ಕೊಪ್ಪಳ: ಹೊಲದಲ್ಲಿ ದನ ನುಗ್ಗಿತೆಂಬ ಕಾರಣಕ್ಕೆ ದಲಿತ ಮಹಿಳೆಯೊಬ್ಬರ ಮೇಲೆ ಮೇಲ್ಜಾತಿಯ ವ್ಯಕ್ತಿ ಚಪ್ಪಲಿಯಿಂದ ಹೊಡೆದ ಘಟನೆ (Dalit Assaulted In Koppala) ಕೊಪ್ಪಳದ ಕನಕಗಿರಿ ತಾಲೂಕಿನ ರಾಂಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿರುವುದು ಬೆಳಕಿಗೆ ಬಂದಿದೆ. ಆರೋಪಿ ಅಮರೇಶಪ್ಪ ಕುಂಬಾರ ಎಂಬುವನ ಹೊಲಕ್ಕೆ ಹಸು ಮೇಯಲು ಹೋಗಿತ್ತು. ಅದನ್ನು ಅಮರೇಶಪ್ಪ ಕಟ್ಟಿಹಾಕಿದ್ದ. ಹಸುವಿನ ಮಾಲಕಿ ಶೋಭಮ್ಮ ಹರಿಜನ ಅಲ್ಲಿಗೆ ಹೋದಾಗ ಆರೋಪಿ ಹಲ್ಲೆ ಎಸಗಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದನೆ ಕೂಡ ಮಾಡಿದ್ದಾನೆ. ಈ ಘಟನೆ ಫೆಬ್ರುವರಿ 3ರಂದು ಸಂಭವಿಸಿದೆ. ಗಾಯಗೊಂಡ 30 ವರ್ಷದ ದಲಿತ ಮಹಿಳೆ ಶೋಭಮ್ಮ ಅವರನ್ನು ಕೊಪ್ಪಳದ ಗಂಗಾವತಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಶೋಭಮ್ಮರ ಮೇಲೆ ಅಮರೇಶಪ್ಪ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಕೂಡ ಆಗಿದೆ. ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ಎಸ್ಸಿ ಎಸ್ಟಿ ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿದ್ದೇವೆ. ತನ್ನ ಹಸುವನ್ನು ಬಿಡಿಸಿಕೊಳ್ಳಲು ಮಹಿಳೆಯು ಅರೋಪಿ ಅಮರೇಶನ ಮನೆಗೆ ಹೋದಾಗ ಆತನ ಚಪ್ಪಲಿಯಿಂದ ಹೊಡೆದಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆಕೆಯ ಸಮುದಾಯವನ್ನು ಅವಮಾನ ಮಾಡಿದ್ದಾನೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಈ ಘಟನೆ ಬಳಿಕ ಮಹಿಳೆಯ ಸಂಬಂಧಿಕರು ಅಮರೇಶ ಮನೆಗೆ ಹೋಗಿ ಮಾತನಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Hassan: ಕಾಫಿ ಬೀಜ ಕದ್ದನೆಂದು ಆರೋಪಿಸಿ ಮರಕ್ಕೆ ಕಟ್ಟಿ ಹಾಕಿ ದಲಿತ ಯುವಕನ ಮೇಲೆ ಮನಬಂದಂತೆ ದೌರ್ಜನ್ಯ, ಐವರು ಅರೆಸ್ಟ್
ಆರೋಪಿ ಅಮರೇಶ ಕುಂಬಾರನ ಈ ವರ್ತನೆ ಅದೇ ಹೊಸತಲ್ಲ ಎಂಬುದು ಹಲ್ಲೆಗೊಳಗಾದ ದಲಿತ ಮಹಿಳೆಯ ಕುಟುಂಬಸ್ಥರು ಹೇಳುವ ಮಾತು. ಆತ ಮೊದಲಿಂದಲೂ ದಲಿತ ಸಮುದಾಯವನ್ನು ನಿಂದಿಸುತ್ತಾ ಬರುತ್ತಿದ್ದಾನೆ. ಆತನ ಮೇಲೆ ಕ್ರಮ ಜರುಗಿಸಬೇಕು ಎಂದು ಗ್ರಾಮದ ದಲಿತರು ಒತ್ತಾಯಿಸಿದ್ದಾರೆ.
ದಲಿತರ ಮೇಲೆ ನಿಲ್ಲದ ದೌರ್ಜನ್ಯ
ರಾಜ್ಯದಲ್ಲಿ ವಿವಿಧೆಡೆ ದಲಿತರ ಮೇಲೆ ಸವರ್ಣೀಯರು ದೌರ್ಜನ್ಯ ಎಸಗುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇವೆ. ಕೊಪ್ಪಳದ ಈ ಮೇಲಿನ ಘಟನೆಯ ರೀತಿಯಲ್ಲೇ ಕಳೆದ ವಾರ ಹಾಸನದಲ್ಲಿ ನಡೆದಿತ್ತು. ಕಾಫಿ ಬೀಜ ಕದಿಯಲು ಬಂದಿದ್ದ ಎಂದು ಆರೋಪಿಸಿ ಕಾಫಿ ತೋಟದ ಮಾಲೀಕರು ಯುವಕನೊಬ್ಬನನ್ನು ಹಿಡಿದು ಕೈಕಾಲು ಕಟ್ಟಿ ಅಮಾನವೀಯವಾಗಿ ಥಳಿಸಿದ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೆಹಳ್ಳಿ ಬಳಿಯ ಬೆಳ್ಳಾವರ ಗ್ರಾಮದಲ್ಲಿ ನಡೆದಿತ್ತು.
ಇದನ್ನೂ ಓದಿ: ಕಲಬುರಗಿ: ಮಾರಕಾಸ್ತ್ರದಿಂದ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ, ಆರೋಪಿ ಮೇಲೆ ಫೈರಿಂಗ್
ಆ ದಲಿತ ಯುವಕನ ಮೇಲೆ ಹಲವಾರು ಮಂದಿ ಸೇರಿ ಮನಬಂದಂತೆ ಹಲ್ಲೆ ಎಸಗಿದ್ದರು. ನಾಯಿಯಿಂದಲೂ ಆತನ ಮೇಲೆ ದಾಳಿ ಮಾಡಿಸಿದ ಪೈಶಾಚಿಕ ಘಟನೆ ನಡೆದಿತ್ತು. ಪೊಲೀಸರು ಆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದರು.
ಗೋಮೂತ್ರದಿಂದ ನೀರಿನ ತೊಟ್ಟಿ ಸ್ವಚ್ಛ
ದಲಿತ ಮಹಿಳೆಯೊಬ್ಬಳು ನೀರು ಕುಡಿದಳೆಂದು ನೀರಿನ ತೊಟ್ಟಿಯನ್ನು ಗೋಮೂತ್ರ ಹಾಕಿ ಸ್ವಚ್ಛಗೊಳಿಸಿದ ಘಟನೆಯೂ ಇತ್ತೀಚೆಗೆ ಚಾಮರಾಜನಗರದ ಹೆಗ್ಗೋತರ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ. ಆ ಘಟನೆ ನಡೆದ ಬಳಿಕ ಚಾಮರಾಜನಗರದ ತಹಶೀಲ್ದಾರ್ ಬಸವರಾಜು ಮತ್ತು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ನೇತೃತ್ವದಲ್ಲಿ ದಲಿತ ಸಮುದಾಯದವರು ಎಲ್ಲಾ ನೀರಿನ ತೊಟ್ಟಿಗಳಿಗೂ ಹೋಗಿ ನೀರು ಕುಡಿದು ಬಂದಿದ್ದರು.
Published On - 9:19 am, Mon, 6 February 23