ಮಂಗಳೂರು, ಫೆಬ್ರವರಿ 6: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆಯಿಂದ ಚಾರಣ ಮಾಡಬಹುದಾದ ಪ್ರಸಿದ್ಧ ಸ್ಥಳ ಕುಮಾರ ಪರ್ವತ (Kumara Parvatha) ಚಾರಣಕ್ಕೆ (Trekking) ನಿರ್ಬಂಧ ಹೇರಿದ್ದೇಕೆ ಎಂಬ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ಸ್ಪಷ್ಟನೆ ನೀಡಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರ ಪರ್ವತ ಚಾರಣಪಥದಲ್ಲಿ ಜನಜಂಗುಳಿಯಿಂದ ಪರಿಸರ ಹಾನಿ ಭೀತಿ ಎದುರಾಗಿದೆ. ಹೀಗಾಗಿ ಚಾರಣ ನಿಯಂತ್ರಣ ಸಂಬಂಧ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಅದರ ಜೊತೆಗೆ ಚಾರಣಕ್ಕೆ ಆನ್ ಲೈನ್ ದಾಖಲಾತಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಏಕ ಬಳಕೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಅಪಾರ ಹಾನಿಯಾಗುತ್ತಿದೆ. ಕರಾವಳಿ ಪ್ರದೇಶಗಳನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡುವ ಗುರಿ ಇದೆ. ರಾಜ್ಯದ ಎಲ್ಲಾ ಚಾರಣ ಪಥಗಳನ್ನು ಆನ್ ಲೈನ್ ದಾಖಲಾತಿ ವ್ಯಾಪ್ತಿಗೆ ತರುತ್ತೇವೆ. ಏಕಾಏಕಿ ಸಾವಿರಾರು ಜನ ಹೋದರೆ ಇಕ್ಕಟ್ಟಾಗಿ ಸಮಸ್ಯೆ ಆಗುತ್ತದೆ. ಕುಮಾರ ಪರ್ವತದಲ್ಲಿ ಅಂದಾಜು 20 ಕಿ.ಮೀ ಚಾರಣ ಇರಬಹುದು. ಇಂಥ ಜಾಗದಲ್ಲಿ ಎಷ್ಟು ಜನ ಹೋಗಬಹುದು ಅಂತ ನೋಡಿ ಆನ್ ಲೈನ್ ಮೂಲಕ ನಿಗದಿ ಮಾಡುತ್ತೇವೆ. ಮಿತಿ ಹಾಕಿ ಚಾರಣಿಗರಿಗೆ ನಾವು ಪಾಸ್ಗಳನ್ನು ಕೊಡುತ್ತೇವೆ. ಅದನ್ನು ಮೀರಿ ಯಾರಿಗೂ ಬರಲು ಅವಕಾಶ ಇಲ್ಲ. ಚಾರಣ ನಿಯಂತ್ರಣವನ್ನು ಮಾಡಲೇ ಬೇಕಿದೆ, ಅದರ ಅಗತ್ಯ ಇದೆ.
ಕರಾವಳಿ ನಿಯಂತ್ರಣ ವಲಯದಲ್ಲಿ ಹಲವೆಡೆ ಕಟ್ಟಡಗಳ ನಿರ್ಮಾಣ ಆಗಿದೆ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಈ ಭಾಗದಲ್ಲಿ ಮೂರು ಎಕರೆಗಿಂತ ಕಡಿಮೆ ಬೇಸಾಯ ಮಾಡುವ ರೈತರಿದ್ದಾರೆ. ಅವರಿಗೆ ತೊಂದರೆ ಆಗದ ರೀತಿಯಲ್ಲಿ ಅರಣ್ಯ ಒತ್ತುವರಿ ತೆರವಿಗೆ ಸೂಚಿಸಿದ್ದೇನೆ. ಜೊತೆಗೆ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇ ಆಗಬೇಕಿದೆ. ಅಂಥ ಕಡೆ ಸರ್ವೇ ನಡೆಸಿ ಅರಣ್ಯ ಇಲಾಖೆ ವಶಕ್ಕೆ ಪಡೆಯಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕುಮಾರ ಪರ್ವತದ ತಪ್ಪಲಿನಲ್ಲಿ ನಡೆಯುತ್ತೆ ಕುಕ್ಕೆ ಸುಬ್ರಹ್ಮಣ್ಯ ದೇವರ ಪಾದುಕೆ ಪೂಜೆ, ಇದರ ಹಿಂದಿದೆ ಪುರಾಣ ಕಥೆ
ಸಿಆರ್ಝಡ್ ವಲಯದ ಅಕ್ರಮದ ಬಗ್ಗೆ ಪರಿಶೀಲನೆ ಮಾಡಿದ್ದೇನೆ. ಅಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ವರದಿ ಕೇಳಿದ್ದೇನೆ. ಅಕ್ರಮ ರೆಸಾರ್ಟ್ಗಳಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಅಕ್ರಮ ಹೋಮ್ ಸ್ಟೇಗಳಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಅರಣ್ಯ ಉಳಿಸಲು ಹೆಲಿಕಾಪ್ಟರ್ ಬೇಕಾದರೂ ಬಳಕೆ ಮಾಡುತ್ತೇವೆ. ಕಾಡ್ಗಿಚ್ಚು ನಿಯಂತ್ರಣಕ್ಕೆ ಖಾಸಗಿ ಹೆಲಿಕಾಪ್ಟರ್ ಅವಶ್ಯಕತೆ ಇದ್ದರೆ ಬಳಕೆ ಮಾಡುತ್ತೇವೆ. ಅರಣ್ಯ ಇಲಾಖೆಗೆ ಪ್ರತ್ಯೇಕ ಹೆಲಿಕಾಪ್ಟರ್ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು. ಬೆಳ್ತಂಗಡಿ ಕಳೆಂಜ ಅರಣ್ಯ ಭೂಮಿ ವಿವಾದದಲ್ಲಿ ಸರ್ವೇ ಆಗ್ತಿದೆ. ಅದರ ಬಗ್ಗೆ ಆ ಮೇಲೆ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:08 pm, Tue, 6 February 24