ಅಡಿಕೆ ಸಿಪ್ಪೆಯಲ್ಲಿ ಅರಳಿದ ಖಾದ್ಯ ಅಣಬೆ! ಅಂತಾರಾಷ್ಟ್ರೀಯ ಜರ್ನಲ್​​ನಲ್ಲೂ ದಾಖಲಾಯ್ತು ಪುತ್ತೂರು ಕೃಷಿಕನ ಸಾಧನೆ

|

Updated on: May 28, 2024 | 2:46 PM

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ರೈತರೊಬ್ಬರು ಖಾದ್ಯ ಅಣಬೆಯ ಸಾಂಪ್ರದಾಯಿಕ ಪ್ರಬೇಧವೊಂದರ ಕೃಷಿ ಮಾಡಿ ಯಶಸ್ವಿಯಾಗಿದ್ದು, ಅಂತಾರಾಷ್ಟ್ರೀಯ ಫುಡ್ ಜರ್ನಲ್​​ನಲ್ಲಿಯೂ ಲೇಖನ ಪ್ರಕಟವಾಗಿ ಗಮನ ಸೆಳೆದಿದೆ. ಅಡಿಕೆ ಸಿಪ್ಪೆಯಲ್ಲಿ ಬೆಳೆಯುವ ಈ ಅಣಬೆಗೆ ನಾಟಿ ಮಾಡಬೇಕಿಲ್ಲ ಎಂಬುದು ವಿಶೇಷ. ಇದರ ಬಗ್ಗೆ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾಲಯದ ಬಾಟನಿ ವಿಭಾಗದ ತಜ್ಞರು ಅಧ್ಯಯನ ನಡೆಸಿದ್ದು, ಖಾದ್ಯಯೋಗ್ಯ ಎಂದು ಖಾತರಿಪಡಿಸಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ.

ಅಡಿಕೆ ಸಿಪ್ಪೆಯಲ್ಲಿ ಅರಳಿದ ಖಾದ್ಯ ಅಣಬೆ! ಅಂತಾರಾಷ್ಟ್ರೀಯ ಜರ್ನಲ್​​ನಲ್ಲೂ ದಾಖಲಾಯ್ತು ಪುತ್ತೂರು ಕೃಷಿಕನ ಸಾಧನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮೇ 28: ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಸಂಶೋಧನೆಗಳು ಮತ್ತು ಆವಿಷ್ಕಾರಗಳ ಫಲವಾಗಿ ಇದೀಗ ಅಣಬೆ (Mushroom) ಕೃಷಿ ಹೆಚ್ಚು ಜನಪ್ರಿಯವಾಗುತ್ತಿದೆ. ಅಣಬೆ ಖಾದ್ಯಗಳಿಗೆ ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಬಹಳ ಬೇಡಿಕೆ ಇದೆ. ಸಾಮಾನ್ಯವಾಗಿ ಬೀಜ ನಾಟಿ ಮಾಡಿ ಖಾದ್ಯ ಅಣಬೆ ಕೃಷಿ ಮಾಡಲಾಗುತ್ತದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು (Puttur) ತಾಲೂಕಿನ ಬಡಗನ್ನೂರು ಗ್ರಾಮದ ಮುಡಿಪುನಡ್ಕ ನಿವಾಸಿ ಹರೀಶ್‌ ರೈ ದೇರ್ಲ (Harish Rai Derla) ಎಂಬವರು ಸಾಂಪ್ರದಾಯಿಕವಾಗಿ ಅಡಿಕೆ (Arecanut) ಸಿಪ್ಪೆಯಲ್ಲಿ ಅಣಬೆ ಕೃಷಿ ಮಾಡಿ ಗಮನ ಸೆಳೆದಿದ್ದಾರೆ. ಈ ಮೂಲಕ ಪ್ರಾಚೀನ ಅಣಬೆ ಪ್ರಬೇಧವೊಂದಕ್ಕೆ ಮರುಜೀವ ನೀಡಿದ್ದಾರೆ. ವಿಶೇಷವೆಂದರೆ, ಈ ಮಾದರಿಯ ಅಣಬೆ ಕೃಷಿಗೆ ಬೀಜ ನಾಟಿ ಮಾಡಬೇಕಿಲ್ಲ.

ಹರೀಶ್‌ ರೈ ದೇರ್ಲ ತಯಾರಿಸಿರುವ ಅಣಬೆಯ ಬಗ್ಗೆ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (CPCRI) ವಿಜ್ಞಾನಿಗಳೂ ನಿರಂತರ ಒಂದು ವರ್ಷದಿಂದ ಅಧ್ಯಯನ ನಡೆಸಿದ್ದಾರೆ. ನಂತರ ಇದು ತಿನ್ನಲು ಯೋಗ್ಯ ಎಂಬುದಾಗಿ ಘೋಷಣೆ ಮಾಡಿದ್ದಾರೆ. ಪರಿಣಾಮವಾಗಿ ಅಡಿಕೆ ಸಿಪ್ಪೆಯಲ್ಲಿ ಬೆಳೆದ ಅಣಬೆಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಫುಡ್ ಜರ್ನಲ್ ‘ಎಮಿರೇಟ್ಸ್‌ ಜರ್ನಲ್‌ ಆಫ್‌ ಫುಡ್‌ ಆ್ಯಂಡ್‌ ಎಗ್ರಿಕಲ್ಚರ್‌’ ಕೂಡ ಲೇಖನ ಪ್ರಕಟಿಸಿದೆ.

ಈ ಅಣಬೆಯನ್ನು ‘ಕಾಪ್ರಿನೋಪ್ಸಿಸ್‌ ಸಿನೆರಿಯಾ’ ಪ್ರಬೇಧಕ್ಕೆ ಸೇರಿದ್ದೆಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಅಡಿಕೆ ಸಿಪ್ಪೆಯಲ್ಲಿ ಅಣಬೆ ಕೃಷಿ ಹೇಗೆ?

ಸಾಮಾನ್ಯವಾಗಿ ಬೀಜ ನಾಟಿ ಮಾಡಿ ಖಾದ್ಯ ಅಣಬೆ ಬೆಳೆಯಲಾಗುತ್ತದೆ. ಆದರೆ, ‘ಕಾಪ್ರಿನೋಪ್ಸಿಸ್‌ ಸಿನೆರಿಯಾ’ ಪ್ರಬೇಧದ ಅಣಬೆ ಹಾಗಲ್ಲ. ಇದು ಸಾವಯವ ವಸ್ತುಗಳು ಕೊಳೆಯುವ ಜಾಗದಲ್ಲಿ ಸೃಷ್ಟಿಯಾಗುತ್ತವೆ. ಈ ವಿಧಾನದ ಅಣಬೆ ಕೃಷಿಯಲ್ಲಿ ಸುಲಿದ ಅಡಿಕೆಯ ಸಿಪ್ಪೆಯನ್ನೇ ಹರಡಿ ನೀರು ಸಿಂಪಡಿಸಿ ಕೊಳೆಯಲು ಬಿಡಲಾಗುತ್ತದೆ. ಕೆಲವೇ ದಿನಗಳಲ್ಲಿ ಈ ಕೊಳೆತ ಅಡಿಕೆ ಸಿಪ್ಪೆಯಲ್ಲಿ ಸಹಜವಾಗಿ ಅಣಬೆ ಹುಟ್ಟಿಕೊಳ್ಳುತ್ತದೆ. 10 ದಿನಗಳಲ್ಲಿ ಅಣಬೆ ಕೊಯ್ಲು ಮಾಡಿ ಮುಂದಿನ ಕೃಷಿಗಾಗಿ ಮತ್ತೆ ಅಡಿಕೆ ಸಿಪ್ಪೆ ಹರಡಿಬಿಡಲಾಗುತ್ತದೆ. ಹೀಗಾಗಿ, ನಾಟಿ ಮಾಡದೇ ಬೆಳೆಯುವ ಈ ಅಣಬೆ ಕೃಷಿ ವಿಜ್ಞಾನಿಗಳ ಗಮನ ಸೆಳೆದಿದೆ.

ಒಂದಿಡೀ ವರ್ಷ ಅಡಿಕೆ ಸಿಪ್ಪೆಯಲ್ಲಿ 24 ಬ್ಯಾಚು ಅಣಬೆ ಕೃಷಿ ಮಾಡಿರುವ ಹರೀಶ್‌ ರೈ ದೇರ್ಲ ಇದೀಗ 25ನೇ ಬ್ಯಾಚ್​​​ ಕೃಷಿಗೆ ಸಿದ್ಧರಾಗಿದ್ದಾರೆ.

ಸಿಪಿಸಿಆರ್​ಐ, ಕ್ಯಾಲಿಕಟ್ ವಿವಿ ಸಂಶೋಧಕರಿಂದ ಅಧ್ಯಯನ

ಹರೀಶ್‌ ರೈ ಅವರ ಅಣಬೆ ಕೃಷಿ ಬಗ್ಗೆ ಖ್ಯಾತ ಕೃಷಿ ಪತ್ರಕರ್ತ ಶ್ರೀ ಪಡ್ರೆ, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ಇರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ಕೇಂದ್ರದ ವಿಜ್ಞಾನಿಗಳಿಗೆ ಮಾಹಿತಿ ನೀಡಿದ್ದರು. ಅದೇ ರೀತಿ, ಕಾಸರಗೋಡಿನಲ್ಲಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಿಗೂ ಮಾಹಿತಿ ನೀಡಿದ್ದರು. ಸಾಂಪ್ರದಾಯಿಕ ಮಾದರಿಯ ಅಣಬೆ ಕೃಷಿಯ ಬಗ್ಗೆ ಆಸಕ್ತಿ ತಾಳಿದ ಕಾಸರಗೋಡು ಮತ್ತು ವಿಟ್ಲ ಸಿಪಿಸಿಆರ್​​ಐ ವಿಜ್ಞಾನಿಗಳು ನಿರಂತರ ಅಧ್ಯಯನ ನಡೆಸಿದ್ದರು. ಕ್ಯಾಲಿಕಟ್ ವಿಶ್ವವಿದ್ಯಾಲಯದ ಬಾಟನಿ ವಿಭಾಗ ಕೂಡ ಅಧ್ಯಯನದಲ್ಲಿ ಸಹಕಾರ ನೀಡಿತ್ತು. ನಂತರ ಈ ಅಣಬೆ ತಿನ್ನಲು ಯೋಗ್ಯ ಎಂದು ವಿಜ್ಞಾನಿಗಳು ಘೋಷಿಸಿದ್ದರು. ಇದಾದ ನಂತರ ಅಣಬೆಯ ಬಗ್ಗೆ ಅಂತಾರಾಷ್ಟ್ರೀಯ ಫುಡ್ ಜರ್ನಲ್ ಲೇಖನ ಪ್ರಕಟಿಸಿದೆ.

ಔಷಧೀಯ ಗುಣದ ಬಗ್ಗೆ ಅಧ್ಯಯನ

ಈ ಖಾದ್ಯ ಅಣಬೆಯ ಔಷಧೀಯ ಗುಣದ ಬಗ್ಗೆಯೂ ಅಧ್ಯಯನಗಳು ನಡೆಯುತ್ತಿವೆ. ಅಣಬೆ ಔಷಧೀಯ ಮೌಲ್ಯವನ್ನು ಹೊಂದಿರುವುದು ಸಾಬೀತುಪಡಿಸಿದರೆ, ಅದನ್ನು ಮಾರುಕಟ್ಟೆಯಲ್ಲಿ ಪ್ರೀಮಿಯಂ ಬೆಲೆಗೆ ಮಾರಾಟ ಮಾಡಬಹುದಾಗಿದೆ ಎಂದು ಕಾಸರಗೋಡಿನ ಸಿಪಿಸಿಆರ್‌ಐ ನಿರ್ದೇಶಕ ಕೆ ಬಾಲಚಂದ್ರ ಹೆಬ್ಬಾರ್ ಇತ್ತೀಚೆಗೆ ‘ಟೈಮ್ಸ್ ಆಫ್ ಇಂಡಿಯಾ’ಕ್ಕೆ ಇತ್ತೀಚೆಗೆ ತಿಳಿಸಿದ್ದರು.

ಇದನ್ನೂ ಓದಿ: ಮಂಗಳೂರು: ಮನೆಯೊಳಗೆ ಮಂಚದಡಿಯಲ್ಲಿತ್ತು ಬೃಹತ್ ಕಾಳಿಂಗ ಸರ್ಪ, ವಿಡಿಯೋ ನೋಡಿ

ಅಣಬೆಗಳ ಖಾದ್ಯ ಗುಣವನ್ನು ನಿರಾಕರಿಸಲಾಗದು. ಹಾಗೆಂದು ವಾಣಿಜ್ಯ ಕೃಷಿಗೆ ಅವುಗಳ ಕಾರ್ಯಸಾಧ್ಯತೆಯನ್ನು ಮೌಲ್ಯಮಾಪನ ಮಾಡುವುದು ಮತ್ತು ಆ ಕುರಿತು ಇನ್ನಷ್ಟು ಅಧ್ಯಯನ ಮಾಡುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:33 pm, Tue, 28 May 24