ಕೋಳಿ‌ ಕಾಳಗಕ್ಕೆ ಪೊಲೀಸ ‌ನಿರ್ಬಂಧ: ತಾವೇ ಮುಂದೆ ನಿಂತು ಕೋಳಿ‌ ಅಂಕ ಮಾಡಿಸಿದ ಕಾಂಗ್ರೆಸ್​ ಶಾಸಕ

ವಿಟ್ಲದ ಕೇಪು ಜಾತ್ರೆಯ ಧಾರ್ಮಿಕ ಕೋಳಿ ಅಂಕಕ್ಕೆ ಪೊಲೀಸರು ನಿರ್ಬಂಧ ಹೇರಿದ್ದರು. ಇದನ್ನು ಧಿಕ್ಕರಿಸಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸ್ವತಃ ಮುಂದೆ ನಿಂತು, ಕೋಳಿ ಅಂಕ ನಡೆಸಲು ಅವಕಾಶ ನೀಡಿದರು. ಇದು ಧಾರ್ಮಿಕ ಆಚರಣೆ, ಜೂಜಲ್ಲ ಎಂದು ವಾದಿಸಿದ ಶಾಸಕರು, ತಮ್ಮನ್ನು ಮೊದಲು ಬಂಧಿಸಿ ಎಂದು ಪೊಲೀಸರಿಗೆ ಸವಾಲೆಸೆದರು.

ಕೋಳಿ‌ ಕಾಳಗಕ್ಕೆ ಪೊಲೀಸ ‌ನಿರ್ಬಂಧ: ತಾವೇ ಮುಂದೆ ನಿಂತು ಕೋಳಿ‌ ಅಂಕ ಮಾಡಿಸಿದ ಕಾಂಗ್ರೆಸ್​ ಶಾಸಕ
ಕೋಳಿ‌ ಕಾಳಗ
Edited By:

Updated on: Dec 20, 2025 | 10:19 PM

ಮಂಗಳೂರು, ಡಿಸೆಂಬರ್​​ 20: ಧಾರ್ಮಿಕ ಹಿನ್ನೆಲೆಯ ಕೋಳಿ‌ ಕಾಳಗಕ್ಕೆ ಪೊಲೀಸರಿಂದ ‌ನಿರ್ಬಂಧ ಬೆನ್ನಲ್ಲೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ತಾವೇ ಮುಂದೆ ನಿಂತು ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ (Ashok Kumar Rai) ಕೋಳಿ‌ ಅಂಕ ಮಾಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಕೇಪು ಗ್ರಾಮದ ಸಮೀಪ ಘಟನೆ ನಡೆದಿದೆ. ನಾನಿಲ್ಲೆ ಇರ್ತೇನೆ ನೀವು ಕೋಳಿ‌ ಅಂಕ ಮುಂದುವರಿಸಿ. ಬಂಧಿಸುವುದಾದರೆ ಮೊದಲು ನನ್ನ ಬಂಧಿಸಿ ಎಂದು ಶಾಸಕ ಹೇಳಿದ್ದಾರೆ.

ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೆ ಹಿನ್ನೆಲೆ ವರ್ಷಕ್ಕೊಮ್ಮೆ ಕೋಳಿ‌ ಅಂಕ ನಡೆಯುತ್ತದೆ. ಜೂಜು ಕಟ್ಟದೆ ಕೇವಲ ಪದ್ಧತಿಗಾಗಿ ಕೋಳಿ ಕಾಳಗ ಮಾಡಲಾಗುತ್ತದೆ. ಆದರೆ ಈ ಕೋಳಿ‌ ಅಂಕ ಮಾಡದಂತೆ ವಿಟ್ಲ ಪೊಲೀಸರು ನಿರ್ಬಂಧ ಹೇರಿದ್ದರು. ಖುದ್ದು ಸ್ಥಳಕ್ಕೆ ಬಂದ ಅಶೋಕ್ ಕುಮಾರ್ ರೈ, ಕೋಳಿ‌ ಅಂಕ ನಡೆಸಲು ಅನುಕೂಲ ಮಾಡಿದರು. ಈ ವೇಳೆ ಕೋಳಿ‌ ಅಂಕ ಕಾನೂನು ಬಾಹಿರ ಎಂದ ಸಬ್​ಇನ್ಸ್​ಪೆಕ್ಟರ್​​ಗೆ,  ಇದು ಧಾರ್ಮಿಕ ಹಿನ್ನೆಲೆಯಲ್ಲಿ ನಡೆಯುವ ಕೋಳಿ‌ ಅಂಕ. 3 ದಿನದ ಬದಲು 1 ದಿನ ನಡೆಯಲಿ ಮೇಲಾಧಿಕಾರಿಗಳಿಗೆ ಈ ಬಗ್ಗೆ ತಿಳಿಸಿ ಎಂದಿದ್ದಾರೆ.

ಕಾನೂನಿಗೆ ವಿರುದ್ಧವಾಗಿ ನಾವು ಯಾವುದನ್ನು ಮಾಡಿಲ್ಲ: ಅಶೋಕ್ ಕುಮಾರ್ ರೈ

ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ‌ ಅಶೋಕ್ ಕುಮಾರ್ ರೈ, ಕಾನೂನಿಗೆ ವಿರುದ್ಧವಾಗಿ ನಾವು ಯಾವುದನ್ನು ಮಾಡಿಲ್ಲ. ಪ್ರತಿ ವರ್ಷ ಮೂರು‌ ದಿನ ಕೋಳಿ‌ ಅಂಕ ನಡೆಯುತ್ತೆ. ಇಲ್ಲಿ ಸಾವಿರಾರು ಜನ ದೇವರಲ್ಲಿ ಹರಕೆ ಹೊತ್ತಿರುತ್ತಾರೆ. ಇಲ್ಲಿ ಯಾವುದೇ ಜೂಜುಗಳಿಲ್ಲ, ಧಾರ್ಮಿಕ ನಂಬಿಕೆ. ಹರಕೆ ರೂಪದಲ್ಲಿ ಕೋಳಿ ತಂದು ಅಂಕ ಮಾಡಿಸ್ತಾರೆ ಎಂದರು.

ಇದನ್ನೂ ಓದಿ: ಬಿಸಿಯೂಟದಲ್ಲಿ ಹುಳುಗಳು ಪತ್ತೆ: ಟಿವಿ9 ವರದಿ ಇಂಪ್ಯಾಕ್ಟ್; ಶಾಲೆಗಳಿಗೆ ಬಂತು ಗುಣಮಟ್ಟದ ಬೇಳೆ

ಕಾನೂನಿನಲ್ಲಿ ಇದಕ್ಕೆ ಅವಕಾಶಗಳಿಲ್ಲ ಅಂತಾ ಗೊತ್ತಿದೆ, ಆದರೆ ಇದು ಜನರ ಧಾರ್ಮಿಕ ಭಾವನೆಗಳ ವಿಚಾರ ಅದಕ್ಕೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದೆವು. 3 ಗಂಟೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದೆವು. ಆದರೂ ಸಹ ಪೊಲೀಸರು ಜನರನ್ನ ಚದುರಿಸಲು ಯತ್ನಿಸಿದ್ದಾರೆ. ಧರ್ಮವನ್ನು ಕಿತ್ತುಕೊಳ್ಳುವ ಪ್ರಯತ್ನ ಆಗ್ತಿದೆ. ನನ್ನ ವಿಧಾನಸಭಾ ಕ್ಷೇತ್ರದ ಜನರು ನನ್ನ ಬಳಿ ಹೇಳಿದರು. ನಾನು ಜನರ ಜೊತೆಗೆ ಮೂರು ಗಂಟೆಗಳ ಕಾಲ ಇದ್ದೆ‌. ಜನರು ತಮ್ಮ ಹರಕೆಯನ್ನು ತೀರಿಸಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಶಾಸಕ ಅಶೋಕ್ ರೈ ಸೇರಿ 17 ಜನ FIR ದಾಖಲು

ವಿಟ್ಲ ಠಾಣೆಯ ಪೊಲೀಸರು ಶಾಸಕ ಅಶೋಕ್ ರೈ ಸೇರಿದಂತೆ 17 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕಾನೂನು ಬಾಹಿರ ಕೃತ್ಯವನ್ನು ನಡೆಸಲು ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿದ ಆರೋಪದ ಮೇಲೆ ಅಶೋಕ್ ರೈ ವಿರುದ್ಧ ಪ್ರಕರಣ ದಾಖಲಾಗಿದೆ. ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ ಎಂದು ಆರೋಪಿಸಿ 16 ಜನರ ವಿರುದ್ದ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:13 pm, Sat, 20 December 25