ಮಳಲಿ ಮಸೀದಿಯಲ್ಲಿ ಸರ್ವೆ ಹಾಗೂ ಸಂರಕ್ಷಣೆಗೆ ಸಂಬಂಧಿಸಿದ ಅರ್ಜಿಗಳು ಮುಂದೆ ವಿಚಾರಣೆಗೆ ಬರಲಿವೆ: ವಿಎಚ್ಪಿ ವಕೀಲ ಚಿದಾನಂದ ಕೆದಿಲಾಯ
‘ನ್ಯಾಯಾಲಯವು ವಿಚಾರಣೆ ವೇಳೆ ಕೇಳುವ ಎಲ್ಲ ದಾಖಲೆಗಳನ್ನೂ ಒದಗಿಸುತ್ತೇವೆ. ಕಾಶಿಯ ಜ್ಞಾನವಾಪಿಯಲ್ಲಿಯೂ ಕೋರ್ಟ್ ಕಮಿಷನರ್ ಸ್ಥಳ ಸಮೀಕ್ಷೆ ಮಾಡಿದ್ದರು’ ಎಂದು ಅವರು ತಿಳಿಸಿದರು.
ಮಂಗಳೂರು: ಮಳಲಿ ಮಸೀದಿ ವಿವಾದಕ್ಕೆ (Malali Masjid Controversy) ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರಿನ ಸಿವಿಲ್ ನ್ಯಾಯಾಲಯವು (Mangalore City Civil Court) ವಿಚಾರಣೆಗೆ ಅಂಗೀಕರಿಸಿದೆ. ವಿಚಾರಣೆ ಮತ್ತು ತೀರ್ಪು ಕುರಿತು ‘ಟಿವಿ9’ಗೆ ಪ್ರತಿಕ್ರಿಯಿಸಿದ ವಿಎಚ್ಪಿ (Vishwa Hindu Parishat) ಪರ ವಕೀಲ ಚಿದಾನಂದ ಕೆದಿಲಾಯ, ‘ನ್ಯಾಯಾಲಯವು ಇಂದು ತನ್ನ ಅಧಿಕಾರ ವ್ಯಾಪ್ತಿ ಕುರಿತು ತೀರ್ಪು ನೀಡಿದೆ’ ಎಂದು ಸ್ಪಷ್ಟಪಡಿಸಿದರು. ‘ಮಳಲಿ ಮಸೀದಿ ಜೀರ್ಣೋದ್ಧಾರ ಸಂದರ್ಭದಲ್ಲಿ ಈ ಸ್ಥಳದಲ್ಲಿ ಪುರಾತನ ದೇವಸ್ಥಾನ ಇತ್ತು ಎಂಬ ವಿಚಾರ ಬಗ್ಗೆ ಈ ವಿವಾದ ಆರಂಭವಾಗಿತ್ತು. ಮಸೀದಿ ಸಮಿತಿಯು ಈ ಪ್ರಕರಣದ ವಿಚಾರಣೆಯ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ ಎಂದು ಅರ್ಜಿ ಹಾಕಿದ್ದರು’ ಎಂದು ವಿವರಿಸಿದರು.
‘ಕಾಶಿಯ ಜ್ಞಾನವಾಪಿ ಮಸೀದಿ ವಿಚಾರಣೆ ಸಂದರ್ಭದಲ್ಲಿ ಅಲ್ಲಿನ ನ್ಯಾಯಾಲಯ ನೀಡಿದ್ದ ತೀರ್ಪಿನ ಮಾದರಿಯಲ್ಲಿಯೇ ಈಗ ಮಂಗಳೂರು ಕೋರ್ಟ್ ಸಹ ಆದೇಶ ಕೊಟ್ಟಿದೆ. ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿ, ಪ್ರಕರಣದ ವಿಚಾರಣೆ ನಡೆಸುವ ಅಧಿಕಾರವು ಇದೇ ನ್ಯಾಯಾಲಯಕ್ಕೆ ಇದೆ ಎಂದು ಹೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆಯು ಇದೇ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ’ ಎಂದು ಅವರು ವಿವರಿಸಿದರು.
‘ಇಂದು ಕೋರ್ಟ್ ನೀಡಿರುವ ಆದೇಶದ ಪ್ರಕಾರ ವಿಶ್ವ ಹಿಂದೂ ಪರಿಷತ್ ಸಲ್ಲಿಸಿರುವ ಹಲವು ಅರ್ಜಿಗಳು ಮುಂದಿನ ದಿನಗಳಲ್ಲಿ ವಿಚಾರಣೆಗೆ ಬರಲಿವೆ. ವಿವಾದಿತ ಜಾಗದ ಸರ್ವೇ ಮಾಡಬೇಕು. ಅದನ್ನು ಪುರಾತತ್ವ ಇಲಾಖೆಯ ವಶಕ್ಕೆ ಒಪ್ಪಿಸಿ, ಸಂರಕ್ಷಣೆ ಮಾಡಬೇಕು ಎಂಬ ಅರ್ಜಿಯೂ ಸಲ್ಲಿಕೆಯಾಗಿದೆ. ನ್ಯಾಯಾಲಯವು ವಿಚಾರಣೆ ವೇಳೆ ಕೇಳುವ ಎಲ್ಲ ದಾಖಲೆಗಳನ್ನೂ ಒದಗಿಸುತ್ತೇವೆ. ಕಾಶಿಯ ಜ್ಞಾನವಾಪಿಯಲ್ಲಿಯೂ ಕೋರ್ಟ್ ಕಮಿಷನರ್ ಸ್ಥಳ ಸಮೀಕ್ಷೆ ಮಾಡಿದ್ದರು’ ಎಂದು ಅವರು ತಿಳಿಸಿದರು.
‘ಕೋರ್ಟ್ ಕಮಿಷನರ್ ಸಮೀಕ್ಷೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಅಲ್ಲಿ ಶಿವಲಿಂಗ ಪತ್ತೆಯಾಗಿ, ಸತ್ಯ ಹೊರಗೆ ಬಂತು. ಇಲ್ಲಿಯೂ ಸಹ ಕೋರ್ಟ್ ಕಮಿಷನರ್ ಮೂಲಕ ಸರ್ವೆ ನಡೆಸಿದರೆ ಮಳಲಿಯ ಸತ್ಯ ಹೊರಬರುತ್ತದೆ. ಸಿವಿಲ್ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅಧಿಕಾರವೂ ಮಸೀದಿ ಆಡಳಿತ ಮಂಡಳಿಗೆ ಇದೆ’ ಎಂದು ಅವರು ಹೇಳಿದರು.
‘ವಕ್ಫ್ ಬೋರ್ಡ್ ಮತ್ತು ಪ್ಲೇಸಸ್ ಆಫ್ ವರ್ಷಿಪ್ ಕಾಯ್ದೆಯ ಅಡಿಯಲ್ಲಿ ಸಿವಿಲ್ ಕೋರ್ಟ್ಗೆ ಈ ಪ್ರಕರಣದ ವಿಚಾರಣೆ ನಡೆಸುವ ಅಧಿಕಾರ ಇಲ್ಲ ಎಂದು ಹೇಳಿದ್ದರು. ಆದರೆ ತನಗೆ ವಿಚಾರಣೆ ನಡೆಸುವ ಅಧಿಕಾರವಿದೆ ಎಂದು ಹೇಳಿರುವ ಸಿವಿಲ್ ಕೋರ್ಟ್ ಮಸೀದಿ ಸಮಿತಿಯ ಅರ್ಜಿಗಳನ್ನು ತಿರಸ್ಕರಿಸಿದೆ. ಸದ್ಯ ಮಸೀದಿ ಮೇಲಿನ ತಡೆಯಾಜ್ಞೆ ಮುಂದುವರೆಯಲಿದೆ. ಮುಂದಿನ ವಿಚಾರಣೆ ಜನವರಿ 8, 2023ಕ್ಕೆ ಆರಂಭವಾಗಲಿದೆ’ ಎಂದು ಅವರು ಹೇಳಿದರು.
ವಿಎಚ್ಪಿ ಅರ್ಜಿ ವಿಚಾರಣೆಗೆ ಅಂಗೀಕಾರ, ಮಸೀದಿ ಆಡಳಿತ ಮಂಡಳಿ ಅರ್ಜಿ ವಜಾ
ಮಳಲಿ ಮಸೀದಿ ಜಾಗದ ವಿವಾದಕ್ಕೆ ಸಂಬಂದಿಸಿದಂತೆ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯನ್ನು 3ನೇ ಹೆಚ್ಚುವರಿ ಸಿವಿಲ್ ಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ. ಮಸೀದಿ ಕಾಮಗಾರಿಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸಬೇಕು ಮತ್ತು ವಿಎಚ್ಪಿ ಅರ್ಜಿ ವಜಾ ಮಾಡಬೇಕು ಎನ್ನುವ ಮಸೀದಿ ಆಡಳಿತ ಮಂಡಳಿಯ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಸಿವಿಲ್ ಕೋರ್ಟ್ ವ್ಯಾಪ್ತಿಯಲ್ಲಿಯೇ ಅರ್ಜಿಯ ವಿಚಾರಣೆ ನಡೆಯಲಿದೆ. ಕೋರ್ಟ್ ಕಮಿಷನರ್ ನೇಮಿಸಿ, ಮಸೀದಿ ಸರ್ವೇ ನಡೆಸಬೇಕು ಎಂದು ವಿಎಚ್ಪಿ ತನ್ನ ಅರ್ಜಿಯಲ್ಲಿ ಮನವಿ ಮಾಡಿತ್ತು. ವಿಎಚ್ಪಿ ಅರ್ಜಿಯನ್ನು ಅಂಗೀಕರಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಜನವರಿ 8, 2023ಕ್ಕೆ ಮುಂದೂಡಿದೆ.
Published On - 2:54 pm, Wed, 9 November 22