
ಮಂಗಳೂರು: ಹರೆಯದ ಹುಚ್ಚು ಮನಸ್ಸು, ಹಿರಿಯರ ಎಚ್ಚರಿಕೆ ಮತ್ತು ಬುದ್ದಿವಾದಕ್ಕೆ ಬೆಲೆ ಕೊಡದೆ ಸಮುದ್ರಕ್ಕಿಳಿದು ಅಲೆಗಳಿಗೆ ಸಿಲುಕಿ ಪ್ರಾಣಕಳೆದುಕೊಳ್ಳುತ್ತಿದ್ದವರನ್ನ ಪ್ರಾಣದ ಹಂಗು ತೊರೆದು ರಕ್ಷಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ.
ಹೌದು, ಮಂಗಳೂರಿನ ಹೊರವಲಯದ ಸುರತ್ಕಲ್ ಮತ್ತು ಪುತ್ತೂರಿನಿಂದ ಬಂದಿದ್ದ ಯುವಕರ ತಂಡ ತನ್ನ ಮಂಗನಾಟ ಮೆರೆದಿದೆ. ಸುರತ್ಕಲ್‌ನ ಗೊಡ್ಲೆಕೊಪ್ಪ ಸಮುದ್ರ ಕಿನಾರೆಯಲ್ಲಿ ಸ್ಥಳೀಯರು ಮತ್ತು ಮೀನುಗಾರರ ಎಚ್ಚರಿಕೆಯ ನಡುವೆಯೂ ಸಮುದ್ರಕ್ಕಿಳಿದಿದ್ದಾರೆ. ಆದ್ರೆ ಸಿಕ್ಕಾಪಟ್ಟೆ ಬೀಸುತ್ತಿದ್ದ ಗಾಳಿಯಿಂದಾಗಿ ಸಮುದ್ರದಲ್ಲಿ ವಿಪರೀತ ಅಲೆಗಳು ಎದ್ದಿವೆ. ಪರಿಣಾಮ ನೀರಿಗಿಳಿದಿದ್ದ ಆರು ಯುವಕರ ತಂಡದಲ್ಲಿ ಒಬ್ಬ ಯುವಕ ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಆಳ ನೀರಿನಲ್ಲಿ ಸಿಲುಕಿಕೊಂಡಿದ್ದ.
ಸಮುದ್ರದಲೆಗೆ ಸಿಲುಕಿ ಅಂಗಲಾಚುತ್ತಿದ್ದ ಯುವಕ
ಅದೃಷ್ಟವಶಾತ್ ಸಮುದ್ರದಲ್ಲಿ ಸಿಲುಕಿಕೊಂಡಿದ್ದಾತ ತನ್ನನ್ನು ರಕ್ಷಿಸುವಂತೆ ಅಂಗಲಾಚುತ್ತಿದ್ದ. ಅಲ್ಲಿಯೇ ಇದ್ದ ಕರಾವಳಿ ರಕ್ಷಣಾ ಪಡೆ ಕೂಡಾ ವಿಪರೀತ ಅಲೆಗಳಿದ್ದುದರಿಂದ ಈ ಯುವಕನನ್ನು ರಕ್ಷಿಸಲು ನಿರಾಕರಿಸಿದೆ.
ಪ್ರಾಣ ಪ್ರಾಣಪಣಕ್ಕಿಟ್ಟು ರಕ್ಷಿಸಿದ ಮೀನುಗಾರರು
ಆದ್ರೆ ಪ್ರಾಣಕ್ಕಾಗಿ ಅಂಗಲಾಚುತ್ತಿದ್ದ ಯುವಕನ ಆರ್ತನಾದ ಕೇಳಿದ ಸ್ಥಳೀಯ ಮೀನುಗಾರರ ಮನಸ್ಸು ಕರಗಿದೆ. ತಮ್ಮ ಪ್ರಾಣದ ಹಂಗು ತೊರೆದು ಯುವಕನನ್ನು ರಕ್ಷಿಸಲು ಮೀನುಗಾರರಾದ ಶ್ರೀಯಾನ್ ಮತ್ತು ಸುಮನ್ ಮುಂದಾಗಿದ್ದಾರೆ. ದೊಡ್ಡ ದೊಡ್ಡ ಅಲೆಗಳ ನಡುವೆಯೂ ಸಮುದ್ರಕ್ಕಿಳಿದು ತಮ್ಮ ಪ್ರಾಣ ಪಣಕ್ಕಿಟ್ಟು ಯುವಕನನ್ನು ರಕ್ಷಿಸಿದ್ದಾರೆ.
ಅಪರಿಚಿತನ ಪ್ರಾಣರಕ್ಷಿಸಲು ತಮ್ಮ ಪ್ರಾಣ ಪಣಕ್ಕಿಟ್ಟು ಸಾಹಸ ಮೆರೆದ ಇಬ್ಬರು ಮೀನುಗಾರರಾದ ಶ್ರೀಯಾನ್ ಮತ್ತು ಸುಮನ್ ಅವರ ಧೈರ್ಯಕ್ಕೆ ಈಗ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
Published On - 7:58 pm, Sun, 28 June 20