ಆಸ್ತಿಗಾಗಿ ಅನನ್ಯ ಭಟ್ ಸೃಷ್ಟಿಯೇ? ಆ ಜಮೀನಿನಲ್ಲಿ ಪಾಲು ಪಡೆಯಲು ಸುಜಾತಾ ಭಟ್ ಈ ಕಥೆ ಸೃಷ್ಟಿಸಿದ್ರಾ?
ಮಗಳು ಅನನ್ಯ ಭಟ್ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆಂದು ಆರೋಪ ಪ್ರಕರಣಕ್ಕೆ ದಿನಕ್ಕೊಂಡು ತಿರುವು ಸಿಗುತ್ತಿದೆ. ಇಂತಹದೊಂದು ಆರೋಪ ಮಾಡಿರುವ ಸುಜಾತಾ ಭಟ್ ಕ್ಷಣಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಈ ನಡುವೆ ಸುಜಾತಾ ಭಟ್, ಉಡುಪಿಯ ಪರಿಕಾ ಪ್ರದೇಶದಲ್ಲಿರುವ ಜಮೀನಿನಲ್ಲಿ ಪಾಲು ಪಡೆಯಲು ಈ ಅನನ್ಯ ಭಟ್ ಕಥೆ ಸೃಷ್ಟಿಸಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಉಡುಪಿ, (ಆಗಸ್ಟ್ 26): ಸುಜಾತಾ ಭಟ್ (Sujatha Bhat )ಅವರ ಆಸ್ತಿ ವಿವಾದ ಹೊಸ ತಿರುವು ಪಡೆದಿದೆ. ಆಸ್ತಿಯನ್ನು ಪಡೆಯುವ ಹೋರಾಟವೇ ಅನನ್ಯ ಭಟ್ (Ananya Bhat ) ಎಂಬ ಪಾತ್ರವನ್ನು ಸೃಷ್ಟಿಸುವಂತೆ ಮಾಡಿತೇ ಎಂಬ ಪ್ರಶ್ನೆಯೂ ಇದೀಗ ಎದ್ದಿದೆ. ಈ ಸಂಬಂಧ ವಿಶೇಷ ತನಿಖಾ ದಳ (ಎಸ್ಐಟಿ) ತನಿಖೆಯನ್ನು ಗಂಭೀರವಾಗಿ ಮುಂದುವರೆಸಿದ್ದು, ಸುಜಾತಾ ಭಟ್ ನೀಡಿದ ದೂರಿನ ನಿಜಾಂಶವನ್ನು ಪರಿಶೀಲಿಸುತ್ತಿದೆ. ಇನ್ನು ಉಡುಪಿಯ (Udupi) ಪರಿಕಾ ಪ್ರದೇಶದಲ್ಲಿರುವ ಜಮೀನಿನ ಬಗ್ಗೆ ಸುಜಾತಾ ಭಟ್ ಮಾಡಿರುವ ಹಕ್ಕುಹೊಂದಿಕೆ ಕುರಿತು ಮಾಜಿ ನಗರಸಭಾ ಸದಸ್ಯ ಹಾಗೂ ಸ್ಥಳೀಯ ನಾಯಕ ಮಹೇಶ್ ಠಾಕೂರ್ ಸ್ಪಷ್ಟನೆ ನೀಡಿದ್ದು, ಸುಜಾತಾ ಭಟ್ ಅವರು ಪರಿಕಾದಲ್ಲಿ ಇರುವ ಜಮೀನು ತಮಗೆ ಸೇರಿದ್ದಾಗಿದೆ ಎಂದು ಹೇಳಿಕೆ ನೀಡಿದ್ದರು. ಆ ಜಮೀನಿಗಾಗಿಯೇ ಅನನ್ಯ ಭಟ್ ಎನ್ನುವ ಪಾತ್ರ ಸೃಷ್ಟಿಸಿ ಧರ್ಮಸ್ಥಳ ಕ್ಷೇತ್ರದೊಂದಿಗೆ ಹೋರಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾಜಿ ನಗರಸಭಾ ಸದಸ್ಯ ಹಾಗೂ ಸ್ಥಳೀಯ ನಾಯಕ ಮಹೇಶ್ ಠಾಕೂರ್ ಮಾತನಾಡಿದ್ದು, ಪರಿಕಾ ಅರಮನೆ ಮತ್ತು ಸಂಬಂಧಿತ ಜಮೀನುಗಳು ಮೂಲತಃ ಸಿಂಗಾರಮ್ಮ ಅವರಿಗೆ ಸೇರಿದವು. ಸಿಂಗಾರಮ್ಮ ಅವರು ಅರಮನೆಯ ಕೊನೆಯ ಒಡೆಯರಾಗಿದ್ದರು. ಅವರು ಅಣ್ಣಯ್ಯ ಭಟ್ಟರನ್ನು ದೇವಸ್ಥಾನ ಪೂಜೆಯ ಜವಾಬ್ದಾರಿಯೊಂದಿಗೆ ನೇಮಿಸಿ, ಸುಮಾರು ಮೂರುವರೆ ಎಕರೆ ಜಮೀನನ್ನು ಅವರ ಕುಟುಂಬಕ್ಕೆ ಬಿಟ್ಟುಕೊಟ್ಟಿದ್ದರು. ಅದರ ಬಳಿಕ ಅಣ್ಣಯ್ಯ ಭಟ್ಟರಿಂದ ಬಂದ ಎಲ್ಲಾ ಜಮೀನನ್ನು ಅವರ ಪುತ್ರ ನಾರಾಯಣ ಭಟ್ ಖರೀದಿ ಮಾಡಿ ಸ್ವಾಧೀನಪಡಿಸಿಕೊಂಡರು. ನಾರಾಯಣ ಭಟ್ ದೇವಸ್ಥಾನ ಮತ್ತು ಜಮೀನನ್ನು ಜೀರ್ಣೋದ್ಧಾರ ಮಾಡಿ, ಪುನಃ ಗೌರವವನ್ನು ತಂದುಕೊಟ್ಟರು. ಪವರ್ ಆಫ್ ಅಟಾರ್ನಿ ಸಹ ನಾರಾಯಣ ಭಟ್ ಅವರ ಹೆಸರಲ್ಲಿ ಇತ್ತು. ಅವರು ತಮ್ಮ ತಂದೆ ಹಾಗೂ ಎಂಟು ಮಂದಿ ಸಹೋದರ-ಸಹೋದರಿಯರಿಗೆ ತಲಾ 50 ಸಾವಿರ ರೂಪಾಯಿಗಳನ್ನು ನೀಡಿ ಹಂಚಿಕೆ ಮಾಡಿದರು. ನಂತರ ನಾರಾಯಣ ಭಟ್ ಆ ಜಮೀನನ್ನು ಧರ್ಮಸ್ಥಳ ಕ್ಷೇತ್ರಕ್ಕೆ ದಾನ ಮಾಡಿದರು ಮಾಹಿತಿ ನೀಡಿದ್ದಾರೆ.
ಇದನ್ನೂ ಒದಿ: ನೋಟಿಸ್ ಕೊಡದಿದ್ದರೂ ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ಸುಜಾತಾ ಭಟ್ ಅವರ ತಂದೆ ಗುರುರಾಜ್ ಭಟ್ ಅವರಿಗೆ ತಕ್ಕ ಪ್ರಮಾಣದ ಹಣವನ್ನು ನೀಡಲಾಗಿತ್ತು. ಎಲ್ಲಾ ಆಸ್ತಿಯ ಸೈನಿಂಗ್ ಅಥಾರಿಟಿ ನಾರಾಯಣ ಭಟ್ ಅವರ ಬಳಿಯೇ ಇತ್ತು. ಆದ್ದರಿಂದ ಈಗ ಸುಜಾತಾ ಭಟ್ ಜಮೀನಿನಲ್ಲಿ ಪಾಲು ಕೇಳುವ ಹಕ್ಕು ಇಲ್ಲ ಎಂದು ಅವರು ಹೇಳಿದ್ದಾರೆ. ಸುಜಾತಾ ಭಟ್ ಪಾಲು ಕೇಳಬೇಕೆಂದಿದ್ದರೆ ತಮ್ಮ ಅಜ್ಜ, ತಂದೆ ಅಥವಾ ಚಿಕ್ಕಪ್ಪರ ಸಮಯದಲ್ಲಿ ಕೇಳಬೇಕಾಗಿತ್ತು. 2005ರವರೆಗೆ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಹಕ್ಕಿರಲಿಲ್ಲ. ಈಗ ಜಮೀನಿನಲ್ಲಿ ಸುಜಾತಾ ಭಟ್ ಪಾಲು ಕೇಳುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ್ರೆ ಆಸ್ತಿಯನ್ನು ಪಡೆಯುವ ಹೋರಾಟವೇ ಅನನ್ಯ ಭಟ್ ಎಂಬ ಪಾತ್ರವನ್ನು ಸೃಷ್ಟಿಸುವಂತೆ ಮಾಡಿತೇ ಎಂಬ ಪ್ರಶ್ನೆ ಉದ್ಭವಿಸಿದೆ, ಈ ಸಂಬಂಧ ವಿಶೇಷ ತನಿಖಾ ದಳ (ಎಸ್ಐಟಿ) ತನಿಖೆ ತೀವ್ರಗೊಳಿಸಿದ್ದು, ಸುಜಾತಾ ಭಟ್ ನೀಡಿದ ದೂರಿನ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸುತ್ತಿದೆ.



