ಅದು ಮಂಗಳೂರಿನ ಜೀವನದಿ ಫಲ್ಗುಣಿ. ಆದ್ರೆ ಇದೀಗ ಆ ನದಿಯ ನೀರು ವಿಷವಾಗುತ್ತಿದೆ (poison). ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಸಂಸ್ಕರಿಸದೇ ತ್ಯಾಜ್ಯ ನೀರನ್ನು ನೇರವಾಗಿ ಬಿಡುತ್ತಿರುವುದರಿಂದ ಜಲಚರಗಳ ಸಾವಿಗೆ ಕಾರಣವಾಗುವ ಜೊತೆ ನದಿ ಪೂರ್ತಿ ಮಲಿನವಾಗುತ್ತಿದೆ. ಈ ಬಗ್ಗೆ ಇಲ್ಲಿದೆ ಒಂದು ಕಂಪ್ಲೀಟ್ ರಿಪೋರ್ಟ್. ಒಂದು ಕಡೆ ಪೈಪ್ ಮೂಲಕ ಹರಿಯುತ್ತಿರುವ ಕಲುಷಿತ ನೀರಿನಲ್ಲಿ ಉಕ್ಕುತ್ತಿರುವ ನೊರೆ. ಇನ್ನೊಂದು ಕಡೆ ನದಿಗೆ ಸೇರುತ್ತಿರುವ ಅದೇ ವಿಷಕಾರಿ ನೀರು. ಇದು ಮಂಗಳೂರಿನ ಫಲ್ಗುಣಿ ನದಿ (Phalguni river) ಮಲಿನವಾಗುತ್ತಿರುವ ದುರಂತ ವಿದ್ಯಮಾನಗಳು. ಇದು ಯಾವುದೋ ಕೈಗಾರಿಕೆಯಿಂದ ಬರುತ್ತಿರೋ ತ್ಯಾಜ್ಯ ನೀರಲ್ಲ. ಬದಲಾಗಿ ಮಂಗಳೂರು ಮಹಾನಗರ ಪಾಲಿಕೆಯ (Mangaluru City Corporation) ಪಚ್ಚನಾಡಿಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಬಂದು ಸೇರುತ್ತಿರುವ ತ್ಯಾಜ್ಯ ನೀರು.
ಇಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸದೇ ನೇರವಾಗಿ ನದಿಗೆ ಬಿಡಲಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆರೋಪ ಮಾಡಿದ್ದಾರೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅರಣ್ಯ ಜೀವಿಶಾಸ್ತ್ರ, ಪರಿಸರ ಸಚಿವ ಈಶ್ವರ ಖಂಡ್ರೆಗೂ ಸೊಸೈಟಿ ಫಾರ್ ಫಾರೆಸ್ಟ್ ಎನ್ವಿರಾಮೆಂಟ್ & ಕ್ಲೈಮೇಟ್ ಚೇಂಜ್ ಸಂಘಟನೆ ದೂರು ನೀಡಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ಬಂದು ತ್ಯಾಜ್ಯ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.
ಮಂಗಳೂರಿನ ಪಚ್ಚನಾಡಿಯಲ್ಲಿ ತ್ಯಾಜ್ಯನೀರು ಸಂಸ್ಕರಣ ಘಟಕವಿದೆ. ಈ ಘಟಕಕ್ಕೆ ಮಂಗಳೂರು ನಗರದ ಶೌಚಯುಕ್ತ ಕೊಳಚೆ ನೀರು ಬಂದು ಬೀಳುತ್ತದೆ. ಈ ನೀರನ್ನು ಶುದ್ದಿಕರಿಸಿ ಬಿಡಬೇಕಾದುದು ಪಾಲಿಕೆಯ ಕರ್ತವ್ಯ. ಆದ್ರೆ ಇಲ್ಲಿ ಈ ಕೊಳಚೆ ನೀರನ್ನು ಶುದ್ದಿಕರೀಸದೆ ನೇರವಾಗಿ ಹರಿಯುವ ನೀರಿಗೆ ಬಿಡಲಾಗುತ್ತಿದೆ ಎಂಬ ಆರೋಪ ಪರಿಸರವಾದಿಗಳದ್ದು. ಈ ಹಿಂದೆ ತೆರೆದ ತೋಡಿಗೆ ಈ ತ್ಯಾಜ್ಯ ನೀರನ್ನು ಬಿಡಲಾಗುತ್ತಿತ್ತು.
ಇದು ನೇರವಾಗಿ 11 ಗ್ರಾಮಗಳಿಗೆ ಕುಡಿಯುವ ನೀರುಣಿಸುವ ಮರವೂರು ಡ್ಯಾಂಗೆ ಸೇರುತಿತ್ತು. ಜನರ ವಿರೋಧದ ಬಳಿಕ ಪೈಪ್ ಮೂಲಕ ಡ್ಯಾಂನ ಮುಂದೆ ಹರಿಯುವ ವ್ಯವಸ್ಥೆಯನ್ನು ಸದ್ಯ ಮಾಡಲಾಗಿದೆ. ಆದ್ರೆ ಈಗಲೂ ಶುದ್ದೀಕರಿಸದೇ ತ್ಯಾಜ್ಯ ನೀರನ್ನು ಬಿಡಲಾಗುತ್ತಿದೆ. ಇದರಿಂದ ಪಲ್ಗುಣಿ ನದಿ ಮಲಿನವಾಗಿ ಮತ್ಸ್ಯ ಸಂಕುಲವೂ ನಾಶವಾಗುತ್ತಿದೆ. ಈ ಬಗ್ಗೆ ಪಾಲಿಕೆಗೆ 30ಕ್ಕೂ ಹೆಚ್ಚು ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದ್ರು ಯಾವುದೇ ಕ್ರಮವನ್ನು ಪಾಲಿಕೆ ತೆಗೆದುಕೊಂಡಿಲ್ಲ.
ಒಟ್ಟಿನಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಎಷ್ಟು ನೀರು ಸಂಸ್ಕರಣೆ ಆಗುತ್ತೆ, ಹೇಗೆ ಆಗುತ್ತೆ ಎಂಬುದರ ಬಗ್ಗೆ ಸಮಗ್ರ ಪರಿಶೀಲನೆ ಆಗಬೇಕಿದೆ. ಈ ಬಗ್ಗೆ ಪಾಲಿಕೆ ನಿರ್ಲಕ್ಷ್ಯ ತೋರಿದ್ರೆ ದಂಡ ವಿಧಿಸಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ಕೈಗೊಂಡು ನದಿ ಇನ್ನಷ್ಟು ಮಲಿನವಾಗದಂತೆ ಗಮನಹರಿಸಬೇಕಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ