ಮಂಗಳೂರು, ಸೆ.25: ಶಾಲಾ ವಿದ್ಯಾರ್ಥಿಗಳ ಬ್ಯಾಗ್ ತೂಕವನ್ನು(School Bags) ಕಡಿಮೆ ಮಾಡಬೇಕಾಗಿದೆ. ಹೀಗಾಗಿ ಬ್ಯಾಗ್ ತೂಕವನ್ನು ಈಗಿನ ಭಾರಕ್ಕಿಂತ ಮೂರನೇ ಒಂದರಷ್ಟು ಕಡಿಮೆ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. 2024-25ನೇ ಶೈಕ್ಷಣಿಕ ವರ್ಷದಿಂದಲೇ ಶಾಲಾ ಬ್ಯಾಗ್‌ಗಳ ತೂಕ ಕಡಿಮೆ ಆಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ.
ಸೆಪ್ಟೆಂಬರ್ 24 ರಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಈಗ ಇರುವ ವ್ಯವಸ್ಥೆಯಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ಭಾರ ಹೊರೆಯಾಗುತ್ತಿದೆ. ಹೀಗಾಗಿ ಇದನ್ನು ಕಡಿತ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಈಗ ಇರುವ ಭಾರಕ್ಕಿಂತ ಅರ್ಧಕ್ಕೂ ಕಡಿಮೆ ಭಾರ ಇರುವಂತೆ ವ್ಯವಸ್ಥೆ ಮಾಡಲಾಗುವುದು. ನನ್ನ ಬಯಕೆ ಆರನೇ ಒಂದು ಪಟ್ಟು ಭಾರ ಇರುವಂತೆ ಮಾಡಬೇಕೆಂಬುದು ಇತ್ತು. ಆದರೆ ಮೂರನೇ ಒಂದು ಪಟ್ಟು ಇರುವಂತೆ ಮಾಡಲಾಗುವುದು. ಬ್ಯಾಗ್ ಹೊರೆ ಕಡಿಮೆ ಮಾಡುವ ತೀರ್ಮಾನದಿಂದ ಶಿಕ್ಷಣದ ಗುಣಮಟ್ಟಕ್ಕೆ ತೊಂದರೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಶೈಕ್ಷಣಿಕ ವರ್ಷದಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮೂರು ಬಾರಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಮೊದಲ ಬಾರಿಗೆ ನಡೆದ ಪರೀಕ್ಷೆಯಲ್ಲಿ ಯಾರಾದರು ಫೇಲಾದರೆ ಅಥವಾ ಕಡಿಮೆ ಅಂಕ ಪಡೆದರೆ ಆ ವಿದ್ಯಾರ್ಥಿಗಳು ಬೇಕಾದ ಸಬ್ಜೆಕ್ಟ್ನಲ್ಲಿ ಎರಡನೇ ಪರೀಕ್ಷೆ ತೆಗೆದುಕೊಳ್ಳಬಹುದು. ಅದರಲ್ಲಿಯೂ ಅವರಿಗೆ ತೃಪ್ತಿಯಾಗದಿದ್ದರೆ ಮೂರನೇ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಮೂರರಲ್ಲಿ ಯಾವುದರಲ್ಲಿ ಹೆಚ್ಚು ಅಂಕ ಬರುತ್ತದೆಯೋ ಅದನ್ನು ಪರಿಗಣಿಸಲಾಗುವುದು. ಇದರಿಂದ ಅವರಿಗೆ ಅದೇ ವರ್ಷದಲ್ಲಿ ಮುಂದಿನ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಪ್ರಕ್ರಿಯೆಯಿಂದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದ ಅಡ್ಮಿಷನ್ ಪಡೆದು ಶಾಲೆಗೆ ಹೋಗಲು ಒಂದು ತಿಂಗಳು ವಿಳಂಬವಾಗಬಹುದು. ಅದನ್ನು ಆಯಾ ಶಿಕ್ಷಣ ಸಂಸ್ಥೆಗಳು ಬ್ರಿಡ್ಜ್ ಕೋರ್ಸ್ನಿಂದ ಅದನ್ನು ಸರಿದೂಗಿಸುವಂತೆ ಸೂಚಿಸಲಾಗಿದೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿ; ಸಚಿವ ಮಧು ಬಂಗಾರಪ್ಪ ಹೇಳಿದ್ದಿಷ್ಟು
ಈ ಚಿಂತನೆಯಿಂದ ಶಿಕ್ಷಕರ ಮೇಲೆ ಹೆಚ್ಚಿನ ಒತ್ತಡ ಇರುತ್ತದೆ. ಆದರೆ ವಿದ್ಯಾರ್ಥಿಗಳನ್ನು ವೈಫಲ್ಯದ ಭಯದಿಂದ ನಿವಾರಣೆ ಸಿಗುತ್ತದೆ. ಸರ್ಕಾರವು ಮೂರು ಪರೀಕ್ಷೆಗಳ ವೇಳಾಪಟ್ಟಿಯನ್ನು ಸ್ಪಷ್ಟವಾಗಿ ನಿಗದಿಪಡಿಸಿದೆ. ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು. ಈ ವಿದ್ಯಾರ್ಥಿಗಳಿಗೆ ಪ್ರವೇಶ ಮತ್ತು ಬ್ರಿಡ್ಜ್ ಕೋರ್ಸ್‌ಗಳನ್ನು ನಡೆಸುವಂತೆ ಕಾಲೇಜುಗಳಿಗೆ ತಿಳಿಸಲಾಗಿದೆ. ರಾಜ್ಯದಲ್ಲಿ 1600 ಅನಧಿಕೃತ ಶಾಲೆಗಳು ಇವೆ. ದಾಖಲೆಗಳು ಸರಿಯಿಲ್ಲದೆ ಇರುವ ಈ ಶಾಲೆಗಳನ್ನು ಮುಚ್ಚಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಕಾಗಬಹುದು. ಇದಕ್ಕಾಗಿ ಅವರಿಗೆ ದಾಖಲೆಗಳನ್ನು ಸರಿಪಡಿಸಲು ಸೂಚಿಸಲಾಗಿದೆ. ಮುಂದಿನ ವರ್ಷದಲ್ಲಿ ಅಡ್ಮಿಷನ್ ವೇಳೆಯೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
ರಾಜ್ಯದಲ್ಲಿ ಮುಂದಿನ ವರ್ಷ ಹೊಸ 500 ರಿಂದ 600 ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಪ್ರಾರಂಭಿಸಲಾಗುವುದು. ಈ ಶಾಲೆಯಲ್ಲಿ 1500 ಮಕ್ಕಳು ಕಲಿಯಲಿದ್ದಾರೆ. ಈ ಶಾಲೆಗಳು ಎಲ್‌ಕೆಜಿಯಿಂದ 12ನೇ ತರಗತಿವರೆಗೆ ತರಗತಿಗಳನ್ನು ಹೊಂದಿದ್ದು, ಕೇವಲ ಶೈಕ್ಷಣಿಕ ವಿಷಯಗಳಿಗೆ ಮಾತ್ರವಲ್ಲದೆ ಸಂಗೀತ, ಕಲೆ, ಕ್ರೀಡೆ ಮತ್ತು ಇತರೆ ಪಠ್ಯೇತರ ಚಟುವಟಿಕೆಗಳಿಗೂ ಒತ್ತು ನೀಡಲಾಗುವುದು. ಶಿಕ್ಷಕರ ಕೊರತೆ ನೀಗಿಸಲು ಹಾಗೂ ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳ ಕೊರತೆ ನೀಗಿಸಲು ಕ್ರಮಕೈಗೊಳ್ಳಲಾಗುತ್ತಿದೆ. 53,000 ಶಿಕ್ಷಕರ ಹುದ್ದೆಗಳಲ್ಲಿ 40,000 ಕ್ಕೂ ಹೆಚ್ಚು ಅತಿಥಿ ಶಿಕ್ಷಕರನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಸಚಿವ ಬಂಗಾರಪ್ಪ ಹೇಳಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ