ಮಂಗಳೂರು, ಮಾರ್ಚ್ 18: ಮಲೆನಾಡು ಮತ್ತು ಕರಾವಳಿಯಲ್ಲಿ ಭಾಗದಲ್ಲಿ ನಕ್ಸಲರ (Naxal) ಚುಟುವಟಿಕೆ ಮತ್ತೆ ಶುರುವಾಗಿದೆ. ಐದು ವರ್ಷಗಳ ಬಳಿಕ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ನಕ್ಸಲರು ಮತ್ತೆ ಕಾಣಿಸಿಕೊಂಡಿದ್ದಾರೆ. ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ಇರುವ ಅಂಗಡಿಯೊಂದಕ್ಕೆ ಎಂಟು ಜನ ನಕ್ಸಲರು ತೆರಳಿ ದಿನಸಿ ಖರೀದಿಸಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಕ್ಸಲರಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ನಕ್ಸಲರು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕೂಜಿಮಲೆ, ಕಲ್ಮಕಾರ್ಕ್ಕೆ ನಕ್ಸಲ್ ನಿಗ್ರಹ ಪಡೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಕೆಲ ದಿನಗಳ ಹಿಂದೆ ಕೊಲ್ಲೂರು ಭಾಗದಲ್ಲಿ ಕಾಣಿಸಿ ಕೊಂಡಿದ್ದ ನಕ್ಸಲರು, ಇದೀಗ ದಕ್ಷಿಣ ಕನ್ನಡದ ಗಡಿ ಭಾಗದಲ್ಲಿ ಪ್ರತ್ಯಕ್ಷವಾಗಿದ್ದಾರೆ.
ನಕ್ಸಲರು ಕಳೆದ ತಿಂಗಳು ಫೆಬ್ರವರಿಯಲ್ಲಿ ಕೇರಳದಿಂದ ಉಡುಪಿ ಜಿಲ್ಲೆಯ ಬೈಂದೂರುಗೆ ಆಗಮಿಸಿರುವ ಅನುಮಾನ ವ್ಯಕ್ತವಾಗಿತ್ತು. ಉಡುಪಿಯ ಹೆಬ್ರಿ ಮೂಲದ ವಿಕ್ರಮ್ ಗೌಡ ನೇತೃತ್ವದ ನಕ್ಸಲರ ತಂಡ ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್ ಗ್ರಾಮ ಸುತ್ತಮುತ್ತ ಓಡಾಡಿರುವ ಶಂಕೆ ಮೂಡಿತ್ತು. ವಿಕ್ರಮ್ ಗೌಡ ಸುಮಾರು 20 ವರ್ಷಗಳ ಹಿಂದೆ ನಕ್ಸಲೈಟ್ ಆಗಿದ್ದಾನೆ. ಕೇರಳದಲ್ಲಿ ಈತ ತನ್ನ ಚಟುವಟಿಕೆಗಳನ್ನು ನಡೆಸುತ್ತಿದ್ದನು.
ಇದನ್ನೂ ಓದಿ: ಉಡುಪಿ ವ್ಯಾಪ್ತಿಯಲ್ಲಿ ನಕ್ಸಲರ ಓಡಾಟ ಕೇಸ್ಗೆ ಬಿಗ್ ಟ್ವಿಸ್ಟ್: ನಕ್ಸಲರ ಕಥೆ ಹಿಂದಿದೆಯಾ ಡ್ರಗ್ ಮಾಫಿಯಾ?
ಬಿ.ಜಿ ಕೃಷ್ಣಮೂರ್ತಿ ಬಳಿಕ ಕರ್ನಾಟಕದ ನಕ್ಸಲ್ ನಾಯಕತ್ವವನ್ನು ವಿಕ್ರಂ ಗೌಡ ವಹಿಸಿಕೊಂಡಿದ್ದಾನೆ. ಈತನ ತಂಡದ ಮೂವರು ಮೂವರು ಸಶಸ್ತ್ರಧಾರಿಯಾಗಿ ಬೈಂದೂರಿಗೆ ಆಗಮಿಸಿರುವ ಮಾಹಿತಿ ಲಭ್ಯವಾಗಿತ್ತು. ಈ ಮೂವರು ಗ್ರಾಮದ ಮನೆಗಳಿಗೂ ತೆರಳಿ ಹೋಗಿರುವುದಾಗಿ ಮಾಹಿತಿ ಸಿಕ್ಕಿತ್ತು. ನಕ್ಸಲರ ಓಡಾಟ ಮಾಹಿತಿ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿ, ವರ್ಷಗಳ ನಂತರ ಮತ್ತೆ ಬೈಂದೂರಿನಲ್ಲಿ ಕಾರ್ಯಾಚರಣೆ ನಡೆಸಿದ್ದರು.
1990 ರಿಂದ 2012ರ ವರೆಗೆ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಉತ್ತುಂಗದಲ್ಲಿತ್ತು. ಸುಮಾರು 40 ರಿಂದ 45 ಸಕ್ರಿಯ ಸಶಸ್ತ್ರ ನಕ್ಸಲರು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೀದರ್, ರಾಯಚೂರು, ಬಳ್ಳಾರಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದರು.
2005 ಮತ್ತು 2012 ರ ನಡುವೆ, ಎಎನ್ಎಫ್ ಅಧಿಕಾರಿಗಳ 11 ಎನ್‌ಕೌಂಟರ್‌ಗಳಲ್ಲಿ 19 ನಕ್ಸಲರು ಮೃತಪಟ್ಟಿದ್ದರು. ಈ ಕಾರ್ಯಾಚರಣೆಯಲ್ಲಿ ಮೂವರು ಅಧಿಕಾರಿಗಳು ಹುತಾತ್ಮರಾಗಿದ್ದರು. 2005 ರಲ್ಲಿ ತುಮಕೂರಿನಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಎಂಟು ಜನ ಸಿಬ್ಬಂದಿಗಳು ಮೃತಪಟ್ಟಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ