ಮಂಗಳೂರು / ಬೆಂಗಳೂರು / ತಿರುವನಂತಪುರ / ಚೆನ್ನೈ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಗುರುವಾರ ನಸುಕಿನಲ್ಲಿ ನಗರ ಸೇರಿದಂತೆ ದೇಶಾದ್ಯಂತ ವಿವಿಧೆಡೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು ಎಸ್ಡಿಪಿಐ ಕಚೇರಿಗಳು ಹಾಗೂ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯನ್ನು ವಿರೋಧಿಸಿ ಕೇರಳದ ವಿವಿಧೆಡೆ ಮತ್ತು ಮಂಗಳೂರು ನಗರದಲ್ಲಿ ಹಲವರು ‘ಎನ್ಐಎ ಗೋಬ್ಯಾಕ್’ (NIA Go Back) ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ‘ಗಾಳಿಮಾತಿಗೆ ಕಿವಿಕೊಡಬೇಡಿ, ಶಾಂತಿ ಕಾಪಾಡಿ’ ಎಂದು ಮನವಿ ಮಾಡಿದ್ದಾರೆ.
ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಪ್ರತಿಭಟನಾ ನಿರತರನ್ನು ಚದುರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಶಶಿಕುಮಾರ್, ‘ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಿದಾಡುತ್ತಿದೆ. ಸುಳ್ಳು ಮಾಹಿತಿ ಹರಡುವವರ ಮೇಲೆ ನಾವು ಕಣ್ಣಿದ್ದೇವೆ’ ಎಂದು ಎಚ್ಚರಿಸಿದರು. ‘ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ದಾಳಿ ವಿರೋಧಿಸಿ ಕೆಲವರು ಘೋಷಣೆಗಳನ್ನು ಕೂಗುತ್ತಿದ್ದರು. ಪೊಲೀಸರು ಅಥವಾ ಸರ್ಕಾರಿ ಸಂಸ್ಥೆಗಳ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಬಾರದು ಎಂದು ತಿಳಿಹೇಳಿದೆವು. ಬಂದರು ಏರಿಯಾ ತುಂಬಾ ಸೂಕ್ಷ್ಮ ಪ್ರದೇಶ. ನಮ್ಮ ಮಾತು ಕೇಳಲಿಲ್ಲ, ಹೀಗಾಗಿ ಅವರನ್ನು ಬಂಧಿಸಬೇಕಾಯಿತು’ ಎಂದು ಹೇಳಿದರು.
‘500 ಜನರು ಸೇರಿದ್ದಾರೆ, ಜೋರಾಗಿ ಪ್ರತಿಭಟನೆ ಮಾಡುತ್ತಿದ್ದಾರೆ, ರಸ್ತೆತಡೆ ನಡೆಯುತ್ತಿದೆ ಎಂದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಿಬಿಡಲಾಗುತ್ತಿದೆ. ಜೋಕಟ್ಟೆ ಮತ್ತು ಕಾವೂರು ಬಳಿ ಒಂದಿಷ್ಟು ಜನರು ಸೇರಿದ್ದರು. ನಾವು ಪ್ರತಿಭಟನೆಗೆ ಅವಕಾಶ ಕೊಡೆದೆ ಚದುರಿಸಿದೆವು. ಈಗ ಬಂದರು ಪ್ರದೇಶಕ್ಕೆ ಬಂದಿದ್ದ 60 ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದೇವೆ. ಬೆಳಿಗ್ಗೆ 8 ಗಂಟೆಯಿಂದ ಎಲ್ಲ ಮುಖ್ಯ ಅಂಗಡಿ ಮುಗ್ಗಟ್ಟುಗಳು ತೆರೆಯಲಿವೆ. ಇದು ಮುಖ್ಯ ವಾಣಿಜ್ಯ ಸ್ಥಳ. ಹೀಗಾಗಿ ನಾವು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಇಚ್ಛಿಸಲ್ಲ. ಎನ್ಐಎ ಸರ್ಚ್ ಆಪರೇಷನ್ ಎನ್ನುವುದು ಸಾಮಾನ್ಯ ಪ್ರಕ್ರಿಯೆ. ಇದರಲ್ಲಿ ಗೊಂದಲ, ಗಾಳಿಮಾತಿಗೆ ಅವಕಾಶ ಬೇಡ’ ಎಂದು ಅವರು ಮನವಿ ಮಾಡಿದರು.
ಬೆಂಗಳೂರಿನಲ್ಲಿಯೂ ದಾಳಿ
ಬೆಂಗಳೂರಿನ ರಿಚ್ಮಂಡ್ ಟೌನ್ನಲ್ಲಿರುವ ಅಪಾರ್ಟ್ಮೆಂಟ್ ಒಂದರ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದ್ದು, ರಸ್ತೆಯಲ್ಲಿ ಸಂಚರಿಸುವವರನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಈ ಅಪಾರ್ಟ್ಮೆಂಟ್ನಲ್ಲಿ ಯಾರು ವಾಸವಿದ್ದರು? ಏಕೆ ದಾಳಿ ನಡೆದಿದೆ ಎಂಬ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಕೇರಳದಲ್ಲಿ ಎನ್ಐಎ ದಾಳಿ
ಕೇರಳದ ಮಾಂಜೇರಿ, ಮಲಪ್ಪುರಂ ಜಿಲ್ಲಾ ಪಿಎಫ್ಐ ಘಟಕಗಳ ಅಧ್ಯಕ್ಷ ಒ.ಎಂ.ಎ.ಸಲ್ಮಾನ್ ಮತ್ತು ಇತರರ ಮನೆಗಳು ಹಾಗೂ ಪಿಎಫ್ಐ ಕಚೇರಿಗಳ ಮೇಲೆ ಎನ್ಐಎ ದಾಳಿ ನಡೆಸಿದೆ. ಎನ್ಐಎ ದಾಳಿ ವಿರೋಧಿಸಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಭಯೋತ್ಪಾದಕರಿಗೆ ಹಣದ ನೆರವು ಒದಗಿಸುವುದು, ತರಬೇತಿ ಶಿಬಿರ ಆಯೋಜನೆ ಮತ್ತು ಸಾರ್ವಜನಿಕರನ್ನು ಉಗ್ರಗಾಮಿ ಸಂಘಟನೆಗಳಿಗೆ ಸೇರ್ಪಡೆಗೊಳ್ಳಲು ಮನವೊಲಿಸುವುದು ಸೇರಿದಂತೆ ಹಲವು ಆಯಾಮದಲ್ಲಿ ತನಿಖೆ ನಡೆಯುತ್ತಿದೆ.
ತಮಿಳುನಾಡಿನಲ್ಲಿಯೂ ಎನ್ಐಎ ದಾಳಿ
ತಮಿಳುನಾಡಿನ ಕೊಯಮತ್ತೂರು, ಕಡಲೂರು, ರಾಮ್ನದ್, ದಿಂಡಿಗಲ್, ತೇಣಿ ಮತ್ತು ತೆನ್ಕಾಸಿ ನಗರಗಳಲ್ಲಿ ಎನ್ಐಎ ದಾಳಿ ನಡೆದಿದೆ. ಚೆನ್ನೈನ ಪುರಸವಕ್ಕಮ್ ಪ್ರದೇಶದಲ್ಲಿರುವ ಪಿಎಫ್ಐ ರಾಜ್ಯ ಘಟಕದ ಮುಖ್ಯ ಕಚೇರಿಗೂ ಅಧಿಕಾರಿಗಳು ಪ್ರವೇಶಿಸಿ ತಪಾಸಣೆ ನಡೆಸುತ್ತಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ: ಎನ್ಐಎ ತನಿಖೆ ಚುರುಕು
ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಜುಲೈ 26ರ ರಾತ್ರಿ ಬಿಜೆಪಿಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಕಾರ್ಯಕರ್ತರ ತೀವ್ರ ಒತ್ತಾಯದ ನಂತರ ಪ್ರಕರಣದ ತನಿಖೆಯನ್ನು ಎನ್ಐಎ ಗೆ ವಹಿಸಲಾಯಿತು. ತನಿಖೆ ಆರಂಭಿಸಿರುವ ಅಧಿಕಾರಿಗಳು ಸೆ 6ರಂದು ಸುಳ್ಯ ಹಾಗೂ ಪುತ್ತೂರು ತಾಲ್ಲೂಕಿನ 32 ಕಡೆಗಳಲ್ಲಿ ಮನೆಗಳು ಹಾಗು ಇತರೆ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದರು. ಇದೀಗ ಬಂಧಿತರಾಗಿರುವ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳು ಮತ್ತು ಆರೋಪಿಗಳಿಗೆ ಸಹಕಾರ ನೀಡಿದವರ ವಿಚಾರಣೆಯನ್ನೂ ಎನ್ಐಎ ನಡೆಸುತ್ತಿದೆ.
Published On - 8:08 am, Thu, 22 September 22