ಟಿವಿ9 ವರದಿ ಫಲಶ್ರುತಿ: ಸಿವಿ ರಾಮನ್ ನಗರ ಆಸ್ಪತ್ರೆಗೆ ಕ್ಯಾಥ್‌ಲಾಬ್ ಭಾಗ್ಯ
ಬೆಂಗಳೂರಿನ ಸಿವಿರಾಮನ್ ನಗರದ ಆಸ್ಪತ್ರೆಯಲ್ಲಿ ಅದೆಷ್ಟೋ ವರ್ಷಗಳಿಂದ ಹೃದಯ ಸಂಬಂಧಿ ಖಾಯಿಲೆಗಳಿಗೆ ಚಿಕಿತ್ಸೆ ನೀಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ರೋಗಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಟಿವಿ9 ವರದಿ ಪ್ರಸಾರ ಮಾಡಿತ್ತು. ವರದಿ ಬಳಿಕ ಎಚ್ಚೆತ್ತಿರುವ ಆರೋಗ್ಯ ಇಲಾಖೆ ಇದೀಗ ರೋಗಿಗಳಿಗೆ ಶುಭ ಸುದ್ದಿ ನೀಡಿದೆ.

ಬೆಂಗಳೂರು, ಸೆಪ್ಟೆಂಬರ್ 4: ಇತ್ತೀಚೆಗೆ ಪ್ರತಿ ಗಂಟೆಗೂ 2 ರಿಂದ 3 ಹೃದಯಘಾತ ಆಗುತ್ತಿರುವ ಬಗ್ಗೆ ಹೃದಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಸರ್ಕಾರಿ ಆಸ್ಪತ್ರೆಗಳಲ್ಲಿ (Govt Hospitals) ಹೃದಯಸಂಬಂಧೀ ಪ್ರಕರಣಗಳೊಂದಿಗೆ ಜನರು ಹೆಚ್ಚಾಗಿ ಬರುತ್ತಿದ್ದಾರೆ. ಇದರಿಂದ ಇರುವ ಕೆಲವೊಂದು ಹೃದ್ರೋಗ ಸಂಸ್ಥೆಗಳು ಜನರಿಂದ ತುಂಬಿ ಹೋಗಿವೆ. ಆದರೆ, ಬೇರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಇದಕ್ಕೆ ಸಿವಿ ರಾಮನ್ ನಗರ ಆಸ್ಪತ್ರೆ (CV Raman Nagara) ಕೂಡಾ ಹೊರತಾಗಿರಲಿಲ್ಲ. ಸಿವಿ ರಾಮನ್ ನಗರ ಆಸ್ಪತ್ರೆಯಲ್ಲಿ ಹೃದ್ರೋಗ (Heart Problems) ಘಟಕ ಸ್ಥಾಪನೆಗೆ ಮನವಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಯಾಥ್ ಲ್ಯಾಬ್ ಹಾಗೂ ಕಾರ್ಡಿಯಾಲಜಿಸ್ಟ್ಗಳ ನೇಮಕಕ್ಕೆ ಒತ್ತಾಯ ಕೇಳಿ ಬಂದಿತ್ತು.
ಯಾಕೆಂದರೆ, ಈ ಆಸ್ಪತ್ರೆಗಳಲ್ಲಿ ಹೃದಯಾಘಾತವಾಗಿ ಯಾರಾದರೂ ಬಂದರೆ, ಅಥವಾ ಯಾವುದೇ ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆಗೆಂದು ವೈದ್ಯರು ಇರಲಿಲ್ಲ. ಸೌಕರ್ಯ ಕೂಡಾ ಇಲ್ಲ. ಹೀಗಾಗಿಯೇ ಇಂದಿರಾನಗರ, ಬೆಳ್ಳಂದೂರು ಸೇರಿದಂತೆ ಅನೇಕ ಭಾಗದ ಜನರು ಸಿವಿರಾಮನ್ ನಗರ ಆಸ್ಪತ್ರೆ ಇದ್ದರೂ, ಹೃದಯಾಘಾತವಾದರೆ ಜಯದೇವ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಇತ್ತು. ದಾರಿ ಮಧ್ಯದಲ್ಲೇ ಅನೇಕರು ಗೋಲ್ಡನ್ ಪಿರಿಯಡ್ ಕಳೆದುಕೊಂಡು ಸಾವನ್ನಪ್ಪಿದ್ದ ಪ್ರಕರಣಗಳು ಕೂಡಾ ವರದಿಯಾಗಿದ್ದವು. ಮತ್ತೊಂದೆಡೆ, ಜಯದೇವ ಆಸ್ಪತ್ರೆ ಮೇಲೆ ಒತ್ತಡವೂ ಹೆಚ್ಚಾಗಿತ್ತು. ಬೆಡ್ ಸಿಗುತ್ತಿರಲಿಲ್ಲ. ಈ ಸಮಸ್ಯೆಯ ಬಗ್ಗೆ ‘ಟಿವಿ9’ ಕಳೆದ ಕೆಲ ದಿನಗಳ ಹಿಂದೆ ವರದಿ ಪ್ರಸಾರ ಮಾಡಿ, ಆರೋಗ್ಯ ಇಲಾಖೆ ಕಣ್ಣು ತೆರೆಯುವಂತೆ ಮಾಡಿದೆ. ವರದಿಯ ಬಳಿಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚೆತ್ತುಕೊಂಡಿದ್ದಾರೆ.
ಶೀಘ್ರದಲ್ಲೇ ಸಿವಿ ರಾಮನ್ ನಗರ ಆಸ್ಪತ್ರೆಗೆ ಕ್ಯಾಥ್‌ಲಾಬ್ ನೀಡುವುದಾಗಿ ಹೇಳಿದ್ದಾರೆ. ಜಯದೇವ ಸಂಸ್ಥೆಯಿಂದಲೇ ಇಲ್ಲಿಗೂ ಕ್ಯಾಥ್‌ಲಾಬ್ ನೀಡಲಾಗುತ್ತದೆ. ಆ್ಯಂಜಿಯೋಗ್ರಫಿ, ಆ್ಯಂಜಿಯೋಪ್ಲಾಸ್ಟಿ, ಓಪನ್ ಹಾರ್ಟ್ ಸರ್ಜರಿ ಸೇರಿದಂತೆ ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು, ಜೊತೆಗೆ ಸೂಕ್ತ ಸಿಬ್ಬಂದಿ ಕೊಟ್ಟು, ಪ್ರತ್ಯೇಕವಾಗಿ ಹೊಸ ಬ್ಲಾಕ್ ತೆರೆಯುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ನೀವು ಕೂಡ 7 ಗಂಟೆಗಿಂತ ಕಡಿಮೆ ನಿದ್ರೆ ಮಾಡ್ತೀರಾ? ಹಾಗಿದ್ರೆ ಈ ಭಯಾನಕ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕು
ಒಟ್ಟಿನಲ್ಲಿ ಈ ಭಾಗದ ಜನರು ಹೃದಯಾಘಾತವಾದರೆ, ಜಯದೇವ ಆಸ್ಪತ್ರೆಗೇ ಹೋಗಬೇಕಿತ್ತು. ಇದರಿಂದ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಯೂ ಹೆಚ್ಚಿತ್ತು. ಇದೀಗ ರೋಗಿಗಳ ಹಿತದೃಷ್ಟಿಯಿಂದ ಹೊಸ ಸೇವೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದ್ದು, ಎಲ್ಲವೂ ಅಂದುಕೊಂಡಮಂತೆಯೇ ಆದರೆ ಮೂರು ತಿಂಗಳಲ್ಲಿ ಕ್ಯಾಥ್‌ಲಾಬ್ ಸಿಗಲಿದೆ.