ಕೋಟ್ಯಂತರ ರೂ. ವಂಚಿಸಿದ್ದ ಸೈಬರ್ ವಂಚಕರ ಜತೆಗೇ ಮಂಗಳೂರು ಪೊಲೀಸರ ಪ್ರವಾಸ, ಸೆಲ್ಫಿ: ಕಾನೂನು ವಿದ್ಯಾರ್ಥಿಗಳಿಗೆ ಜಾಗೃತಿ ಪಾಠ!

| Updated By: Ganapathi Sharma

Updated on: Feb 25, 2025 | 10:44 AM

ಮಂಗಳೂರಿನ ಉರ್ವ ಠಾಣೆಯ ಪೊಲೀಸರು ಸೈಬರ್ ವಂಚನೆ ಆರೋಪಿಗಳೊಂದಿಗೆ ಗುಜರಾತ್‌ಗೆ ಪ್ರವಾಸ ಹೋಗಿ, ಅವರ ಖರ್ಚಿನಲ್ಲೇ ಸುತ್ತಾಡಿರುವ ಆರೋಪ ಕೇಳಿಬಂದಿದೆ. ಇದಲ್ಲದೆ, ಅದೇ ಆರೋಪಿಗಳಿಂದಲೇ ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ಸೈಬರ್ ವಂಚನೆ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಪಾಠ ಹೇಳಿಸಿದ್ದಾರೆ! ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಕೋಟ್ಯಂತರ ರೂ. ವಂಚಿಸಿದ್ದ ಸೈಬರ್ ವಂಚಕರ ಜತೆಗೇ ಮಂಗಳೂರು ಪೊಲೀಸರ ಪ್ರವಾಸ, ಸೆಲ್ಫಿ: ಕಾನೂನು ವಿದ್ಯಾರ್ಥಿಗಳಿಗೆ ಜಾಗೃತಿ ಪಾಠ!
ಪೊಲೀಸರ ಜತೆ ಆರೋಪಿ ತೆಗೆದಿದ್ದ ಸೆಲ್ಫಿ
Follow us on

ಮಂಗಳೂರು, ಫೆಬ್ರವರಿ 25: ಸೈಬರ್ ವಂಚಕರನ್ನು ಬಂಧಿಸಿ ವಿಚಾರಣೆ ನಡೆಸಬೇಕಿದ್ದ ಪೊಲೀಸರು ಆರೋಪಿಗಳ ಜತೆಗೆ ಅವರ ದುಡ್ಡಿನಲ್ಲೇ ಪ್ರವಾಸ ಹೋಗಿದ್ದಾರೆ! ಸೆಲ್ಫಿ ತೆಗೆದಿದ್ದಾರೆ. ಇಷ್ಟೇ ಅಲ್ಲದೆ ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ಸೈಬರ್ ವಂಚನೆ ಬಗ್ಗೆ ಪಾಠ ಹೇಳಿಸಿದ್ದಾರೆ! ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉರ್ವ ಠಾಣೆಯ ಪೊಲೀಸರ ವಿರುದ್ಧ ಇಂಥದ್ದೊಂದು ಗಂಭೀರ ಆರೋಪ ಕೇಳಿಬಂದಿದೆ. ಜತೆಗೆ, ಆರೋಪಿಗಳ ಜತೆ ಅವರು ತೆಗೆದ ಸೆಲ್ಫಿ, ಫೋಟೊಗಳೂ ಬಹಿರಂಗವಾಗಿವೆ.

ಅಮೆಜಾನ್​ಗೇ ನಾಮ: 30 ಕೋಟಿ ರೂ. ಲೂಟಿ ಮಾಡಿದ್ದ ಖದೀಮರು

ರಾಜಸ್ಥಾನ ಮೂಲದ ರಾಜ್‌ಕುಮಾರ್ ಮೀನಾ (23), ಸುಭಾಸ್ ಗುರ್ಜರ್ (27) ಜಾಗತಿಕ ದೈತ್ಯ ಅಮೆಜಾನ್ ಕಂಪನಿಗೇ ವಂಚಿಸಿದ್ದರು. ಅಮೆಜಾನ್ ಕಂಪನಿಯ ನಿಯಮಗಳನ್ನೇ ಬಂಡವಾಳ ಮಾಡಿಕೊಂಡು 30 ಕೋಟಿ ರೂ. ಲೂಟಿ ಮಾಡಿದ್ದರು. ಆರೋಪಿಗಳನ್ನು ತಮಿಳುನಾಡಿನ ಸೇಲಂ ಪೊಲೀಸರು ಬಂಧಿಸಿದ್ದರು.

ಆರೋಪಿಗಳ ಖರ್ಚಿನಲ್ಲೇ ಗುಜರಾತ್​ಗೆ ತೆರಳಿದ್ದ ಪೊಲೀಸರು

ಆರೋಪಿಗಳ ವಿರುದ್ಧ ಮಂಗಳೂರಿನ ಉರ್ವ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿತ್ತು. ಹೀಗಾಗಿ ಸೇಲಂ ಜೈಲ್‌ನಿಂದ ಬಾಡಿ ವಾರೆಂಟ್ ಮೇಲೆ ಉರ್ವ ಪೊಲೀಸರು ಇಬ್ಬರನ್ನು ನಗರಕ್ಕೆ ಕರೆದುಕೊಂಡು ಬಂದಿದ್ದರು. ಆ ಬಳಿಕ ಬಂಧಿತ ಆರೋಪಿಗಳ ಖರ್ಚಿನಲ್ಲೇ ಗುಜರಾತ್​ಗೆ ಪೊಲೀಸರು ತೆರಳಿದ್ದರು ಎಂಬ ಆರೋಪ ಕೇಳಿಬಂದಿದೆ. ಉರ್ವ ಠಾಣೆಯ ನಾಲ್ವರು ಪೊಲೀಸರು ತನಿಖೆಯ ನೆಪದಲ್ಲಿ ವಿಮಾನದಲ್ಲಿ ಗುಜರಾತ್‌ಗೆ ತೆರಳಿದ್ದರು. ಈ ವೇಳೆ ಆರೋಪಿಯೊಬ್ಬನ ಜತೆ ಸಲುಗೆ ಬೆಳೆಸಿ ನಾನಾ ಕಡೆ ಸುತ್ತಾಟ ಮಾಡಿದ್ದಾರೆ. ಗುಜರಾತ್​ನ ಹಲವೆಡೆ ಸುತ್ತಾಡಿ ಪೊಲೀಸರೊಂದಿಗೆ ಆರೋಪಿ ಸೆಲ್ಫಿಯನ್ನೂ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ.

ವಂಚಕನಿಂದಲೇ ಸೈಬರ್ ವಂಚನೆ ಜಾಗೃತಿಯ ಪಾಠ!

ಬಂಧನ ಬಳಿಕ ಸೈಬರ್ ಕ್ರೈಂ ಆರೋಪಿಯಿಂದಲೇ ಸೈಬರ್ ವಂಚನೆ ಬಗ್ಗೆ ಜಾಗೃತಿ ಪಾಠ ಮಾಡಿಸಿದ್ದಾರಂತೆ ಪೊಲೀಸರು. ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಕಾನೂನು ಕಾಲೇಜೊಂದರ 30ಕ್ಕೂ ಅಧಿಕ‌ ವಿದ್ಯಾರ್ಥಿಗಳಿಗೆ ಜಾಗೃತಿ ಪಾಠ ಮಾಡಿಸಲಾಗಿತ್ತು. ಠಾಣೆಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲೇ ಕಾರ್ಯಕ್ರಮ ನಡೆದಿತ್ತು. ಇದರಲ್ಲಿ, ಆರೋಪಿಯು ವಿದ್ಯಾರ್ಥಿಗಳಿಗೆ ಸೈಬರ್ ವಂಚನೆ ಬಗ್ಗೆ ಮಾಹಿತಿ ನೀಡಿದ್ದ.

10ಕ್ಕೂ ಹೆಚ್ಚು ರಾಜ್ಯಗಳ ಪೊಲೀಸರಿಗೆ ಬೇಕಾಗಿರುವ ಆರೋಪಿಗಳು

ಬಂಧಿತ ಆರೋಪಿಗಳು ಆನ್​ಲೈನ್ ಮಾರುಕಟ್ಟೆಯಿಂದ ನಾನಾ ರೀತಿಯ ಬೆಲೆಬಾಳುವ ಸಾಮಗ್ರಿಗಳನ್ನು ಖರೀದಿಸಿ ದೋಖಾ ಮಾಡಿದ್ದರು. ಹಣ ಕೊಟ್ಟಂತೆ ನಟಿಸಿ ದೋಖಾ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಆರೋಪಿಗಳ ವಿರುದ್ಧ ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ 10ಕ್ಕೂ ಅಧಿಕ ರಾಜ್ಯಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಮಹೀಂದ್ರಾ ಲಾಜಿಸ್ಟಿಕ್‌ನ ವಿಜಿಲೆನ್ಸ್ ಅಧಿಕಾರಿಯೊಬ್ಬರಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಮಂಗಳೂರಿನ ಉರ್ವ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ: ಮಂಗಳೂರು ಕಾರಾಗೃಹಕ್ಕೆ ಗಾಂಜಾ ಸಪ್ಲೈ ಹೇಗೆ ಆಗುತ್ತಿದೆ ಗೊತ್ತಾ? ವಿಡಿಯೋ ನೋಡಿ

ಆರೋಪಿ ರಾಜಕುಮಾರ್ ಮೀನಾನನ್ನು ತಮಿಳುನಾಡಿನ ಸೇಲಂ ಪೊಲೀಸರು ಸೇಲಂನಲ್ಲಿ ಹಾಗೂ ರಾಜಸ್ಥಾನದಲ್ಲಿ ಸುಭಾಸ್ ಗುರ್ಜರ್​ನನ್ನು ಬಂಧಿಸಿದ್ದರು.

ಈ ಮಧ್ಯೆ, ಪೊಲೀಸ್ ‌ಕಸ್ಟಡಿ ವೇಳೆ ಆರೋಪಿಗೆ ರಾಜಾತಿಥ್ಯ ನೀಡಿರುವ ಆರೋಪವೂ ಉರ್ವ ಪೊಲೀಸರ ವಿರುದ್ಧ ಕೇಳಿಬಂದಿದೆ. ಸದ್ಯ ಪೊಲೀಸರ ಎಡವಟ್ಟಿನ ಕೆಲಸಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ