Yettinahole Premier League: ಬರಿದಾದ ನೇತ್ರಾವತಿ; ಆಕ್ರೋಶಭರಿತ ಪರಿಸರವಾದಿಗಳಿಂದ ಎತ್ತಿನಹೊಳೆ ಪ್ರೀಮಿಯರ್ ಲೀಗ್!

ಅವೈಜ್ಞಾನಿಕ ಎತ್ತಿನಹೊಳೆ ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳು ಬತ್ತಿಹೋಗಿವೆ ಎಂದು ‘ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ’ ಹಾಗೂ ‘ಸಹ್ಯಾದ್ರಿ ಸಂಚಯ’ ಆರೋಪಿಸಿ ವಿನೂತನ ಪ್ರತಿಭಟನೆ ನಡೆಸಿವೆ.

Yettinahole Premier League: ಬರಿದಾದ ನೇತ್ರಾವತಿ; ಆಕ್ರೋಶಭರಿತ ಪರಿಸರವಾದಿಗಳಿಂದ ಎತ್ತಿನಹೊಳೆ ಪ್ರೀಮಿಯರ್ ಲೀಗ್!
ಎತ್ತಿನಹೊಳೆ ಪ್ರೀಮಿಯರ್ ಲೀಗ್ ಚಿತ್ರ (ಚಿತ್ರ ಕೃಪೆ; ದಿನೇಶ್ ಹೊಳ್ಳ ಅವರ ಫೇಸ್​ಬುಕ್ ಖಾತೆ)Image Credit source: Facebook
Follow us
Ganapathi Sharma
|

Updated on: May 01, 2023 | 5:20 PM

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ಎಂದೇ ಪರಿಗಣಿಸಲಾಗಿರುವ ನೇತ್ರಾವತಿ (Netravati River) ನದಿಯಲ್ಲಿ ಜೀವ ಜಲ ಬತ್ತಿಹೋಗಲು ಎತ್ತಿನಹೊಳೆ ಅವೈಜ್ಞಾನಿಕ ಯೋಜನೆಯೇ ಕಾರಣ ಎಂದು ಆರೋಪಿಸಿರುವ ಪರಿಸರವಾದಿಗಳು ವಿನೂತನ ಪ್ರತಿಭಟನೆ ಮೂಲಕ ಪರಿಸರ ಜಾಗೃತಿ ಮೂಡಿಸಲು ಪ್ರಯತ್ನಪಟ್ಟಿದ್ದಾರೆ. ಅವೈಜ್ಞಾನಿಕ ಎತ್ತಿನಹೊಳೆ ಯೋಜನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳು ಬತ್ತಿಹೋಗಿವೆ ಎಂದು ‘ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (NSEF)’ ಹಾಗೂ ‘ಸಹ್ಯಾದ್ರಿ ಸಂಚಯ’ ಆರೋಪಿಸಿದ್ದು, ಎತ್ತಿನಹೊಳೆ ಪ್ರೀಮಿಯರ್ ಲೀಗ್ ಆಯೋಜಿಸುವ ಮೂಲಕ, ಯೋಜನೆ ಹಮ್ಮಿಕೊಂಡಿದ್ದ ರಾಜಕಾರಣಿಗಳ ವಿರುದ್ಧ ವ್ಯಂಗ್ಯಭರಿತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ರಾಜ್ಯದ ಇಬ್ಬರು ಮಾಜಿ ಮುಖ್ಯ ಮಂತ್ರಿಗಳಾದ ವೀರಪ್ಪ ಮೊಯ್ಲಿ, ಸದಾನಂದ ಗೌಡ ಮತ್ತು ಜಿಲ್ಲೆಯ ಶಾಸಕ, ಸಂಸದರು ಒಟ್ಟು ಸೇರಿ ಉಪ್ಪಿನಂಗಡಿಯ ಸಹಸ್ರ ಲಿಂಗೇಶ್ವರ ದೇವಸ್ಥಾನದ ಕೆಳಗೆ ಒಂದು ಸುಂದರವಾದ ಕ್ರೀಡಾಂಗಣವನ್ನು ನಿರ್ಮಿಸಿದ್ದಾರೆ. ಉಪ್ಪಿನಂಗಡಿಯ ನೇತ್ರಾವತಿ ಕುಮಾರಧಾರ ಸಂಗಮ ಕ್ಷೇತ್ರದಲ್ಲಿ ‘ವೀರಪ್ಪ – ಸದಾನಂದ ಕ್ರೀಡಾಂಗಣ’ವನ್ನು ಇಂದು ಉದ್ಘಾಟನೆ ಮಾಡಿ ಅದರಲ್ಲಿ ಇಂದು ಉದ್ಘಾಟನಾ ಕಾರ್ಯಕ್ರಮವಾಗಿ ‘ಎತ್ತಿನಹೊಳೆ ಪ್ರೀಮಿಯರ್ ಲೀಗ್’ ಎಂಬ ಕ್ರಿಕೆಟ್ ಪಂದ್ಯಾಟವನ್ನು ಆಡಲಾಯಿತು’ ಎಂದು ಪರಿಸರ ಹೋರಾಟಗಾರ, ಸಹ್ಯಾದ್ರಿ ಸಂಚಯದ ದಿನೇಶ್ ಹೊಳ್ಳ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ ಮಾಜಿ ಮುಖ್ಯ ಮಂತ್ರಿಗಳಿಬ್ಬರಿಗೆ ನಾವು ವಿಶೇಷ ಧನ್ಯವಾದವನ್ನು ಹೇಳಲೇಬೇಕು. ಯಾಕೆಂದರೆ ಇಡೀ ಜಗತ್ತಿನಲ್ಲೇ ಈವರೆಗೆ ಒಂದು ಸಮೃದ್ಧವಾಗಿ ಹರಿಯುವ ನದಿಯನ್ನು ಸಂಪೂರ್ಣ ಬತ್ತಿಸಿ ಒಂದು ಸುಂದರವಾದ ಕ್ರೀಡಾಂಗಣವನ್ನು ನಿರ್ಮಿಸಿ ಕೊಟ್ಟವರು ಯಾರೂ ಇಲ್ಲ. ಇದು ತುಳುನಾಡಿಗೆ ಅವರು ನೀಡಿರುವ ಶ್ರೇಷ್ಠ ಕೊಡುಗೆ. ಇಂತಹ ಜನ ಪ್ರತಿನಿಧಿಗಳನ್ನು ಪಡೆದ ನಾವೆಷ್ಟು ಧನ್ಯರು. ಎತ್ತಿನಹೊಳೆ ಯೋಜನೆ ಮತ್ತು ಪಶ್ಚಿಮ ಘಟ್ಟದಲ್ಲಿ ಅಸಂಬದ್ಧ ಯೋಜನೆಗಳಿದಾಗಿ ನೇತ್ರಾವತಿ ಸಂಪೂರ್ಣ ಬರಿದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಮತ್ತು ತಾಪಮಾನ ಹೆಚ್ಚಾಗಿ ಪ್ರಾಕೃತಿಕ ಅಸಮತೋಲವಾಗುತ್ತಾ ಇದೆ. ಉಪ್ಪಿನಂಗಡಿಯಲ್ಲಿ ತುಂಬಿ ಹರಿಯಬೇಕಾಗಿದ್ದ ನೇತ್ರಾವತಿ ಸಂಪೂರ್ಣ ಬಡಕಲಾಗಿ ನದಿ ಇರುವುದಕ್ಕೆ ಸಾಕ್ಷಿಯೇ ಇಲ್ಲದಂತಾಗಿ ಸ್ಟೇಡಿಯಂ ಆಗಿ ಬಿಟ್ಟಿದೆ. ಇಂದಿನ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ ಮೂರು ಬಕೆಟ್ ನೀರು, ದ್ವಿತೀಯ ಬಹುಮಾನವಾಗಿ ಎರಡು ಬಕೆಟ್ ನೀರು, ತೃತೀಯ ಬಹುಮಾನ ಒಂದು ಲೀಟರ್ ನೀರನ್ನು ನೀಡಲಾಯಿತು. ನೇತ್ರಾವತಿಯ ಮೀನು, ಕಪ್ಪೆ, ಆಮೆ, ಏಡಿಗಳು ವೀಕ್ಷಕರಾಗಿ ಪಂದ್ಯಾಟವನ್ನು ಅಗೋಚರವಾಗಿ ನೋಡುತ್ತಿದ್ದವು. ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಶಶಿಧರ್ ಶೆಟ್ಟಿ ಮತ್ತು ತಂಡದ ಎಲ್ಲರಿಗೂ ವಂದನೆಗಳು. ಜೈ ನೇತ್ರಾವತಿ’ ಎಂದು ದಿನೇಶ್ ಹೊಳ್ಳ ಬರೆದುಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ