ಮಂಗಳೂರು: ತುಳುನಾಡ ದೈವಸ್ಥಾನಗಳು ಕಾರಣಿಕ ಶಕ್ತಿಯನ್ನು ಹೊಂದಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಂತಹ ದೈವಸ್ಥಾನದ ಮುಂದೆ ಎಂತವನೂ ಕೇಡು ಬಗೆಯಲು ಮುಂದಾಗುವುದಿಲ್ಲ. ಆದರೆ ಕೆಲ ವರ್ಷಗಳ ಹಿಂದೆ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ದೈವಸ್ಥಾನಗಳಿಗೆ ಅಪಚಾರ ಎಸಗುವ ಕೃತ್ಯಗಳು ನಿರಂತರವಾಗಿ ನಡೆಯುತಿತ್ತು. ಕಾಣಿಕೆ ಹುಂಡಿಗಳಿಗೆ ಅಶುದ್ದವಾದ ವಸ್ತು ಹಾಕಿ ಅಪವಿತ್ರಗೊಳಿಸುವುದು, ವಿಗ್ರಹಗಳಿಗೆ ಹಾನಿ ಮಾಡುವ ಕೃತ್ಯ ಎಸಗಲಾಗಿತ್ತು. ಈ ದುಷ್ಕೃತ್ಯ ಎಸಗುವವರು ಶೀಘ್ರ ಸೆರೆಯಾಗುವಂತೆ ವಿಶ್ವ ಹಿಂದೂ ಪರಿಷತ್ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಮೊರೆ ಹೋಗಿತ್ತು.
ಹೌದು ಮಂಗಳೂರಿನ ಕದ್ರಿ ಮಂಜುನಾಥನ ಸನ್ನಿಧಿಯಿಂದ ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ಪಾದಯಾತ್ರೆ ನಡೆಸಿತ್ತು. ಕಳೆದ ಮೂರು ವರ್ಷಗಳಿಂದ ಈ ಪಾದಯಾತ್ರೆ ನಡೆಯುತ್ತಿದ್ದು, ಈ ಬಾರಿಯ ನಮ್ಮ ನಡೆ ಕೊರಗಜ್ಜನೆಡೆ ಪಾದಯಾತ್ರೆ ನಿನ್ನೆ(ಮಾ.19) ನಡೆಯಿತು. ಮೂರು ಸಾವಿರಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಮಕ್ಕಳು, ಯುವತಿಯರು, ಮಹಿಳೆಯರು ಎನ್ನದೇ ಮೂರು ಸಾವಿರಕ್ಕೂ ಹೆಚ್ಚು ಜನ ಬರಿಗಾಲಿನಲ್ಲಿ ಹೆಜ್ಜೆ ಹಾಕಿದರು.
ಇದನ್ನೂ ಓದಿ:ಕಾಂತಾರ ಸಿನಿಮಾ ನೆನಪಿಸುತ್ತೆ ಬೆಂಗಳೂರಿನ ಈ ಜಾಗ ಪ್ರಕರಣ; ಕೊರಗಜ್ಜನ ಮೊರೆ ಹೋದ ಗ್ರಾಮಸ್ಥರು ಹೇಳಿದ್ದೇನು ಗೊತ್ತಾ?
ಪಾದಯಾತ್ರೆ ಆರಂಭಕ್ಕೂ ಮೊದಲು ಕದ್ರಿ ಮಂಜುನಾಥನ ಸನ್ನಿದಿಯಲ್ಲಿ ಪ್ರಾರ್ಥನೆ ಮಾಡಲಾಯಿತು. ಬಳಿಕ ಕೇಸರಿ ಶಾಲು ಹಾಕಿಕೊಂಡು ಭಕ್ತರು ಪಾದಯಾತ್ರೆ ಆರಂಭಿಸಿದರು. ಸುಮಾರು 12 ಕಿಲೋ ಮೀಟರ್ ದೂರದ ಕುತ್ತಾರು ಕೊರಗಜ್ಜನ ಆದಿಕ್ಷೇತ್ರದ ಕಡೆ ಈ ಪಾದಯಾತ್ರೆ ಸಾಗಿತು. ಪಾದಯಾತ್ರೆಯ ದಾರಿಯುದ್ದಕ್ಕೂ ರಸ್ತೆಗೆ ನೀರು ಹಾಕಿ ಸ್ವಚ್ಛಗೊಳಿಸಲಾಗಿತ್ತು. ಭಕ್ತರ ದಣಿವು ನಿವಾರಿಸಲು ಅಲ್ಲಲ್ಲಿ ಬೆಲ್ಲ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದಿಸ್ಥಳಕ್ಕೆ ಎಲ್ಲಾ ಭಕ್ತರು ಬಂದು ತಲುಪಿದೊಡನೆ ಕೊರಗಜ್ಜನ ಸನ್ನಿಧಿಯ ಮುಂದೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಸದ್ಯ ನಡೆಯುತ್ತಿರುವ ಹಿಂದೂ ವಿರೋಧಿ ಕೃತ್ಯಗಳು ಮಾಯವಾಗುವಂತೆ ಪ್ರಾರ್ಥಿಸಲಾಯಿತು. ಹಿಂದೂ ಸಮಾಜದ ಐಕ್ಯತೆ ಜೊತೆ ಲೋಕ ಕಲ್ಯಾಣಕ್ಕಾಗಿಯೂ ಬೇಡಿಕೊಳ್ಳಲಾಯಿತು.
ಧಾರ್ಮಿಕ ಕ್ಷೇತ್ರಗಳ ಅಪವಿತ್ರಗೊಳಿಸುವ ದುಷ್ಕೃತ್ಯ ನಡೆದು ಭಕ್ತರು ಪಾದಯಾತ್ರೆ ನಡೆಸಿದ ನಂತರ ಕಿಡಿಗೇಡಿಗಳು ಪೊಲೀಸರು ಖೆಡ್ಡಾಕ್ಕೆ ಬಿದ್ದಿದ್ದರು. ಆ ಬಳಿಕ ಮೂರು ವರ್ಷದಿಂದ ಈ ಪಾದಯಾತ್ರೆ ಮುಂದುವರಿದುಕೊಂಡು ಬಂದಿದೆ. ಈ ಬಾರಿಯು ಸಹ ಹಿಂದೂ ವಿರೋಧಿ ಕೃತ್ಯ ಮಾಯವಾಗುವಂತೆ ವಿಶ್ವಹಿಂದೂಪರಿಷತ್, ಭಕ್ತರು ಬೇಡಿಕೊಂಡಿದ್ದು ಫಲ ಏನೆಂದು ಇನ್ನಷ್ಟೇ ಗೊತ್ತಾಗಬೇಕಾಗಿದೆ.
ವರದಿ: ಅಶೋಕ್ ಟಿವಿ9 ಮಂಗಳೂರು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ