ಜಯನಗರ ವಿಧಾನಸಭಾ ಕ್ಷೇತ್ರದ ರಿಸಲ್ಟ್ ವಿವಾದ: ಸುಪ್ರೀಂನಲ್ಲಿ ಬಿಜೆಪಿ ಶಾಸಕ ರಾಮಮೂರ್ತಿಗೆ ಹಿನ್ನಡೆ
ಗೊಂದಲದ ಗೂಡಾಗಿದ್ದ ಹಾಗೂ ಭಾರಿ ಕುತೂಹಲ ಕೆರಳಿಸಿದ್ದ 20234 ಬೆಂಗಳೂರಿನ ಜಯನಗರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಗೆಲುವು ಸಾಧಿಸಿದ್ದು, ಶಾಸಕರಾಗಿ ಎರಡುವರೆ ವರ್ಷಗಳ ಪೂರ್ಣಗೊಳಿಸಿದ್ದಾರೆ. ಆದ್ರೆ, ಈ ಫಲಿತಾಂಶ ವಿವಾದ ಕೋರ್ಟ್ನ್ಲಲಿದ್ದು, ಸದ್ಯ ಬಿಜೆಪಿ ಶಾಸಕ ರಾಮಮೂರ್ತಿಗೆ ಸುಪ್ರೀಂಕೋರ್ಟ್ನಲ್ಲಿ ಹಿನ್ನಡೆಯಾಗಿದೆ.

ನವದೆಹಲಿ/ಬೆಂಗಳೂರು, (ಜನವರಿ 28): 2023ರಲ್ಲಿ ನಡೆದ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶದ (Jayanagar Assembly Result 2023) ಗೊಂದಲ ಇನ್ನೂ ಬಗೆಹರಿದಿಲ್ಲ. ಮತ ಎಣಿಕೆ ಸರಿಯಾದ ಕ್ರಮದಲ್ಲಿ ಆಗಿಲ್ಲ ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸೌಮ್ಯ ರೆಡ್ಡಿ (Sowmya Reddy) ಅವರು ಕೋರ್ಟ್ ಮೆಟ್ಟಿಲೇರಿದ್ದು, ಇದಕ್ಕೆ ತಡೆ ನೀಡುವಂತೆ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ (BJP MLA CK Ramamurthy) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ (Supreme Court) ವಜಾಗೊಳಿಸಿದೆ. ಪ್ರಕರಣದ ಟ್ರಯಲ್ಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್ವಿ ಅಂಜಾರಿಯಾ ಪೀಠ ವಜಾ ಮಾಡಿ ಆದೇಶ ಹೊರಡಿಸಿದೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಮಮೂರ್ತಿ ಅವರು ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಅವರನ್ನು 16 ಮತಗಳಿಂದ ಸೋಲಿಸಿದ್ದರು. ಆದ್ರೆ, ಮತ ಎಣಿಕೆಯಲ್ಲಿ ಚುನಾವನಾಧಿಕಾರಿಗಳು ಸರಿಯಾಗಿ ನಿಯಮ ಪಾಲನೆ ಮಾಡಿಲ್ಲ ಎಂದು ಸೌಮ್ಯ ರೆಡ್ಡಿ ಅವರು ಹೈಕೋರ್ಟ್ಗೆ ಫಲಿತಾಂಶ ತಕರಾರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರಕರಣದ ಟ್ರಯಲ್ ತಡೆ ಕೋರಿ ರಾಮಮೂರ್ತಿ ಸಹ ಕೋರ್ಟ್ ಮೆಟ್ಟಿಲೇರಿದ್ದರು. ಆದ್ರೆ, ಹೈಕೋರ್ಟ್ ರಾಮಮುರ್ತಿ ಅವರ ಅರ್ಜಿಯನ್ನು ವಜಾ ಮಾಡಿತ್ತು. ಬಳಿಕ ಇದನ್ನು ಪ್ರಶ್ನಿಸಿ ರಾಮಮೂರ್ತಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು. ಆದ್ರೆ, ಇದೀಗ ಸುಪ್ರೀಂಕೋರ್ಟ್ನಲ್ಲೂ ಸಹ ಹಿನ್ನಡೆಯಾಗಿದೆ.
ಇದನ್ನೂ ಓದಿ: ‘ಕೈ’ ಗೆ ಬಂದ ತುತ್ತು ಬಾಯಿಗೆ ಬರಲಿಲ್ಲ! ಕೊನೆಗೂ ಜಯನಗರ ಕ್ಷೇತ್ರದ ಫಲಿತಾಂಶ ಪ್ರಕಟ, ಬಿಜೆಪಿಗೆ ಗೆಲುವು – ನಡುರಾತ್ರಿ ಕಣ್ಣೀರು ಹಾಕಿದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ
ಮೊದಲು ಕಾಂಗ್ರೆಸ್‌ನ ಸೌಮ್ಯ ರೆಡ್ಡಿ ಅವರು 116 ಮತಗಳಿಂದ ಗೆದ್ದುಬೀಗಿದ್ದರು. ಆದ್ರೆ, ಕೆಲ ಗೊಂದಲಗಳು ಏರ್ಪಟ್ಟಿದ್ದರಿಂದ ಮರು ಎಣಿಕೆಯಾದಾಗ ಫಲಿತಾಂಶ ಕಾಂಗ್ರೆಸ್‌ನ ‘ಕೈ’ ಚೆಲ್ಲಿದ್ದು, ವಿಜಯದ ಲಕ್ಷ್ಮೀ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರ ಪಲಾಗಿತ್ತು. ಕೊನೆ ಕ್ಷಣದಲ್ಲಿ ರಿಸಲ್ಟ್ ಕೈಕೊಟ್ಟಿದ್ದರಿಂದ ಸೌಮ್ಯ ರೆಡ್ಡಿ ಸ್ಥಳದಲ್ಲೇ ಕಣ್ಣೀರಿಟ್ಟಿದ್ದರು. ಅಲ್ಲದೇ ಚುನಾವಣಾ ಆಯೋಗದ ಆದೇಶದನ್ವಯ ಮತ ಎಣಿಕೆ ಆಗಿಲ್ಲ. ಮರು ಮತ ಎಣಿಕೆ ನಿಯಮಬಾಹಿರವಾಗಿ ಆಗಿದೆ. 837 ಅಂಚೆ ಮತ ಮರು ಎಣಿಕೆ ಆಗಬೇಕು. ವಿಡಿಯೋ ಫೂಟೇಜ್ ಪರಿಶೀಲಿಸಬೇಕೆಂದು ಕೋರ್ಟ್ ಮೊರೆ ಹೋಗಿದ್ದಾರೆ.
ಗೊಂದಲ ಏಕೆ?
ಜಯನಗರ ಕ್ಷೇತ್ರದ ಮತ ಎಣಿಕೆಯು ಮೊದಲ ಸುತ್ತಿನಿಂದಲೂ ಹಾವು-ಏಣಿಯಾಟ ನಡೆಯುತ್ತಲೇ ಇತ್ತು. 16 ಸುತ್ತಿನ ಮತ ಎಣಿಕೆ ಕಾರ್ಯ ಮುಗಿದ ಬಳಿಕ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ ಅವರು 294 ಮತಗಳಿಂದ ಮುನ್ನಡೆ ಸಾಧಿಸಿರುವುದನ್ನು ಚುನಾವಣಾ ಫಲಿತಾಂಶದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಬಳಿಕ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರು ಅಂಚೆ ಮತಗಳ ಮರು ಎಣಿಕೆಗೆ ಒತ್ತಾಯದ ಮೇಲೆ ಒಟ್ಟು ಮೂರು ಬಾರಿ ಮರು ಎಣಿಕೆ ಮಾಡಲಾಗಿತ್ತು.
ಮೊದಲ ಸಲ ಮತ್ತು ಎರಡನೇ ಬಾರಿಯ ಮರು ಎಣಿಕೆಯಲ್ಲಿಸೌಮ್ಯಾರೆಡ್ಡಿ ಅವರೇ ಮುಂದಿದ್ದರು. ಅಂತಿಮ ಮರು ಎಣಿಕೆಯಲ್ಲಿ ಮೊದಲಿಗೆ ತಿರಸ್ಕೃತಗೊಳಿಸಿದ್ದ 200 ಅಂಚೆ ಮತಗಳನ್ನು ಸಿಂಧುಗೊಳಿಸಿದ್ದರಿಂದ ಸಿ.ಕೆ.ರಾಮಮೂರ್ತಿ 16 ಮತಗಳ ಮುನ್ನಡೆ ಸಾಧಿಸಿದರು. ಇದಕ್ಕೆ ಕಾಂಗ್ರೆಸ್ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿಚುನಾವಣಾಧಿಕಾರಿಗಳು ಫಲಿತಾಂಶ ಪ್ರಕಟಿಸಿರಲಿಲ್ಲ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ, ಇವಿಎಂ ಮತ್ತು ಅಂಚೆ ಮತಗಳನ್ನು ಪರಿಶೀಲಿಸಿ, ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರು 16 ಮತಗಳಿಂದ ಜಯ ಗಳಿಸಿದ್ದಾರೆಂದು ಘೋಷಿಸಿದ್ದರು. ಹೀಗಾಗಿ ಫಲಿತಾಂಶ ಗೊಂದಲಕ್ಕೆ ಕಾರಣವಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:17 pm, Wed, 28 January 26
