ಮುಡಾ ಹಗರಣ: ಲೋಕಾಯುಕ್ತ ತನಿಖಾಧಿಕಾರಿಗಳ ಮೇಲೆಯೇ ಸ್ಪೋಟಕ ಆರೋಪ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ (MUDA Scam Case) ಸಿಎಂ ಸಿದ್ದರಾಮಯ್ಯಗೆ (Siddaramaiah) ಲೋಕಾಯುಕ್ತ ಕ್ಲೀನ್‌ಚಿಟ್ ನೀಡಿದ್ದು, ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಹ ಕೋರ್ಟ್ ವಜಾ ಮಾಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಮುಡಾ ಹಗರಣದ ತನಿಖೆ ಮಾಡಿದ್ದ ಲೋಕಾಯುಕ್ತರ ಮೇಲೆಯೇ ದೂರುದಾರ ಸ್ಮೇಹಮಯಿಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರು, (ಫೆಬ್ರವರಿ 09): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಮುಡಾ ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತವೇ (Lokayukta) ಆರೋಪಕ್ಕೆ ಗುರಿಯಾಗಿದ್ದು, ಮುಡಾದ ಹಿಂದಿನ ಆಯುಕ್ತರಿಂದ ಕೋಟಿ ಕೋಟಿ ರೂಪಾಯಿ ಲಂಚ (Bribe) ಪಡೆದ ಬಗ್ಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಮುಡಾ ಪ್ರಕರಣದಲ್ಲಿ ಲೋಕಾಯುಕ್ತರಿಗೆ ಕೋಟಿ ಕೋಟಿ ಹಣ ಲಂಚ ಕೊಡಲಾಗಿದೆ ಎಂದು ದೂರುದಾರ ಸ್ನೇಹಮಯಿಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮುಡಾದ ಹಿಂದಿನ ಆಯುಕ್ತರಾದ ಜಿ.ಟಿ. ದಿನೇಶ್ ಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ದೋಷಾರೋಪಣ ಪತ್ರ ಸಲ್ಲಿಸಿರುವ ತನಿಖಾಧಿಕಾರಿ. ಮತ್ತೊಬ್ಬ ಹಿಂದಿನ ಆಯುಕ್ತ ಡಿ.ಬಿ. ನಟೇಶ್ ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಯಾವುದೇ ಅಂತಿಮ ವರದಿಯೂ ಸಲ್ಲಿಸಿಲ್ಲ. ಇದಕ್ಕಾಗಿ ಡಿ.ಬಿ. ನಟೇಶ್ 4 ಕೋಟಿ 35 ಲಕ್ಷ ರೂ, ಲಂಚ ನೀಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಇದನ್ನೂ ಓದಿ: ಮುಡಾ ಕೇಸ್: ಸಿದ್ದರಾಮಯ್ಯ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್
ಡಿ.ಬಿ. ನಟೇಶ್ ಲೋಕಾಯುಕ್ತ ಅಧಿಕಾರಿಗಳಿಗೆ ಒಟ್ಟು ನಾಲ್ಕು ಕೋಟಿ ಮುವತ್ತೈದು ಲಕ್ಷ ರೂಪಾಯಿ ಹಣ ನೀಡಿದ್ದಾರೆ ಎನ್ನುವ ಸ್ಪಷ್ಟ ದಾಖಲೆಗಳು ನನ್ನ ಬಳಿ ಇವೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ಅದೇ ಹಣದ ಕಾರಣಕ್ಕೆ ತನಿಖಾಧಿಕಾರಿ ನಟೇಶ್ ಅವರನ್ನು ರಕ್ಷಿಸುವಂತೆ ನಡೆದುಕೊಂಡಿದ್ದಾರೆ ಅನ್ನೋದು ಅವರ ವಾದ
ಸ್ನೇಹಮಯಿ ಕೃಷ್ಣ ಅವರ ಕೈಗೆ ಸಿಕ್ಕಿರುವ ದಾಖಲೆಗಳಲ್ಲಿ “DCM” ಎಂಬ ಪದದ ಮುಂದೆ ಹನ್ನೆರಡು ಕೋಟಿ ಐವತ್ತು ಲಕ್ಷ ರೂಪಾಯಿ ಹಣ ನೀಡಿರುವ ಉಲ್ಲೇಖವೂ ಇದೆ. ಇದನ್ನು ಕಂಪನಿಯ ಹೆಸರು ಎಂದು ಹೇಳಲಾಗಿದೆಯಾದರೂ, DCM” ಅಂದರೆ ಏನು? ಯಾರ ಸೂಚನೆ? ಯಾರಿಗೆ ಹಣ? ಎಂಬ ಬಗ್ಗೆ ಗಂಭೀರ ಅನುಮಾನಗಳು ಮೂಡಿವೆ.
ಇದನ್ನೂ ಓದಿ; ಮುಡಾ ಹಗರಣ: ಲೋಕಾಯುಕ್ತ ತನಿಖಾ ವರದಿಯಲ್ಲಿ ಮಹತ್ವದ ಅಂಶ ಉಲ್ಲೇಖ
ಈ ಎಲ್ಲಾ ಅಂಶಗಳನ್ನು ಆಧರಿಸಿ ಸ್ನೇಹಮಯಿ ಕೃಷ್ಣ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಅರ್ಜಿಯನ್ನು ಸಲ್ಲಿಸಿದ್ದು, ಇದನ್ನು ನ್ಯಾಯಾಲಯವೂ ಸಹ ಸ್ವೀಕರಿಸಿದೆ. ಈ ಸಂಬಂಧ ಫೆಬ್ರವರಿ 20ಕ್ಕೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.
ಮುಡಾ ಹಗರಣ ಈಗ ಭೂ ಹಂಚಿಕೆಯಿಂದ ಒಂದು ಹೆಜ್ಜೆ ಮುಂದೆ ಹೋಗಿ ಲೋಕಾಯುಕ್ತ ತನಿಖೆಯ ನೈಜತೆಯನ್ನೇ ಪ್ರಶ್ನಿಸುವ ಹಂತಕ್ಕೆ ಬಂದಿದೆ. ನ್ಯಾಯಾಲಯದ ವಿಚಾರಣೆ ಈ ಗಂಭೀರ ಆರೋಪಗಳಿಗೆ ಉತ್ತರ ನೀಡುತ್ತಾ? ಅಥವಾ ಮತ್ತಷ್ಟು ಸ್ಫೋಟಕ ಸಂಗತಿಗಳು ಹೊರಬೀಳುತ್ತವೋ? ಇಡೀ ರಾಜ್ಯದ ಗಮನ ಈಗ ಫೆಬ್ರವರಿ 20ರ ಮೇಲೆ ನೆಟ್ಟಿದೆ.