ಏ.14ರ ಮೋದಿ ಕರ್ನಾಟಕ ಪ್ರವಾಸ ಕಾರ್ಯಕ್ರಮದಲ್ಲಿ ಮಹತ್ವದ ಬದಲಾವಣೆ, ಇಲ್ಲಿದೆ ಹೊಸ ಅಪ್ಡೇಟ್
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿಯಲಿದ್ದಾರೆ. ಸಮಾವೇಶ, ರೋಡ್ ಶೋಗಳನ್ನು ಮಾಡಲಿದ್ದಾರೆ. ಹೀಗಾಗಿ ವೇಳಾಪಟ್ಟಿ ಸಿದ್ಧವಾಗಿದೆ. ಮೊದಲ ಹಂತದಲ್ಲಿ ಮೋದಿ ಇದೇ ಏಪ್ರಿಲ್ 14 ರಂದು ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಆದ್ರೆ, ನಿಗದಿಯಾಗಿದ್ದ ಕಾರ್ಯಕ್ರಮಗಳಲ್ಲಿ ಕೊಂಚ ಬದಲಾವಣೆಯಾಗಿದ್ದು, ಹೊಸ ಅಪ್ಡೇಟ್ ಏನೇನು ಎನ್ನುವ ಮೋದಿ ಕಾರ್ಯಕ್ರಮದ ವಿವರ ಇಲ್ಲಿದೆ.
ಬೆಂಗಳೂರು/ಮಂಗಳೂರು, (ಏಪ್ರಿಲ್ 10): ಇದೇ ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಕರ್ನಾಟಕಕ್ಕೆ (Karnataka) ಆಗಮಿಸಲಿದ್ದಾರೆ. ಆದ್ರೆ, ಮೋದಿ ಅವರ ಕಾರ್ಯಕ್ರಮಗಳಲ್ಲಿ ಕೊಂಚ ಬದಲಾವಣೆಯಾಗಿದೆ. ಮಂಗಳೂರಿನಲ್ಲಿ (Mangaluru) ನಡೆಯಬೇಕಿದ್ದ ಬಿಜೆಪಿ ಬೃಹತ್ ಸಮಾವೇಶ ಮತ್ತು ಬೆಂಗಳೂರಿನಲ್ಲಿ(Bengaluru) ನಿಗದಿಯಾಗಿದ್ದ ರೋಡ್ ಶೋ ರದ್ದಾಗಿದೆ. ಹೀಗಾಗಿ ಮೊದಲಿಗೆ ಮೋದಿ ಮೈಸೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಮಂಗಳೂರಿನಲ್ಲಿ ಸಮಾವೇಶದ ಬದಲಿಗೆ ಸುಮಾರು 2.5 ಕಿ.ಮೀ. ರೋಡ್ ಶೋ ಮಾತ್ರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಏಪ್ರಿಲ್ 14ರಂದು ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಬಿಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆದ್ರೆ, ಇದೀಗ ಕೆಲ ಕಾರಣಾಂತರಗಳಿಂದ ಈ ಸಮಾವೇಶ ರದ್ದಾಗಿದ್ದು, ಸಮಾವೇಶದ ಬದಲು ಸುಮಾರು 2.5 ಕಿ.ಮೀ ರೋಡ್ ಶೋ ರೋಡ್ ಶೋ ನಡೆಸಲಿದ್ದು, ರೂಟ್ ಮ್ಯಾಪ್ ಸಹ ಸಿದ್ಧವಾಗಿದೆ. ಆದ್ರೆ, ಕ್ಲಿಯರೆನ್ಸ್ ಸಿಗಬೇಕಾಗಿರುವುದು ಒಂದೇ ಬಾಕಿ ಇದೆ.
ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರದಲ್ಲಿ ಮೋದಿ ಮತಬೇಟೆ? ಮುಂದಿನ ವಾರ ರಾಮನಗರಕ್ಕೆ ಭೇಟಿ ಸಾಧ್ಯತೆ
ಬೆಂಗಳೂರಿನಲ್ಲಿನ ಮೋದಿ ರೋಡ್ ಶೋ ರದ್ದು
ಇನ್ನು ಏ.14ರಂದು ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ರೋಡ್ ಶೋ ನಿಗದಿಯಾಗಿತ್ತು. ಆದ್ರೆ, ಇದೀಗ ರೋಡ್ ಶೋ ಸಹ ರದ್ದಾಗಿದೆ. ಏಪ್ರಿಲ್ 14ರಂದು ಸಂಜೆ 4 ಗಂಟೆಗೆ ಮೈಸೂರಿನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮೈಸೂರಿನಿಂದ ಮಂಗಳೂರಿಗೆ ಆಗಮಿಸಲಿದ್ದು, ಸಂಜೆ 6 ಗಂಟೆಗೆ ರೋಡ್ ಶೋ ಆರಂಭಿಸಲಿದ್ದಾರೆ.
ಮಂಗಳೂರಿನಲ್ಲಿ ಮೋದಿ ರೋಡ್ ಶೋ ರೂಟ್ ಮ್ಯಾಪ್
ಏಪ್ರಿಲ್ 14ರ ಸಂಜೆ 5 ಗಂಟೆಗೆ ಮಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಮೊದಲಿಗೆ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೋದಿ ರೋಡ್ ಶೋ ಆರಂಭಿಸಲಿದ್ದಾರೆ. ಲೇಡಿಹಿಲ್ ನಾರಾಯಣಗುರು ವೃತ್ತದಿಂದ ಹಂಪನಕಟ್ಟೆವರೆಗೆ ಸುಮಾರು 2.5 ಕೀ.ಮಿ ರೋಡ್ ಶೋ ನಡೆಯಲಿದೆ. ಲಾಲ್ಬಾಗ್, ಮಂಗಳೂರು ಪಾಲಿಕೆ ಕಚೇರಿ, ಬಳ್ಳಾಲ್ಬಾಗ್, ಎಂ.ಜಿ.ರಸ್ತೆ, PVS ವೃತ್ತ, ನವಭಾರತ ವೃತ್ತ, ಕೆ.ಎಸ್.ರಾವ್ ರಸ್ತೆ ಮೂಲಕ ಹಂಪನಕಟ್ಟೆ ಸಿಗ್ನಲ್ನಲ್ಲಿ ರೋಡ್ ಶೋ ಅಂತ್ಯವಾಗಲಿದೆ.
- ಲೇಡಿಹಿಲ್ ನಾರಾಯಣ ಗುರು ಸರ್ಕಲ್ ನಿಂದ ಆರಂಭವಾಗಲಿರೋ ರೋಡ್ ಶೋ.
- ಬಳಿಕ ಲಾಲ್ ಭಾಗ್ ನ ಮಂಗಳೂರು ಪಾಲಿಕೆ ಕಚೇರಿ ಎದುರು ತಲುಪಲಿದೆ.
- ಆ ಬಳಿಕ ಬಳ್ಳಾಲ್ ಭಾಗ್ ದಾಟಿ ಎಂ.ಜಿ ರಸ್ತೆಯಲ್ಲಿ ಸಾಗಲಿರೋ ರೋಡ್ ಶೋ.
- ಪಿವಿಎಸ್ ಸರ್ಕಲ್ ಬಳಿ ಬಲಕ್ಕೆ ತಿರುಗಿ ನವಭಾರತ್ ಸರ್ಕಲ್ ತಲುಪಲಿರೋ ರೋಡ್ ಶೋ.
- ನಂತರ ಕೆ.ಎಸ್.ರಾವ್ ರಸ್ತೆ ಮೂಲಕ ಸಾಗಿ ಹಂಪನಕಟ್ಟೆ ಸಿಗ್ನಲ್ ಬಳಿ ರೋಡ್ ಶೋ ಅಂತ್ಯ
ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಹೇಳಿದ್ದೇನು?
ಪ್ರಧಾನಿಯವರ ಕಾರ್ಯಕ್ರಮ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ, ಸಮಾವೇಶದ ಬದಲು ರೋಡ್ ಶೋ ಮಾಡುವಂತೆ ರಾಜ್ಯದಿಂದ ಸೂಚನೆ ಬಂದಿದೆ. ಹೀಗಾಗಿ ನಾರಾಯಣ ಗುರು ವೃತ್ತದಿಂದ ಹಂಪನಕಟ್ಟೆವರೆಗೆ ರೋಡ್ ಶೋ ನಡೆಯಲಿದೆ. ಜಿಲ್ಲೆಯಿಂದ ದೊಡ್ಡ ಮಟ್ಟದ ಕಾರ್ಯಕರ್ತರನ್ನು ಒಟ್ಟು ಸೇರಿಸುತ್ತೇವೆ. ರಾಜ್ಯ ನಾಯಕರು, ಜಿಲ್ಲೆಯ ಶಾಸಕರು, ನಾಯಕರು ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಮೈಸೂರಿನಿಂದ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ. ಆದರೆ ಭಾಷಣ ಇರುವುದಿಲ್ಲ ಎಂಬ ಸೂಚನೆ ಬಂದಿದೆ. ಇದರಿಂದ ರೋಡ್ ಶೋವನ್ನು ಬಹಳ ವ್ಯವಸ್ಥಿತವಾಗಿ ಮಾಡುತ್ತೇವೆ. ಒಟ್ಟು ಅಂದಾಜು ಎರಡೂವರೆ ಕಿ.ಮೀ ರೋಡ್ ಶೋ ಇರಲಿದ್ದು, ರಕ್ಷಣೆ ದೃಷ್ಟಿಯಿಂದ ರಾಜ್ಯ, ಕೇಂದ್ರದಿಂದ ಕ್ಲಿಯರೆನ್ಸ್ ಸಿಗಬೇಕಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:08 pm, Wed, 10 April 24