AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ: ಮಹತ್ವದ ಆದೇಶ

ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ನಿಷೇಧಿಸಲಾಗಿದೆ. ಆದರೆ ಕರ್ತವ್ಯ ಸಮಯದ ಹೊರಗೆ ಒಂದು ಖಾಸಗಿ ಕ್ಲಿನಿಕ್ ಅಥವಾ ಆಸ್ಪತ್ರೆಯಲ್ಲಿ ಮಾತ್ರ OPD ಸೇವೆಗೆ ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ. ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಇಸ್ಕಾನ್ ಸಹಯೋಗದಲ್ಲಿ ರೋಗಿಗಳಿಗೆ ಪೌಷ್ಟಿಕ ಆಹಾರ ದೊರೆಯಲಿದ್ದು, ಹೊಸ ಮೆನು ಕೂಡ ಸಿದ್ಧವಾಗಿದೆ.

ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ: ಮಹತ್ವದ ಆದೇಶ
ಪ್ರಾತಿನಿಧಿಕ ಚಿತ್ರImage Credit source: ehealth.com
Vinay Kashappanavar
| Edited By: |

Updated on: Jan 28, 2026 | 4:49 PM

Share

ಬೆಂಗಳೂರು, ಜನವರಿ 28: ಸರ್ಕಾರಿ ವೈದ್ಯರು (government doctors) ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದಕ್ಕೆ ಸರ್ಕಾರ ನಿರ್ಬಂಧ ವಿಧಿಸಿದೆ. ಆ ಮೂಲಕ ಸರ್ಕಾರಿ ವೈದ್ಯರಿಗೆ ರಾಜ್ಯ ಸರ್ಕಾರ ಶಾಕ್​ ನೀಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದು ಸರ್ಕಾರಿ ಕರ್ತವ್ಯಗಳ ನಿರ್ವಹಣೆಗೆ ಅಡ್ಡಿಯಾಗುತ್ತದೆ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮದ ಎಚ್ಚರಿಕೆ ಕೂಡ ನೀಡಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವೈದ್ಯರು ಖಾಸಗಿ ವೈದ್ಯಕೀಯ ಅಭ್ಯಾಸ ನಡೆಸುವ ಕುರಿತು ಸರ್ಕಾರ ಸುತ್ತೋಲೆ ಹೊರಡಿಸುವ ಮೂಲಕ ಸ್ಪಷ್ಟೀಕರಣ ನೀಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ನಿರಂತರ ಚಿಕಿತ್ಸೆ ಒದಗಿಸುವ ಅಗತ್ಯವಿರುವುದರಿಂದ ಹಾಗೂ ರೋಗಿಗಳ ಆರೈಕೆಯಲ್ಲಿ ನಿರ್ಲಕ್ಷ್ಯ ಕಂಡುಬಂದಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ OPD ಸೇವೆಗೆ ಮಾತ್ರ ಅನುಮತಿ

ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದು ಸರ್ಕಾರಿ ಕರ್ತವ್ಯಗಳ ನಿರ್ವಹಣೆಗೆ ಅಡ್ಡಿಯಾಗುತ್ತದೆ. ಹೀಗಾಗಿ ಸರ್ಕಾರಿ ವೈದ್ಯರು ಖಾಸಗಿ ವೈದ್ಯಕೀಯ ಅಭ್ಯಾಸದ ಭಾಗವಾಗಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವುದು ಕಡ್ಡಾಯ ನಿಷೇಧಿಸಲಾಗಿದೆ. ಆದರೆ ಅಧಿಕೃತ ಕರ್ತವ್ಯ ಸಮಯ ಹೊರತು ಪಡಿಸಿ ಖಾಸಗಿ OPD ಸೇವೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಒಂದೇ ಖಾಸಗಿ ಆಸ್ಪತ್ರೆ ಅಥವಾ ಕ್ಲಿನಿಕ್‌ನಲ್ಲಿ ಮಾತ್ರ ಅಭ್ಯಾಸ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಆ ಕುರಿತ ಸಂಪೂರ್ಣ ವಿವರಗಳನ್ನು ಸರ್ಕಾರಕ್ಕೆ ಒದಗಿಸಬೇಕು. ಇನ್ನು ನಿಯಮ ಉಲ್ಲಂಘಸುವ ವೈದ್ಯರ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ಕೂಡ ನೀಡಲಾಗಿದೆ.

ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ

ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಆಹಾರದ ಬಗ್ಗೆ ಸಾಲು ಸಾಲು ದೂರು ಹಿನ್ನೆಲೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ನೀಡಲು ಮುಂದಾಗಿದೆ. ಹೀಗಾಗಿ ಆರೋಗ್ಯ ಇಲಾಖೆಯಿಂದ ಹೊಸ ಊಟದ ಮೆನು ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: ಟಿವಿ9 ವರದಿ ಫಲಶ್ರುತಿ: ಸಿವಿ ರಾಮನ್ ನಗರ ಆಸ್ಪತ್ರೆಗೆ ಕ್ಯಾಥ್‌ಲಾಬ್ ಭಾಗ್ಯ

ಇಸ್ಕಾನ್ ಸಹಯೋಗದಲ್ಲಿ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಪೌಷ್ಟಿಕ ಆಹಾರ ಒದಗಿಸುವ ಕುರಿತಾಗಿ ಆರೋಗ್ಯ ಇಲಾಖೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಹೊಸ ಊಟದ ಮೆನುನಲ್ಲಿ ಬೆಳಗ್ಗೆ ತಿಂಡಿಗೆ ರವೆ ಉಪ್ಪಿಟ್ಟು, ಗೋಧಿಯ ತಿನಿಸು, ಪೊಂಗಲ್, 100 ಗ್ರಾಂ ಬ್ರೆಡ್​, ಬಾಳೆಹಣ್ಣು ನೀಡಲಾಗುತ್ತೆ. ಮಧ್ಯಾಹ್ನ ಊಟಕ್ಕೆ ರಾಗಿ ಮುದ್ದೆ, ಅನ್ನ, ಸಾಂಬಾರ್, ಸೋಯಾ ಚಂಕ್ಸ್ ನೀಡಿದರೆ, ಸಂಜೆ ತಿಂಡಿಗೆ ಟೀ ಹಾಗೂ ಬಿಸ್ಕೆಟ್ ನೀಡಲಾಗುತ್ತದೆ. ರಾತ್ರಿ ಊಟಕ್ಕೆ ಚಪಾತಿ, ತರಕಾರಿ ಪಲ್ಯ, ಅನ್ನ-ಸಾಂಬಾರ್​, ಕಾಳುಗಳ ಪಲ್ಯ ನೀಡಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.