ಕಲಬುರಗಿ: ಮಾರಕಾಸ್ತ್ರದಿಂದ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ, ಆರೋಪಿ ಮೇಲೆ ಫೈರಿಂಗ್
ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕ ಕರ ಮೇಲೆ ಹಲ್ಲೆಗೆ ಯತ್ನಿಸಿದ್ದ ವ್ಯಕ್ತಿಯ ಮೇಲೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಲಬುರಗಿ: ಮಾರಕಾಸ್ತ್ರಗಳನ್ನು ಹಿಡಿದ ಜನಬಿಡ ಪ್ರದೇಶಕ್ಕೆ ಬಂದ ವ್ಯಕ್ತಿಯೊಬ್ಬ ಸಾರ್ವಜನಿಕಕರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ತಿಳಿದ ಚೌಕ್ ಠಾಣೆ ಪೊಲೀಸರು ಸಾರ್ವಜನಿಕರ ರಕ್ಷಣೆಗಾಗಿ ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ (Police Firing). ಗಂಡೇಟು ತಿಂದ ಆರೋಪಿ ಅಬ್ದುಲ್ ಜಾಫರ್ ಪೊಲೀಸರು ಜಿಮ್ಸ್ ಆಸ್ಪತ್ರೆಗೆ ಸೇರಿಸಿದ್ದು, ಚೇತರಿಕೆ ನಂತರ ಜೈಲಿಗಟ್ಟಲಿದ್ದಾರೆ.
ಕಲಬುರಗಿ ನಗರದ ಸೂಪರ್ ಮಾರ್ಕೇಟ್ಗೆ ರಾತ್ರಿ 8 ಗಂಟೆ ಸುಮಾರಿಗೆ ಮಾರಕಾಸ್ತ್ರಸಹಿತ ನುಗ್ಗಿದ ವ್ಯಕ್ತಿ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ ನಡೆಸಿ ಭೀತಿ ಹುಟ್ಟಿಸಿದ್ದಾನೆ. ಈತನ ಹುಚ್ಚಾಟಕ್ಕೆ ಬೆಚ್ಚಿಬಿದ್ದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಚೌಕ್ ಠಾಣೆ ಪಿಎಸ್ಐ ವಹೀದ್ ಕೊತ್ವಾಲ್ ಮತ್ತು ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಶರಣಾಗುವಂತೆ ಆರೋಪಿಗೆ ಸೂಚಿಸಿದ್ದಾರೆ. ಆದರೆ ತಮ್ಮ ಮೇಲೆ ದಾಳಿ ಮಾಡುವ ವಾತಾವರಣ ತಿಳಿದ ಪಿಎಸ್ಐ ತಮ್ಮ ಹಾಗೂ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತಿನ ಗುಂಡು ಹಾರಿಸುತ್ತಾರೆ. ಇದಕ್ಕೂ ಜಗ್ಗದಿದ್ದಾಗ ಪಿಎಸ್ಐ ವಹೀದ್ ಕೊತ್ವಾಲ್ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಇದನ್ನೂ ಓದಿ: ಉಡುಪಿ: ಚಾಕು ಇರಿದು ವ್ಯಕ್ತಿಯ ಬರ್ಬರ ಹತ್ಯೆ: ವ್ಯವಹಾರ ವೈಷಮ್ಯ ಕೊಲೆ ಶಂಕೆ
ಗುಂಡೇಟಿನಿಂದ ಸ್ಥಳದಲ್ಲಿ ಕುಸಿದುಬಿದ್ದ ಆರೋಪಿಗೆ ಪೊಲೀಸರು ಹಿಗ್ಗಾಮುಗ್ಗ ಲಾಠಿ ರುಚಿ ತೋರಿಸಿದರು. ಬಳಿಕ ವಶಕ್ಕೆ ಪಡೆದು ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಬಂಧಿತ ಅಬ್ದುಲ್ ಜಾಫರ್ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾದರೂ ಯಾಕೆ ಎಂಬ ವಿಚಾರ ಇನ್ನಷ್ಟೇ ತಿಳಿದುಬರಬೇಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ರಾತ್ರಿ 8 ಗಂಟೆ ಸುಮಾರಿಗೆ ಮಾರ್ಕೆಟ್ಗೆ ಬಂದ ವ್ಯಕ್ತಿ ಎರಡು ಕೈಯಲ್ಲಿ ಚಾಕು ಹಿಡಿದುಕೊಂಡು ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಶರಣಾಗುವಂತೆ ಹೇಳಿದರೂ ಶರಣಾಗಿಲ್ಲ. ಬದಲಾಗಿ ಸಿಬ್ಬಂದಿ ಮೇಲೆ ಕೊಲೆ ಯತ್ನ ನಡೆಸಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಚೇತನ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ