ಸಿಹಿ ಸುದ್ದಿ: ಬೆಂಗಳೂರಿನಲ್ಲಿ 10 ಎಕರೆ ಜಾಗದಲ್ಲಿ ಹೈಟೆಕ್ ಸರ್ಕಾರಿ ಆಸ್ಪತ್ರೆ ನಿರ್ಮಾಣ
ಕರ್ನಾಟಕದ ಪ್ರತಿಷ್ಠಿತ ಆಸ್ಪತ್ರೆ ಎನಿಸಿಕೊಂಡಿರುವ ಬೆಂಗಳೂರಿನ ವಿಕ್ಟೋರಿಯಾನಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ಕೊವಿಡ್ ಬಳಿಕ ವಿಕ್ಟೋರಿಯಾದಲ್ಲಿ ನಿರಂತರವಾಗಿ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಒತ್ತಡ ಹೆಚ್ಚಾಗಿದ್ದು, ಇದರಿಂದಲೇ ಎಷ್ಟೋ ಸರಿ ರೋಗಿಗಳ ಸಾವಿಗೂ ಕಾರಣವಾಗಿದೆ. ಈ ಪರದಾಟ ತಪ್ಪಿಸಲು ಸರ್ಕಾರ ಮುಂದಾಗಿದ್ದು, ಸಿಲಿಕಾನ್ ಜನರಿಗೆ ಗೂಡ್ ನ್ಯೂಸ್ ನೀಡಿದೆ.

ಬೆಂಗಳೂರು, (ಆಗಸ್ಟ್ 20): ಸಿಲಿಕಾನ್ ಸಿಟಿ ಬೆಂಗಳೂರಿಗರಿಗೇ (Bengaluru) ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಬಂಪರ್ ನ್ಯೂಸ್ ಸಿಕ್ಕಿದೆ. ಬೆಂಗಳೂರಿನಲ್ಲಿ ಎರಡನೇ ವಿಕ್ಟೋರಿಯಾ ( Victoria hospital) ಮಾದರಿಯಲ್ಲಿ ಎರಡನೇ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಈಗಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಒತ್ತಡದಿಂದ ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಆಸ್ಪತ್ರೆಯ ಮೇಲೆ ಒತ್ತಡದಿಂದಾಗಿ ಸಾವುಗಳು ಸಂಭವಿಸುತ್ತಿವೆ ಎನ್ನುವ ಮಾತುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ, ರಾಜಧಾನಿಯಲ್ಲಿ ಎರಡನೇ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯ ಮೇಲೆ ಸಾಕಷ್ಟು ಒತ್ತಡ
ವಿಕ್ಟೋರಿಯಾ ಆಸ್ಪತ್ರೆಯ ಮೇಲೆ ಸಾಕಷ್ಟು ಒತ್ತಡ ಹೆಚ್ಚಾಗಿದೆ. ರೋಗಿಗಳ ಬೇಡಿಕಯಷ್ಟು ಸೌಲಭ್ಯ ಸಿಗುತ್ತಿಲ್ಲ. ಬೆಡ್ ಸಮಸ್ಯೆಗಳು ಸೇರಿದ್ದಂತೆ ನಾನಾ ರೀತಿಯ ಸಮಸ್ಯೆಗಳು ಶುರುವಾಗಿದೆ. ಆಸ್ಪತ್ರೆಗೆ ರಾಜ್ಯದ ಜನರ ಒತ್ತಡದ ಜೊತೆಗೆ ಕೇರಳ ಆಂಧ್ರಪ್ರದೇಶ, ತಮಿಳನಾಡಿನಿಂದ ರೋಗಿಗಳು ಚಿಕಿತ್ಸೆಗೆ ಬರುತ್ತಿರುವುದರಿಂದ ಒತ್ತಡ ಹೆಚ್ಚಾಗಿದ್ದು, ಇದರಿಂದ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ. ಅದರಲ್ಲೂ ಉತ್ತರ ಬೆಂಗಳೂರಿನ ಜನರಿಗೆ ಆ ಭಾಗದಲ್ಲಿ ಯಾವುದೇ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆಯಿಂದ ರೋಗಿಗಳಿಗೆ ಪರದಾಟ ಎದುರಾಗಿದೆ. ಹೀಗಾಗಿ ವೈದ್ಯಕೀಯ ಶಿಕ್ಷಣ ಸಂಸ್ಥೆ ವಿಕ್ಟೋರಿಯಾ ಆಸ್ಪತ್ರೆ ಒತ್ತಡ ಕಡಿಮೆ ಮಾಡಲು ಮುಂದಾಗಿದೆ. ವಿಕ್ಟೋರಿಯಾ ಆಸ್ಪತ್ರೆ ಮಾದರಿಯಲ್ಲಿ 300 ಬೆಡ್ ಗಳ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಕೈಹಾಕಿದೆ
10 ಎಕರೆ ಜಾಗದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ
ಕಳೆದ ವಾರ ಸಿಎಂ ಸಿದ್ದರಾಮಯ್ಯನವರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಆಸ್ಪತ್ರೆ ಮೇಲಿನ ರೋಗಿಗಳ ಒತ್ತಡ ನಾಲ್ಕು ಪಟ್ಟು ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಮತ್ತೊಂದು ಆಸ್ಪತ್ರೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ನಿಮ್ಹಾನ್ಸ್ ಪಕ್ಕದಲ್ಲಿರುವ ವೈದ್ಯಕೀಯ ಶಿಕ್ಷಣ ಇಲಾಖೆಯ 10 ಎಕರೆ ಜಾಗದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದು, ಈ ಹೊಸ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನ ಜನರಿಗೆ ಉಚಿತವಾಗಿ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಆಸ್ಪತ್ರೆಯ ದಾಖಲಾತಿ ಪ್ರಕಾರ 2014ರಲ್ಲಿ 2.18 ಲಕ್ಷ ಹೊಸ ಪ್ರಕರಣಗಳನ್ನು ವೈದ್ಯರು ನೋಡಿದರೆ ಪ್ರಸಕ್ತ ವರ್ಷ ಈಗ ಆ ಸಂಖ್ಯೆ 3.5 ಮೂರೂವರೆ ಲಕ್ಷ ಸಮೀಪಿಸಿದೆ. ವಾರ್ಷಿಕ 50 ಸಾವಿರ ಒಳರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಶಸ್ತ್ರಚಿಕಿತ್ಸೆಗಳ ಸಂಖ್ಯೆಯೂ ದುಪ್ಪಟ್ಟಾಗಿದೆ. 2014ರಲ್ಲಿ 5,448 ಪ್ರಮುಖ (ಮೇಜರ್) ಶಸ್ತ್ರಚಿಕಿತ್ಸೆ ಹಾಗೂ 18,526 ಸಣ್ಣ (ಮೈನರ್) ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿತ್ತು. ಈಗ ಆ ಸಂಖ್ಯೆ ಕ್ರಮವಾಗಿ 10 ಸಾವಿರ ಹಾಗೂ 50 ಸಾವಿರದ ಗಡಿ ಸಮೀಪಿಸಿದೆ.
ಆರ್ಥೋಪೆಡಿಕ್ಸ್, ಡರ್ಮಟಾಲಜಿ, ಸೈಕಿಯಾಟ್ರಿ, ರೇಡಿಯಾಲಜಿ, ರೇಡಿಯೊಥೆರಪಿ, ಫಿಸಿಯೋಥೆರಪಿ, ನ್ಯೂರಾಲಜಿ, ನ್ಯೂರೋ ಸರ್ಜರಿ, ಕಾರ್ಡಿಯಾಲಜಿ ಸೇರಿ ವಿವಿಧ ವಿಭಾಗಗಳಲ್ಲಿ ಒತ್ತಾಡ ಹೆಚ್ಚಾಗಿದೆ. ಇನ್ನು ಐಸಿಯು ಹಾಸಿಗೆ ಸಮಸ್ಯೆ ಎದುರಾಗಿದೆ . ವಿಕ್ಟೋರಿಯಾ ಹಾಗೂ ಅಪಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರದಿಂದ 70 ಐಸಿಯು ಹಾಸಿಗೆಗಳಿವೆ. ಈ ಹಾಸಿಗೆಗಳ ಕೊರತೆಯಿಂದ ಕೆಲ ಸಂದರ್ಭದಲ್ಲಿ ಜಯನಗರ ಸಾರ್ವಜನಿಕ ಆಸ್ಪತ್ರೆ, ಕೆ.ಸಿ. ಜನರಲ್ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿನ ಹಾಸಿಗೆ ಲಭ್ಯತೆಯ ಮಾಹಿತಿ ಪಡೆದು, ಅಲ್ಲಿಗೆ ರೋಗಿಗಳನ್ನು ಶಿಫಾರಸು ಮಾಡಲಾಗುತ್ತಿದೆ.
ಹೆಚ್ಚಿನ ರೋಗಿಗಳು ಬರುತ್ತಿರುವುದರಿಖದ ಚಿಕಿತ್ಸೆಗೆ ದಿನವಿಡೀ ಕಾಯಬೇಕಾದ ಪರಿಸ್ಥಿತಿಯಿದೆ. ಇದು ದೂರದ ಊರುಗಳಿಂದ ಬಂದವರಿಗೆ ಸಮಸ್ಯೆ ಆಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಬೆಂಗಳೂರಿನಲ್ಲಿ ವಿಕ್ಟೋರಿಯಾ ಮಾದರಿಯಲ್ಲೇ ಮತ್ತೊಂದು ಆಸ್ಪತ್ರಗೆ ನಿರ್ಮಾಣಕ್ಕೆ ಸರ್ಕಾರ ಕೈಹಾಕಿದೆ.
ದೇಶದಲ್ಲಿ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹೈಟೆಕ್ ಡ್ರಾಮಾ ಕೇರ್ ಸೆಂಟರ್, ಗ್ಯಾಸ್ಟ್ರೋ ಎಂಟರಾಲಜಿಸ್ಟ್, ಲಿವರ್ ಟ್ರಾನ್ಸ್‌ಪ್ಲಾಂಟ್, ಕಿಡ್ನಿ ಟ್ರಾನ್ಸ್‌ಪ್ಲಾಂಟ್ , ಸೇರಿದ್ದಂತೆ ಉನ್ನತ್ತ ಚಿಕಿತ್ಸೆಗಳನ್ನ ಜನರಿಗೆ ಉಚಿತವಾಗಿ ನೀಡಲು ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಾಗಿದ್ದು, ರೋಗಿಗಳು ಅದಷ್ಟು ಬೇಗ ಸರ್ಕಾರ ಈ ಆಸ್ಪತ್ರೆ ನಿರ್ಮಾಣಕ್ಕೆ ಹೈಹಾಕಿ ಜನರಿಗೆ ಅನಕೂಲ ಮಾಡಬೇಕಿದೆ ಅಂತಿದ್ದಾರೆ.
ಈಗಾಗಲೇ ಸರ್ಕಾರ ನಿಮ್ಹಾನ್ಸ್ ಆಸ್ಪತ್ರೆ ಪಕ್ಕದಲ್ಲಿ ಭೂಮಿಯನ್ನ ನೀಡಿದೆ ಜೊತೆಗೆ ಈ ಆಸ್ಪತ್ರೆ ದೇಶದಲ್ಲಿಯೇ ಸಾಕಷ್ಟು ಹೊಸ ಹೊಸ ತಂತ್ರಜ್ಞಾನಗಳನ್ನೊಳಗೊಂಡ ವಿಶೇಷ ಆಸ್ಪತ್ರೆಯಾಗಲಿದ್ದು, ರೋಗಿಗಳಿಗೆ ಅನುಕೂಲವಾಗಲಿದೆ.



