ಕರಾವಳಿ ಜಿಲ್ಲೆಗಳಲ್ಲಿ ಮಳೆ ಆರ್ಭಟ: 24 ಗಂಟೆಗಳಲ್ಲಿ ಮೂವರು ಬಲಿ

ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಈಗಾಗಲೇ ರೆಡ್ ಅಲರ್ಟ್​ ಘೋಷಣೆ ಮಾಡಲಾಗಿದೆ. ಅದರಂತೆ ಇದೀಗ ಉತ್ತರ ಕನ್ನಡ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಗೆ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ.

ಕರಾವಳಿ ಜಿಲ್ಲೆಗಳಲ್ಲಿ ಮಳೆ ಆರ್ಭಟ: 24 ಗಂಟೆಗಳಲ್ಲಿ ಮೂವರು ಬಲಿ
ಕರಾವಳಿ ಜಿಲ್ಲೆಯಲ್ಲಿ ಮಳೆಗೆ ಮೂರು ಬಲಿ
Updated By: ಕಿರಣ್ ಹನುಮಂತ್​ ಮಾದಾರ್

Updated on: Jul 07, 2023 | 9:32 AM

ಉತ್ತರ ಕನ್ನಡ: ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಈಗಾಗಲೇ ರೆಡ್ ಅಲರ್ಟ್​ ಘೋಷಣೆ ಮಾಡಲಾಗಿದೆ. ಇದೀಗ ಗದ್ದೆಗೆ ನುಗ್ಗಿದ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಕುಮಟಾ(Kumta) ತಾಲೂಕಿನ ಬರ್ಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಟ್ಕುಳಿ ಗ್ರಾಮದಲ್ಲಿ ನಡೆದಿದೆ. ಸತೀಶ ಪಾಂಡುರಂಗ ನಾಯ್ಕ(40), ಉಲ್ಲಾಸ ಗಾವಡಿ(50) ಮೃತ ರ್ದುದೈವಿಗಳು. ಭಾರಿ ಮಳೆಯಿಂದಾಗಿ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತವಾಗಿದ್ದು, ಈ ವೇಳೆ ಮಳೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ನೀರಿನ ರಭಸಕ್ಕೆ ಇಬ್ಬರೂ ಕಾಲು ಜಾರಿ ಬಿದ್ದು ಈ ದುರ್ಘಟನೆ ನಡೆದಿದ್ದು, ಕೆಲವು ಗಂಟೆ ಬಳಿಕ ಇಬ್ಬರ ಶವಗಳು ಪತ್ತೆಯಾಗಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಗುಡ್ಡ ಕುಸಿದು ಮನೆಯಲ್ಲಿ ಸಿಲುಕಿದ್ದ ಝರೀನಾ(46) ಸಾವು

ದಕ್ಷಿಣ ಕನ್ನಡ: ಗುಡ್ಡ ಕುಸಿದು ಮನೆಯಲ್ಲಿ ಸಿಲುಕಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರದಲ್ಲಿ ನಡೆದಿದೆ. ಝರೀನಾ(46) ಮೃತ ಮಹಿಳೆ. ಓರ್ವ ಯುವತಿಯನ್ನ ಬಂಟ್ವಾಳ ಅಗ್ನಿಶಾಮಕ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯರು ಕಾರ್ಯಾಚರಣೆ ಮಾಡಿ ರಕ್ಷಣೆ ಮಾಡಲಾಗಿದೆ. ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಭೇಟಿ ನೀಡಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಐದನೇ ಬಲಿಯಾಗಿದೆ.

ಇದನ್ನೂ ಓದಿ:Karnataka Rains: ಮುಂಗಾರು ಪೂರ್ವ ಮಳೆಗೆ ಈ ವರ್ಷ ರಾಜ್ಯದಲ್ಲಿ 52 ಮಂದಿ ಸಾವು; ಕಳೆದ ವರ್ಷ ಮೃತಪಟ್ಟವರೆಷ್ಟು?

ಮನೆ ಮುಂದೆ ಕುಸಿದ ಧರೆ; ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ

ಚಿಕ್ಕಮಗಳೂರು: ಮನೆ ಮುಂದೆ ನಿಂತಿದ್ದ ಸ್ಥಳದಲ್ಲಿಯೇ ಧರೆ ಕುಸಿತವಾಗಿದ್ದು, ಕೂದಲೆಳೆ ಅಂತರದಲ್ಲಿ ಎನ್. ಆರ್. ಪುರ ತಾಲೂಕಿನ ಮೇಲ್ಪಾಲ್ ಮೂಲದ ಶಶಿಕುಮಾರ್ ಪಾರಾಗಿದ್ದಾರೆ. ಧರೆ ಕುಸಿತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ಜಾಗದಿಂದ ತಕ್ಷಣ ಹಿಂದೆ ಬಂದಿದ್ದರಿಂದ ಅನಾಹುತ‌‌ ತಪ್ಪಿದೆ. ಎರಡು ದಿನದಿಂದ ಮೇಲ್ಪಾಲ್ ಸುತ್ತಮುತ್ತ ಭಾರೀ ಮಳೆ ಸುರಿಯುತ್ತಿದ್ದ ಹಿನ್ನಲೆ ಈ ಘಟನೆ ನಡೆದಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ