
ಮಂಗಳೂರು, (ಆಗಸ್ಟ್ 27): ನನ್ನ ಮಗಳು 20 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ (dharmasthala )ಕಾಣೆಯಾಗಿದ್ದಾಳೆಂದು ಸುಜಾತಾ ಭಟ್ ನೀಡಿದ್ದ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಅನನ್ಯಾ ಭಟ್ ನಾಪತ್ತೆ ಪ್ರಕರಣ (Dharmasthala Ananya Bhat Case) ಸಂಬಂಧ ತಾಯಿ ಸುಜಾತಾ ಭಟ್ (Sujatha Bhar) ನೀಡಿರುವ ದೂರನ್ನು ಎಸ್ಐಟಿ (SIT) ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ‘ಅನನ್ಯ’ವಾದ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ್ದಾರೆ. ಇದರ ನಡುವೆ ಮಾಸ್ಕ್ ಮ್ಯಾನ್ ಬಂಧನ, ಮಹೇಶ್ ತಿಮರೋಡಿ ಮನೆ ಮೇಲೆ ದಾಳಿ ಬೆನ್ನಲ್ಲೇ ಸುಜಾತಾ ಭಟ್, ನಿನ್ನೆ(ಆಗಸ್ಟ್ 26) ಬೆಳಗಿನ ಜಾವ 5ರ ಸುಮಾರಿಗೆ ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಓಡೋಡಿ ಬಂದಿದ್ದು, ತಮ್ಮನ್ನು ವಿಚಾರಣೆ ನಡೆಸಿ ಎಂದು ಮಲಗಿದ್ದ ಅಧಿಕಾರಿಗಳನ್ಜು ಎಬ್ಬಿಸಿದ್ದಾರೆ. ಇನ್ನು ಯಾವುದೇ ನೋಟಿಸ್ ನೀಡದೇ ವಿಚಾರಣೆ ಬಂದ ಸುಜಾತಾ ಭಟ್ ಅವರನ್ನು ಎಸ್ಐಟಿ ಅಧಿಕಾರಿಗಳು ನಿನ್ನೆ(ಆಗಸ್ಟ್ 26) ವಿಚಾರಣೆ ನಡೆಸಿ ಕೆಲ ಮಾಹಿತಿ ಪಡೆದುಕೊಂಡಿದ್ದರು. ಇಂದು(ಆಗಸ್ಟ 27) ಎರಡನೇ ದಿನವೂ ಸಹ ಹೊರಗಡೆ ಊಟಕ್ಕೂ ಬಿಡಿದೇ ತೀವ್ರ ವಿಚಾರಣೆಗೊಳಪಡಿಸಿದ್ದು, ಅಧಿಕಾರಿಗಳ ಪ್ರಶ್ನೆಗಳ ಸುರಿಮಳೆಗೆ ಸುಜಾತಾ ಭಟ್ ತಪ್ಪಾಯ್ತು ನನ್ನು ಬಿಟ್ಟುಬಿಡಿ. ದೂರು ವಾಪಸ್ ಪಡೆದುಕೊಳ್ಳುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಎರಡನೇ ದಿನದ ವಿಚಾರಣೆ ವೇಳೆ ಎಸ್ಐಟಿ ಅಧಿಕಾರಿಗಳ ಪ್ರಶ್ನೆಗಳ ಸುರಿಮಳೆಗೆ ಸುಜಾತಾ ಭಟ್ ಉತ್ತರಿಸಲಾಗದೇ ಕಕ್ಕಾಬಿಕ್ಕಿಯಾಗಿದ್ದು, ತಪ್ಪಾಯಿತು ನನ್ನನ್ನು ಬಿಟ್ಟು ಬಿಡಿ ಎಂದು ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಅನನ್ಯ ಭಟ್ ನಾಪತ್ತೆ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳಿಗೆ ನೀಡಿರುವ ದೂರನ್ನ ವಾಪಸ್ ಪಡೆಯುವುದಾಗಿ ಸುಜಾತಾ ಭಟ್ ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಅನನ್ಯ ಭಟ್ ಪ್ರಕರಣದ ರಹಸ್ಯ ಹಾಗೂ ಅದರ ಹಿಂದಿರುವವರ ಹೆಸರುಗಳನ್ನು ಸುಜಾತಾ ಭಟ್ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಅನನ್ಯಾ ಭಟ್ ಕಥೆ ಹೆಣೆದವರಿಗೆ ಸಂಕಷ್ಟ ಶುರುವಾಗಿದೆ. ಇನ್ನು ದೂರು ಹಿಂಪಡೆಯುವುದಾಗಿ ಸುಜಾತಾ ಹೇಳಿಕೆಗೆ ಎಸ್ಐಟಿ ಅಧಿಕಾರಿಗಳು ಸಮ್ಮತಿಸಿದ್ದಾರೆ.
ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಎಸ್ಐಟಿ ರಚಿಸಿತ್ತು. ಎಸ್ಐಟಿ ರಚನೆ ಬೆನ್ನಲ್ಲೇ ಪ್ರಕರಣದ ತನಿಖೆ ಬಿರುಸುಗೊಂಡಿತ್ತು. ಇದರ ಮಧ್ಯೆ ಸುಜಾತ ಭಟ್, 20 ವರ್ಷಗಳ ಹಿಂದೆ ನನ್ನ ಮಗಳ ಅನನ್ಯ ಭಟ್ ಧರ್ಮಸ್ಥಳದಿಂದ ನಾಪತ್ತೆಯಾಗಿದ್ದಾಳೆ ಎಂದು ಗಂಭೀರ ಆರೋಪವೊಂದನ್ನು ಮಾಡಿದ್ದರು. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಧರ್ಮಸ್ಥಳ ಬುರುಡೆ ಪ್ರಕರಣ ನಡುವೆಯೇ ಈ ಅನನ್ಯ ಭಟ್ ಕೇಸ್ ಸಹ ಎಸ್ಐಟಿ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಆದರೂ ಬಿಡದ ಎಸ್ಐಟಿ, ಧರ್ಮಸ್ಥಳದ ಬುರುಡೆ ಪ್ರರಕಣವನ್ನು ಕ್ಲೈಮ್ಯಾಕ್ಸ್ ಹಂತಕ್ಕೆ ತಂದು ಆರೋಪ ಮಾಡಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಬಂಧಿಸಿ ವಿಚಾರಣೆಗೊಳಡಿಸಿದ್ದಾರೆ.
ಇನ್ನೊಂದೆಡೆ ಎಸ್ಐಟಿ ತಂಡ, ಅನನ್ಯ ಭಟ್ ಪ್ರಕರಣವನ್ನು ಸದ್ದಿಲ್ಲದೇ ತನಿಖೆ ಮಾಡಿದ್ದು, ಕೆಲ ಮಾಹಿತಿ ಕಲೆಹಾಕಿದೆ. ಅನನ್ಯ ಭಟ್ ಇದ್ರಾ ಇಲ್ವಾ? ಈ ಸುಜಾತಾ ಭಟ್ ಯಾರು? ಎಲ್ಲಿಯವರು ಎನ್ನುವ ವಿವರವನ್ನು ಸಂಗ್ರಹಿಸಿದೆ. ಇದರ ಬೆನ್ನಲ್ಲೇ ಇದೀಗ ಸುಜಾತಾ ಭಟ್ ಯುಟರ್ನ್ ಹೊಡೆದಿದ್ದು, ತಾವು ಕೊಟ್ಟ ದೂರನ್ನೇ ವಾಪಸ್ ಪಡೆದುಕೊಳ್ಳುತ್ತೇನೆ ಬಿಟ್ಟು ಬಿಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಹೀಗಾಗಿ ಎಸ್ಐಟಿ., ಸುಜಾಟ್ ಹೇಳಿಕೆ ಸಮ್ಮಿಸಬಹುದು. ಆದ್ರೆ, ಇದರ ಹಿಂದೆ ಇದ್ದವರಿಗೆ ಸಂಕಷ್ಟ ತಪ್ಪಿದ್ದಲ್ಲ.