ವಿಧಾನಸೌಧದಲ್ಲಿ ಹಣ ಪತ್ತೆ: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಇದು ಸಾಕ್ಷಿ- ಸಿದ್ದರಾಮಯ್ಯ ವಾಗ್ದಾಳಿ

| Updated By: ಆಯೇಷಾ ಬಾನು

Updated on: Jan 05, 2023 | 3:07 PM

ಕೆ.ಎಸ್.ಈಶ್ವರಪ್ಪಗೆ ಲಂಚ ಕೊಡಲಾಗದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದರು. ಸಂತೋಷ್ ನನ್ನ ಸಾವಿಗೆ ಈಶ್ವರಪ್ಪ ಕಾರಣವೆಂದು ಡೆತ್​ನೋಟ್​ ಬರೆದಿಟ್ಟಿದ್ದರು.

ವಿಧಾನಸೌಧದಲ್ಲಿ ಹಣ ಪತ್ತೆ: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಇದು ಸಾಕ್ಷಿ- ಸಿದ್ದರಾಮಯ್ಯ ವಾಗ್ದಾಳಿ
ಸಿದ್ದರಾಮಯ್ಯ
Follow us on

ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವಾಗಲೇ ವಿಧಾನಸೌಧದಲ್ಲಿ ಅನಧಿಕೃತವಾಗಿ 10.5 ಲಕ್ಷ ಹಣ ಪತ್ತೆಯಾಗಿದೆ. ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್(Assistant Engineer of Public Works Department) ಜಗದೀಶ್​​ ಅನಧಿಕೃತವಾಗಿ ಹಣ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಸದ್ಯ ಈ ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆಡಳಿತ ಪಕ್ಷ, ವಿರೋಧ ಪಕ್ಷ ನಾಯಕರು ಆರೋಪ ಪ್ರತ್ಯಾರೋಪ ಮಾಡುತ್ತ ಕೆಸರೆರೆಚಾಟ ಮಾಡುತ್ತಿದ್ದಾರೆ.

ಈ ಸರ್ಕಾರದಲ್ಲಿ ಭ್ರಷ್ಟಾಚಾರ ಬಿಟ್ಟರೆ ಬೇರೇನೂ ನಡೆಯುತ್ತಿಲ್ಲ

ಇನ್ನು ಘಟನೆ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ಸಾಕಷ್ಟು ಪ್ರಕರಣ ನಡೆದಿದೆ. ರಾಜ್ಯದಲ್ಲಿರುವುದು 40% ಸರ್ಕಾರವೆಂದು ಗುತ್ತಿಗೆದಾರರ ಸಂಘ ಹೇಳಿದೆ ಎಂದು ಮಂಗಳೂರಿನ ಕುದ್ರೋಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೆ.ಎಸ್.ಈಶ್ವರಪ್ಪಗೆ ಲಂಚ ಕೊಡಲಾಗದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದರು. ಸಂತೋಷ್ ನನ್ನ ಸಾವಿಗೆ ಈಶ್ವರಪ್ಪ ಕಾರಣವೆಂದು ಡೆತ್​ನೋಟ್​ ಬರೆದಿಟ್ಟಿದ್ದರು. ತುಮಕೂರು ಜಿಲ್ಲೆ ದೇವರಾಯನದುರ್ಗದ ಐಬಿಯಲ್ಲಿ ಗುತ್ತಿಗೆದಾರ ಪ್ರಸಾದ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಲೆಗೆ ಗುಂಡು ಹಾರಿಸಿಕೊಂಡು ಪ್ರದೀಪ್​ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುತ್ತಿಗೆದಾರ ಶಿವಕುಮಾರ್​​ ಎಂಬುವರು ದಯಾಮರಣ ಕೇಳಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಬಿಟ್ಟರೆ ಬೇರೇನೂ ನಡೆಯುತ್ತಿಲ್ಲ. ಅಧಿಕಾರಿಗಳ ವರ್ಗಾವಣೆ, ಪೋಸ್ಟಿಂಗ್​ಗೆ ಹಣ ಕೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ವಿಧಾನಸೌಧಕ್ಕೆ 10 ಲಕ್ಷ ಹಣ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್

ಇನ್ನು 60 ದಿನ ಮಾತ್ರ ಈ ಸರ್ಕಾರ, ಏನು ಮಾಡ್ತಾರೆ ನೋಡೋಣ​

ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ಬಿಜೆಪಿ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದಾರೆ. ವಿಧಾನಸೌಧದ ಪ್ರತಿ ಗೋಡೆಯಲ್ಲೂ ಕಾಸಿಲ್ಲದೇ ಏನೂ ನಡೆಯಲ್ಲ. ವಿಧಾನಸೌಧದಲ್ಲಿ ಶೇ.40ರಿಂದ 50ರಷ್ಟು ಕಮಿಷನ್ ಪಡೀತಿದ್ದಾರೆ. ಅನೇಕ ಮಾಹಿತಿಗಳು ನಮಗೆ ಬರುತ್ತಿವೆ. ಮಂತ್ರಿ ಮನೆಯಿಂದ ಕರೆ ಬಂತೆಂದು ಆತನನ್ನು ಬಿಟ್ಟು ಕಳಿಸಿದ್ದಾರೆ. ಇನ್ನು 60 ದಿನ ಮಾತ್ರ ಈ ಸರ್ಕಾರ, ಏನು ಮಾಡ್ತಾರೆ ನೋಡೋಣ. 40% ಕಮಿಷನ್​​ಗೆ ಈ ದುಡ್ಡೇ ದಾಖಲೆ ಅಲ್ಲವೇ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಣ ಪತ್ತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

ಯಾರಿಗೆ, ಯಾವ ಉದ್ದೇಶಕ್ಕೆ ಹಣ ತಂದಿದ್ದ ಎಂಬುದು ಗೊತ್ತಾಗಬೇಕು. ಹಣ ಪತ್ತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ತನಿಖೆ ಸಂದರ್ಭದಲ್ಲಿ ನಾನು ಪ್ರತಿಕ್ರಿಯೆ ನೀಡುವುದು ತಪ್ಪಾಗುತ್ತೆ. ಆರೋಪಿಯನ್ನ ವಿಚಾರಣೆ ಮಾಡಿದ ಬಳಿಕವಷ್ಟೇ ಗೊತ್ತಾಗಬೇಕು. 40% ಏನೂ ಇಲ್ಲ, ಇದೆಲ್ಲಾ ಕಾಂಗ್ರೆಸ್​​ ಸರ್ಕಾರದಲ್ಲಿ ನಡೆದಿತ್ತು. ಚುನಾವಣೆ ಸಂದರ್ಭದಲ್ಲಿ ಸುಮ್ಮನೇ ಗಿಮಿಕ್ ಮಾಡುತ್ತಿದ್ದಾರೆ. ಈಗಾಗಲೇ ಒಬ್ಬ ಮಂತ್ರಿ ಮೇಲೆ ಕೇಸ್ ಹಾಕಿದ್ದಾರೆ, ತನಿಖೆ ಆಗ್ತಿದೆ ಎಂದರು.

ಎಲ್ಲರ ಅವಧಿಯಲ್ಲೂ ಹಣ ಸಿಕ್ಕಿದೆ

ಮತ್ತೊಂದೆಡೆ ಘಟನೆ ಸಂಬಂಧ ರಾಮನಗರ ತಾಲೂಕಿನ ಜಿಗೇನಹಳ್ಳಿಯಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಮಾತನಾಡಿದ್ದು, ಎಲ್ಲರ ಅವಧಿಯಲ್ಲೂ ಹಣ ಸಿಕ್ಕಿದೆ. ಯಾರು ಹೋಟೆಲ್​ನಲ್ಲಿದ್ದರು, ಯಾರು ಎಲ್ಲಿದ್ರು ಅಂತಾ ಗೊತ್ತಿದೆ. ವಿಧಾನಸೌಧದಲ್ಲಿ ಹಣ ಪತ್ತೆಯಾಗಿರುವ ಬಗ್ಗೆ ತನಿಖೆಗೆ ಸೂಚಿಸಿದ್ದೇವೆ. ಭಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್​ಗೆ ನೈತಿಕ ಹಕ್ಕಿಲ್ಲ. ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿದ್ದು ಕಾಂಗ್ರೆಸ್. ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:07 pm, Thu, 5 January 23