ನಾಳೆ ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ: 3,700 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ, 1 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ: ಸಚಿವ ಸುನಿಲ್ ಕುಮಾರ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 01, 2022 | 2:40 PM

ಪ್ರಧಾನಿಯವರು ಬಂದು ವಾಪಾಸ್ ಹೋಗುವವರೆಗೆ ಎಲ್ಲಾ ‌ಭದ್ರತೆ ಮಾಡಲಾಗಿದೆ. ಡಿಜಿಪಿ ಮತ್ತು ಎಡಿಜಿಪಿಯವರ ಸಂಪೂರ್ಣ ಭದ್ರತೆ ನೋಡಿಕೊಳ್ತಾರೆ. ಮಂಗಳೂರು ‌ಕಮಿಷನರ್ ನೇತೃತ್ವದಲ್ಲಿ ಸಂಪೂರ್ಣ ಭದ್ರತೆ ಮಾಡಿಕೊಳ್ಳಲಾಗಿದೆ.

ನಾಳೆ ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ: 3,700 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ, 1 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ: ಸಚಿವ ಸುನಿಲ್ ಕುಮಾರ್
ಪ್ರಧಾನಿ ನರೇಂದ್ರ ಮೋದಿ
Follow us on

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಸೆಪ್ಟೆಂಬರ್ 1 ಮತ್ತು 2ರಂದು ಕರ್ನಾಟಕ ಹಾಗೂ ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 2ರಂದು ಪ್ರಧಾನಿ ಮೋದಿ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಈ ಕುರಿತಾಗಿ ಇಂಧನ ಸಚಿವ ವಿ.ಸುನಿಲ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ನಾಳೆ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. 3,700 ಕೋಟಿ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ ನೀಡುತ್ತಾರೆ. ಬಳಿಕ ಕಾರ್ಯಕ್ರಮ ಉದ್ದೇಶಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ 1 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಕೃಷಿ ಸಮ್ಮಾನ್, ವಿದ್ಯಾನಿಧಿ ಸೇರಿ ಹಲವು ಫಲಾನುಭವಿಗಳು ಭಾಗಿಯಾಗಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಜನರು ಆಗಮಿಸುತ್ತಿದ್ದಾರೆ.  ಜನರನ್ನು ಕರೆತರಲು 2 ಸಾವಿರ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿಕೆ ನೀಡಿದರು.

ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದ ಅಲೋಕ್ ಕುಮಾರ್:

ಇನ್ನೂ ಕಾರ್ಯಕ್ರಮ ನಡೆಯುವ ಸ್ಥಳವನ್ನು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಕಾನೂನು ಪರಿಶೀಲಿಸಿದರು. ಬಳಿಕ ಪೊಲೀಸ್ ರೋಲ್ ಕಾಲ್ ಮಾಡಿದ್ದು, ರೋಲ್ ಕಾಲ್​ನಲ್ಲಿ ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದರು.
ಡ್ಯೂಟಿ ಮಾಡೋದು ಬಿಟ್ಟು ಮೊಬೈಲ್​ನಲ್ಲಿ ಮಾತನಾಡುವುದು, ಸೆಲ್ಫಿ ತೆಗೆಯುವುದು ಮಾಡಿದ್ರೆ ಮೊಬೈಲ್ ಸೀಜ್ ಮಾಡಲಾಗುವುದು. ಜನರ ಜೊತೆ ಭಾಷಣ ಕೇಳುತ್ತ ಮೈ ಮರೆತರೆ ಜೋಕೆ. ಕಟ್ಟುನಿಟ್ಟಾಗಿ ತಪಾಸಣೆ ನಡೆಯಬೇಕು. ಅಡಿ ಇಂದ ಮುಡಿಯವರೆಗೂ ಚೆಕ್ ಮಾಡಿ ಒಳಗೆ ಬಿಡಬೇಕು. ಯಾರ ಮೇಲೂ ಹಲ್ಲೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ಪ್ರಧಾನಿಯವರು ಬಂದು ವಾಪಾಸ್ ಹೋಗುವವರೆಗೆ ಸಕಲ ‌ಭದ್ರತೆ:

ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಯಾಗಿದ್ದು, ಮಂಗಳೂರು ನಗರದಾದ್ಯಂತ ಪೊಲೀಸ್ ಸರ್ಪಗಾವಲು ವಹಿಸಲಾಗಿದೆ. ಎಸ್​ಪಿಜಿ ಅಧಿಕಾರಿಗಳಿಂದ ವೇದಿಕೆಯ ಭದ್ರತೆ ಪರಿಶೀಲನೆ ಮಾಡಿದ್ದು, ಕಾರ್ಯಕ್ರಮದ ವೇದಿಕೆ ಸುತ್ತ ತಡೆ ಬೇಲಿ ಹಾಕಿ ಭದ್ರತೆ ಹಾಕಲಾಗಿದೆ. ಭದ್ರತೆಗೆ ಹೊರ ಜಿಲ್ಲೆಗಳಿಂದಲೂ ಪೊಲೀಸರ ನಿಯೋಜನೆ ಮಾಡಿದ್ದು, ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಮಂಗಳೂರಿಗೆ ಆಗಮಿಸಿದೆ. ಮೋದಿ ಸಮಾವೇಶದ ಮೈದಾನ ಪರಿಶೀಲಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದು, ಪ್ರಧಾನಿಯವರು ಬಂದು ವಾಪಾಸ್ ಹೋಗುವವರೆಗೆ ಎಲ್ಲಾ ‌ಭದ್ರತೆ ಮಾಡಲಾಗಿದೆ. ಡಿಜಿಪಿ ಮತ್ತು ಎಡಿಜಿಪಿಯವರ ಸಂಪೂರ್ಣ ಭದ್ರತೆ ನೋಡಿಕೊಳ್ತಾರೆ.

ಮಂಗಳೂರು ‌ಕಮಿಷನರ್ ನೇತೃತ್ವದಲ್ಲಿ ಸಂಪೂರ್ಣ ಭದ್ರತೆ ಮಾಡಿಕೊಳ್ಳಲಾಗಿದೆ. 100 ಜನ ಉನ್ನತ ಪೊಲೀಸ್ ಅಧಿಕಾರಿಗಳು ಇಲ್ಲಿ ಇರ್ತಾರೆ. ಸುಮಾರು 2000 ಸಾವಿರ ಸಿವಿಲ್ ಪೊಲೀಸರು ಭದ್ರತೆಗೆ ನೇಮಿಸಲಾಗಿದೆ. ಕೆಎಸ್ಸಾರ್ಪಿ, ಸಿಎಆರ್, ಎಎನ್​ಎಫ್, ಆರ್​ಎಎಫ್​ಕೋಸ್ಟಲ್ ಸೆಕ್ಯೂರಿಟಿ, ಐಎಸ್​ಡಿ ಹಾಗೂ ಗರುಡ ಪಡೆ ಇರುತ್ತೆ. ಒಟ್ಟಾರೆ ಮೂರು ಸಾವಿರ ಪೊಲೀಸ್ ಭದ್ರತೆ ಇರಲಿದೆ. ಸಂಸದ ನಳಿನ್ ಕುಮಾರ್, ಉಸ್ತುವಾರಿ ಸುನೀಲ್ ಉಸ್ತುವಾರಿ ನೋಡ್ತಾ ಇದಾರೆ ಎಂದು ಹೇಳಿದರು.

ಇದನ್ನೂ ಓದಿ: ಸೆ. 1, 2ರಂದು ಕೇರಳ, ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಮಂಗಳೂರಿನಲ್ಲಿ 3,800 ಕೋಟಿ ರೂ. ಯೋಜನೆಗಳಿಗೆ ಚಾಲನೆ

25 ಎಕರೆ ಜಾಗದಲ್ಲಿ ಬೃಹತ್ ಸಮಾವೇಶ:

ಕಾರ್ಯಕ್ರಮಕ್ಕೆ ಬೃಹತ್ ಗಾತ್ರದ ಪೆಂಡಾಲ್​ ಹಾಕಿದ್ದು, ನೆಲಮಟ್ಟದಿಂದ 7 ಅಡಿ ಎತ್ತರದಲ್ಲಿ ಸ್ಟೇಜ್ ನಿರ್ಮಾಣ ಮಾಡಲಾಗಿದೆ. ಎಸ್.ಪಿ.ಜಿ ಅಧಿಕಾರಿಗಳ ನಿಯಂತ್ರಣದಲ್ಲಿ ಸ್ಟೇಜ್ ಇರಲಿದ್ದು, ನಗರದ ಹೊರವಲಯದ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಸುಮಾರು 25 ಎಕರೆ ಜಾಗದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ವೇದಿಕೆಯಲ್ಲಿ ಬೃಹದಾದ ಎಲ್.ಇ.ಡಿ ಪರದೆ ಅಳವಡಿಕೆ ಮಾಡಿದ್ದು, ವೇದಿಕೆಯ ಕೆಳ ಭಾಗದಲ್ಲಿಯೂ 10 ಕ್ಕೂ ಹೆಚ್ಚು ಎಲ್.ಇ.ಡಿ ಅಳವಡಿಕೆ ಕಾರ್ಯ ನಡೆಯುತ್ತಿದೆ. ಮೋದಿ ಎಂಟ್ರಿ ಆಗೋಕೆ ಒಂದು ಗೇಟ್ ಇರಲಿದ್ದು, ವಿವಿಐಪಿ ಮತ್ತು ವಿಐಪಿಗೆ ತಲಾ ಒಂದೊಂದು ಗೇಟ್. ಸಾರ್ವಜನಿಕರ ಪ್ರವೇಶಕ್ಕೆ ಒಂದು ಗೇಟ್ ನಿರ್ಮಾಣ ಮಾಡಿದ್ದು, ಒಂದು ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಪರಶುರಾಮನ ವಿಗ್ರಹ ಉಡುಗೊರೆ:

ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯಾಗಿ ನೀಡಲು ಪರಶುರಾಮನ ವಿಗ್ರಹ ಸಿದ್ದವಾಗಿದೆ. ಬಲಗೈಯಲ್ಲಿ ಕೊಡಲಿ, ಎಡಗೈಯಲ್ಲಿ ಧನುಸ್ಸು ಹಿಡಿದು ಸಮುದ್ರದ ಕಡೆಗೆ ಮುಖ ಮಾಡಿ ನಿಂತಿರುವ ವಿಗ್ರಹ ಇದಾಗಿದೆ. ಪರಶುರಾಮ ಕೊಡಲಿಯನ್ನು ಎಸೆದಾಗ ಸಮುದ್ರದ ನೀರು ಹಿಂದಕ್ಕೆ ಸರಿದು ತುಳುನಾಡು ಸೃಷ್ಟಿ ಎಂಬ ಪ್ರತೀತಿ ಇದೆ. ಹೀಗಾಗಿ ಮೋದಿಗೆ ಉಡುಗೊರೆಯಾಗಿ ಪರಶುರಾಮನ ವಿಗ್ರಹ ನೀಡಲಾಗುತ್ತಿದೆ. ಉಡುಪಿಯಲ್ಲಿ ವಿಗ್ರಹ ತಯಾರಾಗಿದ್ದು, ಕಾರ್ಕಳದ ಥೀಮ್ ಪಾರ್ಕ್​ನಲ್ಲಿ ಸ್ಥಾಪನೆಯಾಗಲಿರುವ ಪರಶುರಾಮನ ಪ್ರತಿಮೆಯ ಮಾದರಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಉಸ್ತುವಾರಿಯಲ್ಲಿ ವಿಗ್ರಹ ತಯಾರಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:22 pm, Thu, 1 September 22