ಮಂಗಳೂರು: ಅಡ್ಯಾರ್ ಬಳಿ ಐಸ್‌ಕ್ರೀಂ ಘಟಕದ ಎಳನೀರು ಸೇವಿಸಿದ ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

| Updated By: Ganapathi Sharma

Updated on: Apr 11, 2024 | 9:41 AM

ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹಾಗೂ ಆಹಾರ ಭದ್ರತಾ ಅಧಿಕಾರಿ ಐಸ್​ಕ್ರೀಂ ಘಟಕಕ್ಕೆ ಭೇಟಿ ನೀಡಿ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿಗಾಗಿ ಕಾಯಲಾಗುತ್ತಿದೆ. ಇದರ ಬೆನ್ನಲ್ಲೇ ಇಡೀ ಕಾರ್ಖಾನೆಯನ್ನು ಬಂದ್ ಮಾಡಿ ಸ್ವಚ್ಛಗೊಳಿಸಲಾಗಿದೆ.

ಮಂಗಳೂರು: ಅಡ್ಯಾರ್ ಬಳಿ ಐಸ್‌ಕ್ರೀಂ ಘಟಕದ ಎಳನೀರು ಸೇವಿಸಿದ ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನು ಅಧಿಕಾರಿಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
Follow us on

ಮಂಗಳೂರು, ಏಪ್ರಿಲ್ 11: ಮಂಗಳೂರು (Mangalore) ಹೊರವಲಯದ ಅಡ್ಯಾರ್‌ನಲ್ಲಿರುವ (Adyar) ಐಸ್‌ಕ್ರೀಂ ಘಟಕವೊಂದರಲ್ಲಿ ಎಳನೀರು (Tender coconut) ಸೇವಿಸಿದ ಆರೋಪದಲ್ಲಿ ಹಲವರು ಅಸ್ವಸ್ಥಗೊಂಡಿದ್ದಾರೆ. ಅಡ್ಯಾರ್, ಕಣ್ಣೂರು ಮತ್ತು ತುಂಬೆ ನಿವಾಸಿಗಳು ಏಪ್ರಿಲ್ 8 ರಂದು ಎಳನೀರು ಖರೀದಿಸಿದ್ದರು ಮತ್ತು ಮರುದಿನ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಳನೀರು ಕುಡಿದ ಬಳಿಕ ಅವರಲ್ಲಿ ವಾಂತಿ ಮತ್ತು ಭೇದಿ ಆರಂಭವಾಗಿತ್ತು. ಐಸ್‌ಕ್ರೀಂ ಘಟಕದಲ್ಲಿ ಪ್ರತಿ ಲೀಟರ್‌ಗೆ 40 ರೂ. ಬೆಲೆಯಲ್ಲಿ ಎಳನೀರು ಮಾರಾಟ ಮಾಡಲಾಗುತ್ತದೆ. ಹೀಗಾಗಿ ಈ ಪ್ರದೇಶದ ಹಲವಾರು ಜನ ಅದನ್ನು ಖರೀದಿಸುತ್ತಾರೆ.

ಅಸ್ವಸ್ಥರು ಮೊದಲಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ. ನಂತರ ನಗರದ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಮೂವರು ಒಳರೋಗಿಗಳಾಗಿ ದಾಖಲಾಗಿದ್ದರೆ, 12 ಮಂದಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಹೊರರೋಗಿ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಬುಧವಾರ ವಾಟ್ಸ್ ಆ್ಯಪ್ ಮೂಲಕ ದೂರು ಸ್ವೀಕರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹಾಗೂ ಆಹಾರ ಭದ್ರತಾ ಅಧಿಕಾರಿ ಐಸ್​ಕ್ರೀಂ ಘಟಕಕ್ಕೆ ಭೇಟಿ ನೀಡಿ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿಗಾಗಿ ಕಾಯಲಾಗುತ್ತಿದೆ. ಇದರ ಬೆನ್ನಲ್ಲೇ ಇಡೀ ಕಾರ್ಖಾನೆಯನ್ನು ಬಂದ್ ಮಾಡಿ ಸ್ವಚ್ಛಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನೂ ಅಧಿಕಾರಿಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಜತೆಗೆ, ಮಾಹಿತಿ ಪಡೆದರು.

ಸಾರ್ವಜನಿಕರ ಆರೋಗ್ಯದ ಹೊತದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನ ಆತಂಕಕ್ಕೆ ಒಳಗಾಗಬಾರದು ಎಂದು ಆರೋಗ್ಯಾಧಿಕಾರಿ ಮತ್ತು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಕಾರು ಮೇಲ್ಸೇತುವೆಯಿಂದ ಉರುಳಿ ದಂಪತಿ ಸಾವು

ಕಾರೊಂದು ಮೇಲ್ಸೇತುವೆಯಿಂದ ಉರುಳಿ ಸಂಭವಿಸಿದ ಅಪಘಾತದಲ್ಲಿ ದಂಪತಿ ಮೃತಪಟ್ಟ ಘಟನೆ ಕುಂದಾಪುರದ ಬೊಬ್ಬರ್ಯನಕಟ್ಟೆಯಲ್ಲಿ ಬುಧವಾರ ಸಂಭವಿಸಿದೆ. ಮೃತರನ್ನು ಕೇರಳದ ಕಣ್ಣೂರು ಮೂಲದ ಮುನ್ನಾವರ್ (49) ಮತ್ತು ಅವರ ಪತ್ನಿ ಸಮೀರ್ (41) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಅವರ ಪುತ್ರ ಸುಹೇಲ್ (18) ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾನೆ.

ಇದನ್ನೂ ಓದಿ: ಏ.14ರ ಮೋದಿ ಕರ್ನಾಟಕ ಪ್ರವಾಸ ಕಾರ್ಯಕ್ರಮದಲ್ಲಿ ಮಹತ್ವದ ಬದಲಾವಣೆ, ಇಲ್ಲಿದೆ ಹೊಸ ಅಪ್ಡೇಟ್

ಕುಟುಂಬ ಸಮೇತ ಕೊಲ್ಲಾಪುರದಿಂದ ಕಣ್ಣೂರಿಗೆ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕೂಡಲೇ ಕಾರಿನಲ್ಲಿದ್ದ ಮೂವರನ್ನೂ ಕುಂದಾಪುರದ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಮರಣೋತ್ತರ ಪರೀಕ್ಷೆ ಬಳಿಕ ಇಬ್ಬರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ಚಾಲಕ ಮುನ್ನಾವರ್‌ನ ಅತಿವೇಗ ಹಾಗೂ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕುಂದಾಪುರ ಸಂಚಾರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ