಾಗೂ ಮಂಗಳೂರಿನ ಕುಂಟಿಕಾನ ಬಳಿ ಕಾರಿನಲ್ಲಿ‌ ಗಾಂಜಾ ಸಾಗಿಸುತ್ತಿದ್ದಾಗ 10 ಗಾಂಜಾ ಸಮೇತ ಓರ್ವ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ವಿಜಯ ಕುಮಾರ್ ಶೆಟ್ಟಿ(24) ಬಂಧಿತ ಆರೋಪಿ. ಈತ ಚಿಕ್ಕಮಗಳೂರು ಜಿಲ್ಲೆ ಎ‌ನ್‌.ಆರ್.ಪುರ ತಾಲೂಕಿನ ನಿವಾಸಿಯಾಗಿದ್ದು ಆಂಧ್ರದಿಂದ ಬೆಂಗಳೂರು ಮೂಲಕ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಕಾರು, ಮೊಬೈಲ್ ಸೇರಿ​​​ 5.65 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದ್ದು ಮಂಗಳೂರಿನ ಉರ್ವಾ ಪೊಲೀಸ್​​ ಠಾಣೆಗೆ ಪ್ರಕರಣ ಹಸ್ತಾಂತರಿಸಲಾಗಿದೆ. ಈತ ಈ ಹಿಂದೆ ಉಡುಪಿ, ಚಿಕ್ಕಮಗಳೂರಲ್ಲಿ ಗಾಂಜಾ ಕೇಸ್​ನಲ್ಲಿ ಅರೆಸ್ಟ್ ಆಗಿದ್ದ.

ಮಂಗಳೂರಿನ ಮೆಡಿಕಲ್​ ಕಾಲೇಜಿನಲ್ಲಿ ಹೆಚ್ಚಿದ ಬಂಧನ ಭೀತಿ

ಗಾಂಜಾ ಕೇಸ್​​ನಲ್ಲಿ ವೈದ್ಯರು, ವಿದ್ಯಾರ್ಥಿಗಳ ಬಂಧನ ಹಿನ್ನೆಲೆ ಮಂಗಳೂರಿನ ಮೆಡಿಕಲ್​ ಕಾಲೇಜಿನಲ್ಲಿ ಬಂಧನ ಭೀತಿ ಹೆಚ್ಚಿದೆ. ಕಾಲೇಜಿನಿಂದ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಕಾಲ್ಕಿತ್ತಿದ್ದಾರೆ. ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ಊರು ಬಿಟ್ಟು ಎಸ್ಕೇಪ್ ಆಗುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇನ್ನು ಮಂಗಳೂರು ಪೊಲೀಸ್ ಕಮಿಷನರ್ ಎನ್‌.ಶಶಿಕುಮಾರ್ ಈ ಬಗ್ಗೆ ಮಾತನಾಡಿದ್ದು, ನಿನ್ನೆವರೆಗೂ 13 ಜನರ ಬಂಧನ ಆಗಿತ್ತು. 11 ಮಂದಿ ವೈದ್ಯರು, ವಿದ್ಯಾರ್ಥಿಗಳು ಇದ್ದರು. ಇದರಲ್ಲಿ ಒಬ್ಬರು ವೈದ್ಯರು ಮನೆಯಲ್ಲಿ ಪಾರ್ಟಿ ಮಾಡಿ ಮಾದಕ ವಸ್ತು ಪೂರೈಸುತ್ತಿದ್ದರು. ಪಾರ್ಟಿಗೆ ಬರುವ ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಮಾಡ್ತಾ ಇದ್ದರು. ಸದ್ಯ ಪ್ರಕರಣ ಬೆಳಕಿಗೆ ಬರ್ತಾ ಇದ್ದಂತೆ ಹಲವರು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ‌ನೊಟೀಸ್ ನೀಡಲು ಹೋದಾಗ ತಪ್ಪಿಸಿಕೊಂಡಿದ್ದಾರೆ. ಹಲವಾರು ವೈದ್ಯಕೀಯ ವಿದ್ಯಾರ್ಥಿಗಳು ಎಸ್ಕೇಪ್ ಹಾಕಿದ್ದಾರೆ. ಪಿಜಿಗಳಲ್ಲಿ‌ ಮಾಹಿತಿ ಕಲೆ ಹಾಕಿ ಅವರ ಬಂಧನ ಮಾಡ್ತೀವಿ. ಪಿಜಿ ಮಾಲೀಕರು ಕೂಡ ಅವರ ಮೇಲೆ ಕಣ್ಣಿಡಲು ಸೂಚನೆ ನೀಡಿದ್ದೇವೆ. ಪೆಡ್ಲರ್ ನೀಲ್ ಬೆಂಗಳೂರು, ದೆಹಲಿ, ಆಂಧ್ರ ಪ್ರದೇಶದಿಂದ ಗಾಂಜಾ ತರಿಸಿದ್ದಾನೆ. ಈ ಬಗ್ಗೆ ಪೋಸ್ಟ್ ‌ಮತ್ತು ಕೊರಿಯರ್ ಗಳ ಮೇಲೆ ಕಣ್ಣಿಡಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.

Published On - 12:36 pm, Fri, 13 January 23