AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಕೇಸ್: ಸಿದ್ದರಾಮಯ್ಯ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದ್ದು, ಸಿಎಂ ಸಿದ್ದರಾಮಯ್ಯನವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಇನ್ನು ಲೋಕಾಯುಕ್ತ ಬಿ-ರಿಪೋರ್ಟ್ ಪ್ರಶ್ನಿಸಿ ಕೋರ್ಟ್​​ ಮೆಟ್ಟಿಲೇರಿದ್ದ ದೂರುದಾರ ಸ್ನೇಹಮಯಿ ಕೃಷ್ಣಗೆ ಹಿನ್ನಡೆಯಾಗಿದೆ.

ಮುಡಾ ಕೇಸ್:  ಸಿದ್ದರಾಮಯ್ಯ ಬಿಗ್ ರಿಲೀಫ್, ಲೋಕಾಯುಕ್ತ  ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್
ಮುಡಾ ಹಗರಣ ಪ್ರಕರಣ
Ramesha M
| Edited By: |

Updated on:Jan 28, 2026 | 6:04 PM

Share

ಬೆಂಗಳೂರು/ಮೈಸೂರು, (ಜನವರಿ 28): ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದಲ್ಲಿ (MUDA Scam Case) ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.  ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತ ಪೊಲೀಸಎ ಬಿ-ರಿಪೋರ್ಟ್ (Lokayuktas B report) ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಕೋರ್ಟ್ ಮೆಟ್ಟಿಲೇರಿದ್ದರು. ಇದರ  ವಾದ ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ್ದು, ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ ಇಂದು (ಜನವರಿ 22) ಆದೇಶ ಹೊರಡಿಸಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಕುಟುಂಬಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಮುಡಾ ಹಗರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಜಮೀನು ಮಾಲೀಕ ಭೂಮಾಲೀಕ ದೇವರಾಜು ವಿರುದ್ಧ ಬಿ ರಿಪೋರ್ಟ್ ಸಲ್ಲಿಸಿತ್ತು. ಆದ್ರೆ, ಇದನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಕೋರ್ಟ್​ ಮೆಟ್ಟಿಲೇರಿದ್ದರು. ಇದರಿಂದ ಸಿದ್ದರಾಮಯ್ಯಗೆ ಟೆನ್ಷನ್ ಶುರುವಾಗಿತ್ತು. ಆದ್ರೆ, ಇದೀಗ ಜನಪ್ರತಿನಿಧಿಗಳ ಕೋರ್ಟ್​, ಲೋಕಾಯುಕ್ತ ಬಿ ರಿಪೋರ್ಟ್​ ಪುರಸ್ಕರಿಸಿದೆ. ಇದರೊಂದಿಗೆ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲದ ಜಡ್ಜ್​  ಸಂತೋಷ್ ಗಜಾನನ ಭಟ್ ಅವರು ವಜಾಗೊಳಿಸಿದ್ದಾರೆ. ಆದ್ರೆ, ಅಧಿಕಾರಿಗಳ  ಮೇಲಿನ ತನಿಖೆ ಮುಂದುವರಿಸಲು ಕೋರ್ಟ್ ಆದೇಶಿಸಿದೆ.

ಇದನ್ನೂ ಓದಿ: ಮುಡಾ ಹಗರಣ: ಲೋಕಾಯುಕ್ತ ತನಿಖಾ ವರದಿಯಲ್ಲಿ ಮಹತ್ವದ ಅಂಶ ಉಲ್ಲೇಖ

ಬಿ ರಿಪೋರ್ಟ್​ ಎಂದರೇನು​​?

ಸಾಮಾನ್ಯವಾಗಿ ಪೊಲೀಸರು, ಲೋಕಾಯುಕ್ತ ಅಥವಾ ಸಿಬಿಐ, ಇಡಿಯಂತಹ ತನಿಖಾ ಸಂಸ್ಥೆಗಳು ಪ್ರಕರಣವೊಂದರ ತನಿಖೆ ಮಾಡಿದಾಗ ಆರೋಪಿ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಸಿಗದೆ ಹೋದರೆ ಅಥವಾ ಆರೋಪದಲ್ಲಿ ಸತ್ಯಾಂಶ ಇಲ್ಲ ಅನ್ನಿಸಿದರೆ ‘ಬಿ ರಿಪೋರ್ಟ್’ ಸಲ್ಲಿಸುತ್ತಾರೆ. ಅದರಂತೆ ಮುಡಾ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಹ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರರ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ ಎಂದು ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಇದೀಗ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಒಪ್ಪಿಕೊಂಡಿದೆ. ಈ ಮೂಲಕ ಸಿಎಂ ವಿರುದ್ಧ ಮಾಡಲಾಗಿದ್ದ ಆರೋಪಗಳಿಗೆ ಬಲವಾದ ಸಾಕ್ಷಿಗಳಿಲ್ಲ ಎನ್ನುವುದು ಸಾಬೀತಾದಂತಾಗಿದೆ.

ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಸೇಫ್

ಕೋರ್ಟ್​, ಲೋಕಾಯಕ್ತ ಬಿ ರಿಪೋರ್ಟ್ ಪುರಸ್ಕರಿಸಿದ್ದರಿಂದ ಸದ್ಯಕ್ಕೆ ಸಿಎಂ ನಿರಾಳರಾಗಿದ್ದಾರೆ.ಆದ್ರೆ ದೂರುದಾರರ ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​​ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್​​​ಗೆ ಮೇಲ್ಮನವಿ ಸಲ್ಲಿಸುವ ಅವಕಾಶ ಅವರ ಮುಂದೆ ಇದೆ. ಆದ್ರೆ, ಅವರು ಏನು ಮಾಡುತ್ತಾರೆ ಎನ್ನುವುದನ್ನು ಕಾದುನೋಡಬೇಕು. ಒಟ್ಟಿನಲ್ಲಿ ಸದ್ಯಕ್ಕಂತೂ ಸಿಎಂ ಸೇಫ್ ಆಗಿದ್ದಾರೆ. ಒಂದು ವೇಳೆ ಲೋಕಾಯುಕ್ತ ಬಿ ರಿಪೋರ್ಟ್​ ಅನ್ನು ಕೋರ್ಟ್​ ಪುರಸ್ಕರಿಸದಿದ್ದರೆ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗುತ್ತಿತ್ತು.

ತಮ್ಮ ರಾಜಕಾರಣದ ಇತಿಹಾಸದಲ್ಲೇ ಸಿಎಂ ಸಿದ್ದರಾಮಯ್ಯ ಕ್ಲೀನ್ ಹ್ಯಾಂಡ್ ರಾಜಕಾರಣಿ ಎನ್ನಿಸಿಕೊಂಡಿದ್ದರು. ಆದ್ರೆ, ಮುಡಾ ಹಗರಣ ಅವರನ್ನು ಸುತ್ತಿಕೊಂಡಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡಿತ್ತು. ಆದ್ರೆ, ಇದೀಗ ಈ ಪ್ರಕರಣದಲ್ಲಿ ಕೋರ್ಟ್​ ನೀಡಿದ ಆದೇಶದಿಂದಾಗಿ ಸಿಎಂ ಸಿದ್ದರಾಮಯ್ಯ ನಿರಾಳರಾಗಿದ್ದಾರೆ.

ಪ್ರಕರಣದ ಹಿನ್ನೆಲೆ

ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ ಮೈಸೂರಿನ ಕೆಸರೆ ಗ್ರಾಮದ ಸರ್ವೇ ನಂ. 464ರಲ್ಲಿ 3 ಎಕರೆ 16 ಗುಂಟೆ ಜಮೀನನ್ನು ಪ್ರಾಧಿಕಾರವು ಬಳಸಿಕೊಂಡಿತ್ತು. ಇದಕ್ಕೆ ಪರಿಹಾರದ ಬದಲಾಗಿ ವಿಜಯನಗರ 3 ಮತ್ತು 4 ನೇ ಹಂತದಲ್ಲಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ 14 ನಿವೇಶನಗಳನ್ನು ಮಂಜೂರು ಮಾಡಲಾಗಿತ್ತು. ಇದು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿತ್ತು. ನಂತರ ತನಗೆ ಪ್ರಾಧಿಕಾರ ನೀಡಿದ್ದ 14 ಸೈಟುಗಳನ್ನು ವಾಪಸ್ ನೀಡುವುದಾಗಿ ಪಾರ್ವತಿ ಸಿದ್ದರಾಮಯ್ಯ ಘೋಷಿಸಿದ್ದರು.

ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ, ಸಂಬಂಧಿ ಹಾಗೂ ಜಮೀನಿನ ಮಾಲೀಕರ ವಿರುದ್ಧ ಮೈಸೂರು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು. ನಂತರ, ನಾಲ್ವರು ಅಕ್ರಮ ಎಸಗಿರುವ ಸಂಬಂಧ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದು ಲೋಕಾಯುಕ್ತ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಅಂದರೆ, ಆರೋಪ ಸಾಬೀತಾಗಿಲ್ಲ ಎಂದು ವರದಿ ನೀಡಲಾಗಿತ್ತು. ಇನ್ನೊಂದೆಡೆ ಈ ‘ಬಿ’ ರಿಪೋರ್ಟ್ ಅನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:18 pm, Wed, 28 January 26